ಮಡಿಕೇರಿ, ನ. ೧೯: ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯಿಂದ ಮಧುಮೇಹದ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವಿಶೇಷ ಗಮನ ಹರಿಸಿದೆ.
ಅಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ರಾಷ್ಟಿçÃಯ ಕಾರ್ಯಕ್ರಮದಡಿ (ಎನ್ಪಿ-ಎನ್ಸಿಡಿ) ೩೦ ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ, ಕಾಯಿಲೆಯ ಆರಂಭಿಕ ಪತ್ತೆ ಹಾಗೂ ನಿರಂತರ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶ್ರೀನಿವಾಸ್ ಅವರು ತಿಳಿಸಿದ್ದಾರೆ. ಮಧುಮೇಹವು ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುವ ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿದ್ದು, ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದಿರುವ ಸಾಧ್ಯತೆಯಿದೆ. ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ವಿಪರೀತ ಹಸಿವು, ಸುಸ್ತು, ಅನಿರೀಕ್ಷಿತ ತೂಕ ಇಳಿಕೆ, ದೃಷ್ಟಿ ಮಂದವಾಗುವುದು ಹಾಗೂ ಗಾಯಗಳು ನಿಧಾನವಾಗಿ ವಾಸಿಯಾಗುವುದು ಪ್ರಮುಖ ಲಕ್ಷಣಗಳಾಗಿವೆ.
ತಪಾಸಣೆಯಲ್ಲಿ ಶೇ.೮೭ರಷ್ಟು ಸಾಧನೆ: ೨೦೨೫ರ ಏಪ್ರಿಲ್ನಿಂದ ೨೦೨೬ರ ಮಾರ್ಚ್ವರೆಗೆ ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮಧುಮೇಹ ಪತ್ತೆಗಾಗಿ ೨,೩೧,೭೯೬ ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಇದು ನಿಗದಿತ ಗುರಿಯ ಶೇ.೮೭ರಷ್ಟಾಗಿದೆ. ಈ ಅವಧಿಯಲ್ಲಿ ಒಟ್ಟು ೩೬,೨೪೭ ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.
೨೦೨೬ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ೮೫,೧೦೧ ಮಂದಿಗೆ ತಪಾಸಣೆ ನಡೆಸಲಾಗಿದ್ದು, ೪,೪೬೪ ಮಂದಿಯಲ್ಲಿ ಹೊಸದಾಗಿ ಮಧುಮೇಹ ಗುರುತಿಸಲಾಗಿದೆ. ಇದೇ ಅವಧಿಯಲ್ಲಿ ೮೧,೩೧೪ ಮಂದಿಗೆ ಅಧಿಕ ರಕ್ತದೊತ್ತಡ ತಪಾಸಣೆ ನಡೆಸಿ, ೭,೦೭೯ ಮಂದಿಯಲ್ಲಿ ಕಾಯಿಲೆ ಪತ್ತೆಹಚ್ಚಲಾಗಿದೆ ಎಂದು ಡಾ.ಶ್ರೀನಿವಾಸ್ ಅವರು ಮಾಹಿತಿ ನೀಡಿದರು. ಪತ್ತೆಯಾದ ರೋಗಿಗಳಿಗೆ ಶೇ.೧೦೦ರಷ್ಟು ಚಿಕಿತ್ಸಾ ಅನುಸರಣೆ: ಮಧುಮೇಹ ಪತ್ತೆಹಚ್ಚುವುದರ ಜೊತೆಗೆ ರೋಗಿಗಳಿಗೆ ನಿರಂತರ ಚಿಕಿತ್ಸೆ ಒದಗಿಸುವುದಕ್ಕೂ ಆರೋಗ್ಯ ಇಲಾಖೆ ಆದ್ಯತೆ ನೀಡಿದೆ. ೨೦೨೬ರ ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ವರದಿಯಂತೆ, ಜಿಲ್ಲೆಯಲ್ಲಿ ೩೬,೨೭೩ ಮಧುಮೇಹ ರೋಗಿಗಳನ್ನು ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದೆ. ಇವರಲ್ಲಿ ೩೦,೮೯೭ ಮಂದಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊAಡಿದ್ದು, ನಿಯಂತ್ರಣದ ಪ್ರಮಾಣ ಶೇ.೮೫ರಷ್ಟಿದೆ.
ತಾಲ್ಲೂಕುವಾರು ಮಧುಮೇಹ ನಿಯಂತ್ರಣದ ಪ್ರಮಾಣ ಮಡಿಕೇರಿ ಶೇ.೮೧, ಸೋಮವಾರಪೇಟೆ ಶೇ.೮೬, ಕುಶಾಲನಗರ ಶೇ.೮೫, ವಿರಾಜಪೇಟೆ ಶೇ.೮೬ ಹಾಗೂ ಪೊನ್ನಂಪೇಟೆ ಶೇ.೮೮ರಷ್ಟಿದೆ. ಅಧಿಕ ರಕ್ತದೊತ್ತಡದ ೫೭,೩೯೯ ರೋಗಿಗಳನ್ನೂ ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದೆ.
ತಪಾಸಣೆ: ಗೃಹ ಆರೋಗ್ಯ ಯೋಜನೆಯಡಿ ೨೦೨೫ರ ಆಗಸ್ಟ್ನಿಂದ ೨೦೨೬ರ ಅಕ್ಟೋಬರ್ವರೆಗೆ ಜಿಲ್ಲೆಯಲ್ಲಿ ೨,೪೦,೨೮೩ ಮಂದಿಯನ್ನು ಮಧುಮೇಹ ತಪಾಸಣೆಗೊಳಪಡಿಸಲಾಗಿದೆ. ಈ ಪೈಕಿ ೩,೬೬೪ ಮಂದಿಯಲ್ಲಿ ಹೊಸದಾಗಿ ಮಧುಮೇಹ ಪತ್ತೆಯಾಗಿದೆ. ಈಗಾಗಲೇ ಕಾಯಿಲೆ ಹೊಂದಿದ್ದವರನ್ನು ಸೇರಿಸಿ ಒಟ್ಟು ೩೪,೮೩೭ ಮಂದಿ ಚಿಕಿತ್ಸೆಯಲ್ಲಿದ್ದಾರೆ. ಅಧಿಕ ರಕ್ತದೊತ್ತಡಕ್ಕೆ ಸಂಬAಧಿಸಿದAತೆ ೨,೩೭,೭೪೦ ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಒಟ್ಟು ೪೭,೮೪೦ ಮಂದಿ ಚಿಕಿತ್ಸೆಯಲ್ಲಿದ್ದಾರೆ. ಮನೆಮಟ್ಟದಲ್ಲಿ ಕಾಯಿಲೆಗಳನ್ನು ಗುರುತಿಸಿ ಸೂಕ್ತ ವೈದ್ಯಕೀಯ ಸೇವೆ ಒದಗಿಸುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂದು ಡಾ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಜೀವನ ಶೈಲಿಯಲ್ಲಿ ಬದಲಾವಣೆ ಅಗತ್ಯ: ಮಧುಮೇಹ ನಿಯಂತ್ರಣಕ್ಕೆ ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ ಹಾಗೂ ದೈಹಿಕ ಚಟುವಟಿಕೆ ಅತ್ಯಗತ್ಯ ಎಂದು ಡಾ.ಶ್ರೀನಿವಾಸ್ ಅವರು ಸಲಹೆ ನೀಡಿದ್ದಾರೆ. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆ ಕಡಿಮೆ ಮಾಡಿ, ತರಕಾರಿ, ಸೊಪ್ಪು ಹಾಗೂ ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಪ್ರತಿದಿನ ಕನಿಷ್ಟ ೩೦ ನಿಮಿಷ ನಡಿಗೆ ಅಥವಾ ವ್ಯಾಯಾಮ ಮಾಡುವುದು, ದೇಹದ ತೂಕ ನಿಯಂತ್ರಿಸುವುದು ಹಾಗೂ ವೈದ್ಯರ ಸಲಹೆಯಂತೆ ಔಷಧಿ ಪಡೆಯುವುದು ಮುಖ್ಯ. ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮತ್ತು ಎಚ್ಬಿಎ೧ಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿ ನಿಲ್ಲಿಸಬಾರದು. ಮಧುಮೇಹ ನಿಯಂತ್ರಣದಲ್ಲಿರದಿದ್ದರೆ ಹೃದಯ, ಮೂತ್ರಪಿಂಡ, ಕಣ್ಣು ಹಾಗೂ ನರಗಳಿಗೆ ಸಂಬAಧಿಸಿದ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.
ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಮೂಲಕ ನಡೆಯುತ್ತಿರುವ ತಪಾಸಣೆ, ಆರಂಭಿಕ ಪತ್ತೆ ಹಾಗೂ ಚಿಕಿತ್ಸಾ ಅನುಸರಣೆ ಕಾರ್ಯಗಳು ಮಧುಮೇಹ ನಿಯಂತ್ರಣದಲ್ಲಿ ಮಹತ್ವ ಪಡೆದಿವೆ. ಸರ್ಕಾರಿ ಆರೋಗ್ಯ ಸೇವೆಗಳ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದರು. ವಿಶೇಷವಾಗಿ ೩೦ ವರ್ಷ ಮೇಲ್ಪಟ್ಟವರು ಹಾಗೂ ಕುಟುಂಬದಲ್ಲಿ ಮಧುಮೇಹದ ಹಿನ್ನೆಲೆ ಹೊಂದಿರುವವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಾಯಿಲೆ ಉಲ್ಬಣಿಸಿದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಆರಂಭದಲ್ಲೇ ಪತ್ತೆಹಚ್ಚಿ ನಿಯಂತ್ರಿಸುವುದು ಉತ್ತಮ. ಅರಿವು, ಮುನ್ನೆಚ್ಚರಿಕೆ ಮತ್ತು ನಿರಂತರ ಚಿಕಿತ್ಸೆಯೇ ಮಧುಮೇಹ ಮುಕ್ತ ಆರೋಗ್ಯಕರ ಬದುಕಿನ ಪ್ರಮುಖ ಮಾರ್ಗವಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿಯಲ್ಲಿ ನಡೆದ ಪ್ರಜಾಸೇವಾ ಅಭಿಯಾನ ಸಂದರ್ಭದಲ್ಲಿ ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಲಾಯಿತು.