ಕಡAಗ, ನ. ೧೯: ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು ೨೦೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಗಾಯನ, ನೃತ್ಯ, ಭಾಷಣ, ಕಥೆ ಹೇಳುವುದು, ಚಿತ್ರಕಲೆ ಸೇರಿದಂತೆ ಬಹುತೇಕ ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಕಾರ್ಯಕ್ರಮವು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಸ್ಪರ್ಧಾ ಮನೋಭಾವ ಹಾಗೂ ಕಲಾತ್ಮಕ ಆಸಕ್ತಿಯನ್ನು ಬೆಳೆಸಲು ಉತ್ತಮ ಅವಕಾಶವಾಯಿತು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದರು.
ಒಟ್ಟಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕ ಸಲಾಂ ಎಂ.ಕೆ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳ್ಳಲು ಇಂತಹ ವೇದಿಕೆಗಳು ಸೂಕ್ತವಾಗಿದೆ ಇದರಿಂದ ನಮ್ಮಿಂದಾಗುವ ಸಹಾಯ ಸದಾ ಇರುತ್ತದೆ ಎಂದರು.
ಸ್ಥಳದಾನಿ ಕುಟುಂಬದ ಸದಸ್ಯರಾದ ಕೆ. ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆಗಳು ಅಡಗಿಕೊಂಡಿರುತ್ತದೆ ಇದನ್ನು ಶಿಕ್ಷಕರು ಮತ್ತು ಪೋಷಕರು ಅರಿತು ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದರು
ವೇದಿಕೆಯಲ್ಲಿ ಅಬೂಬಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಭವ್ಯಶ್ರೀ, ಗಫೂರ್ ಉಪಸ್ಥಿತರಿದ್ದರು, ಪವಿತ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ವತ್ಸಲ ನಿರೂಪಿಸಿ, ಮುಖ್ಯಶಿಕ್ಷಕಿ ಹೇಮಾವತಿ ವಂದಿಸಿದರು. ಬಹುಮಾನ ವಿತರಣೆಯನ್ನು ಬಬಿತ, ಶೋಭಾ, ಸೈಬನ್ನಿಸ ಹಾಗೂ ಅತಿಥಿ ಶಿಕ್ಷಕಿ ಅಸಿಯಮ್ಮ ನಡೆಸಿಕೊಟ್ಟರು.