ಪೊನ್ನಂಪೇಟೆ, ನ. ೧೮: ದಕ್ಷಿಣ ಕೊಡಗಿನ ವಾಣಿಜ್ಯ ನಗರಿ ಗೋಣಿಕೊಪ್ಪದಲ್ಲಿ ಸುಂದರ ಪರಿಸರದ ನಡುವೆ ವಿಶಾಲ ಕೊಡವ ಸಮಾಜ ನಿರ್ಮಾಣವಾಗುತ್ತಿದ್ದು, ಈ ಭಾಗದ ಕೊಡವರ ಹಲವು ವರ್ಷಗಳ ಕನಸು ಶೀಘ್ರದಲ್ಲೇ ನನಸಾಗುತ್ತಿದೆ.
ಗೋಣಿಕೊಪ್ಪ ಸಮೀಪದ ಕೈಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಗೋಣಿಕೊಪ್ಪ ಕೊಡವ ಸಮಾಜವು ಮುಂಬರುವ ದಿನಗಳಲ್ಲಿ ಕೊಡವ ಸಮಾಜಗಳ ಪೈಕಿ ಅತ್ಯಂತ ಅನುಕೂಲಕರ, ವಿಶಾಲ ಹಾಗೂ ಅತ್ಯುತ್ತಮ ಸಮಾಜವಾಗಿ ಹೊರಹೊಮ್ಮಲಿದೆ. ಸುಮಾರು ೫ ಎಕರೆ ಸ್ವಂತ ಜಾಗದಲ್ಲಿ ನಿರ್ಮಾಣವಾಗುತ್ತಿದೆ.
ಸಮಾಜದ ಮುಖ್ಯ ಸಭಾಭವನವು ಬರೋಬ್ಬರಿ ೨೪,೦೦೦ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಒಮ್ಮೆಗೆ ಕನಿಷ್ಟ ೧೦೦೦ ಮಂದಿ ಕುಳಿತುಕೊಳ್ಳಬಹುದಾಗಿದೆ. ಊಟದ ಹಾಲ್, ಅಡುಗೆ ಮನೆ ಹಾಗೂ ಶೌಚಾಲಯಗಳ ನಿರ್ಮಾಣ ಪೂರ್ಣಗೊಂಡ ನಂತರ ಅವು ಸುಮಾರು ೧ ಎಕರೆ ಜಾಗವನ್ನು ಆಕ್ರಮಿಸಿಕೊಳ್ಳಲಿದ್ದು, ಉಳಿದ ೪ ಎಕರೆ ಜಾಗ ಸಂಪೂರ್ಣವಾಗಿ ವಾಹನ ನಿಲುಗಡೆಗೆ ಮೀಸಲಾಗಲಿದೆ. ಎರಡು ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಹೊಂದಿರುವ ಈ ಸಮಾಜದಲ್ಲಿ ಜನದಟ್ಟಣೆಯ ಸಂದರ್ಭದಲ್ಲೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಸದ್ಯ ಮುಖ್ಯ ಸಭಾಭವನದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಊಟದ ಹಾಲ್, ಅಡುಗೆ ಮನೆ ಹಾಗೂ ಶೌಚಾಲಯಗಳ ಕಾಮಗಾರಿ ಪೂರ್ಣಗೊಂಡು ಸಮಾಜ ಸಂಪೂರ್ಣವಾಗಿ ಅತಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಪೂರ್ಣಗೊಂಡ ಬಳಿಕ ಗೋಣಿಕೊಪ್ಪಲು ಕೊಡವ ಸಮಾಜವು ದಕ್ಷಿಣ ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶದ ಸಮಸ್ತ ಕೊಡವ ಸಮುದಾಯಕ್ಕೆ ಸೇವೆ ಸಲ್ಲಿಸಲಿದೆ.
ಈ ಕುರಿತು ಆಡಳಿತ ಮಂಡಳಿ ಅಧ್ಯಕ್ಷ ಅಜ್ಜಿಕುಟ್ಟೀರ ಸಿ. ಪೂಣಚ್ಚ ಮಾತನಾಡಿ, ಇದೇ ತಾ. ೨೧ ರಂದು ನಡೆಯುವ ಮಹಾಸಭೆಗೆ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಂಟಿ ಖಜಾಂಚಿ ಸಣ್ಣುವಂಡ ವಿಶ್ವನಾಥ್ ಮಾತನಾಡಿ, ಗೋಣಿಕೊಪ್ಪದಲ್ಲಿ ಕೊಡವ ಸಮಾಜ ಇಲ್ಲ ಎಂಬ ಕೊರತೆ ಇತ್ತು. ಅದಕ್ಕಾಗಿ ೫ ಎಕರೆ ಜಾಗವನ್ನು ಸಂಸ್ಥೆಯಿAದಲೇ ಖರೀದಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಟ್ಟಡ ನಿರ್ಮಾಣಕ್ಕೆ ಸುಮಾರು ರೂ. ೮ ಕೋಟಿಗೂ ಅಧಿಕ ಹಣ ಖರ್ಚಾಗಲಿದೆ. ಕಟ್ಟಡ ಪೂರ್ಣಗೊಂಡಲ್ಲಿ ಕೊಡವ ಜನಾಂಗದವರಿಗೆ ಮದುವೆ ಇನ್ನಿತರ ಸಮಾರಂಭ ಮಾಡಲು ಅನುಕೂಲವಾಗಲಿದೆ ಎಂದರು. ಜಂಟಿ ಕಾರ್ಯದರ್ಶಿ ಬಲ್ಲಣಮಾಡ ರೀಟಾ ದೇಚಮ್ಮ ಮಾತನಾಡಿ, ಗೋಣಿಕೊಪ್ಪದಲ್ಲಿ ಇಂತಹ ದೊಡ್ಡ ಕೊಡವ ಸಮಾಜ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯ. ಜನಾಂಗ ಬಾಂಧವರು ಮಹಾಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕಾರ ನೀಡಬೇಕು ಎಂದು ಕೋರಿದರು.
ಆಡಳಿತ ಮಂಡಳಿ ಪದಾಧಿಕಾರಿಗಳು
ಅಧ್ಯಕ್ಷರಾಗಿ ಅಜ್ಜಿಕುಟ್ಟೀರ ಸಿ. ಪೂಣಚ್ಚ, ಉಪಾಧ್ಯಕ್ಷರಾಗಿ ಚೆಪ್ಪುಡಿರ ಪ್ರಥ್ವಿ ಪೂಣಚ್ಚ, ಗೌರವ ಕಾರ್ಯದರ್ಶಿಯಾಗಿ ಚೊಟ್ಟೆಯಂಡಮಾಡ ಡಿ. ಮಾದಪ್ಪ, ಜಂಟಿ ಕಾರ್ಯದರ್ಶಿಯಾಗಿ ಬಲ್ಲಣಮಾಡ ರೀಟಾ ದೇಚಮ್ಮ, ಖಜಾಂಚಿಯಾಗಿ ಕೊಕ್ಕಂಡ ಕುಶ ಬಿದ್ದಪ್ಪ, ಜಂಟಿ ಖಜಾಂಚಿಯಾಗಿ ಸಣ್ಣುವಂಡ ಎಂ. ವಿಶ್ವನಾಥ್, ನಿರ್ದೇಶಕರಾಗಿ ಕಟ್ಟೆರ ಎನ್. ಅಚ್ಚಪ್ಪ, ಜಮ್ಮಡ ಮೋಹನ್, ಕುಪ್ಪಂಡ ಗಿರಿ ಪೂವಣ್ಣ, ಕೊಲ್ಲಿರ ಧರ್ಮಜ, ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ, ಮಲ್ಲಮಾಡ ಪ್ರಭು ಪೂಣಚ್ಚ, ಜಮ್ಮಡ ಗಣೇಶ್ ಅಯ್ಯಣ್ಣ, ಕಡೆಮಾಡ ಮುತ್ತಪ್ಪ (ಸಿವಿಲ್ ಇಂಜಿನಿಯರ್), ಕೊಣಿಯಂಡ ಬೋಜಮ್ಮ ಉತ್ತಪ್ಪ, ಖಾಯಂ ಗೌರವ ಆಹ್ವಾನಿತರಾಗಿ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ವರದಿ : ಚನ್ನನಾಯಕ