ಕರಿಕೆ, ನ. ೧೮: ಕೊಡಗಿನ ಗಡಿಗ್ರಾಮ ಕರಿಕೆಯ ಚೆತ್ತುಕಾಯ ಬಳಿಯ ಪಟ್ಟಿಘಾಟ್ ಮೀಸಲು ಅರಣ್ಯದೊಳಗಿನ ಕರೀಂಬಳಾಪು ಹಾಡಿಯು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹಾಡಿ ಜನತೆ ಕಾಡಿನಲ್ಲಿ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಕರಿಕೆ ಕೇಂದ್ರ ಸ್ಥಾನದಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ದಟ್ಟ ಮೀಸಲು ಅರಣ್ಯದ ಮಧ್ಯೆ ೩ ಕುಟುಂಬ ೧೧೫ ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದು, ಅಡಿಕೆ, ತೆಂಗು, ಕಾಳುಮೆಣಸು ಕೃಷಿ ಮಾಡಿಕೊಂಡಿದ್ದು ಪರಿಶಿಷ್ಟ ಜಾತಿಯ ಪಾಲೆ ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಕೆಲವರಿಗೆ ಪಡಿತರ ಚೀಟಿ ಕೂಡ ಇಲ್ಲ. ಇದರ ಒತ್ತಿನಲ್ಲಿ ಇದೇ ಜನಾಂಗದ ಕರೀಂಬಳಾಪು ಹೆಸರಿನ ಇನ್ನೊಂದು ಹಾಡಿ ಇದು, ಈ ಹಿಂದೆ ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿದ್ದ ಶಾಂತೆಯAಡ ರವಿ ಕುಶಾಲಪ್ಪ ಅವರ ವಿಶೇಷ ಪ್ರಯತ್ನದಿಂದ ಅಂದಿನ ಜಿಲ್ಲಾಧಿಕಾರಿ ಬಿ.ಸಿ. ಸತೀಶ್ ಹಾಗೂ ಉಪ ವಿಭಾಗ ಅಧಿಕಾರಿ ಯತೀಶ್ ಉಳ್ಳಾಲ ಅವರ ನೇತೃತ್ವದಲ್ಲಿ ೨೨ ಕುಟುಂಬಕ್ಕೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲಾಗಿದ್ದು, ಇಲ್ಲಿ ರಸ್ತೆ, ವಿದ್ಯುತ್, ಸೇತುವೆ ಕಾಮಗಾರಿಯಾಗಿದೆ. ಆದರೆ ಪೂಬಳಾಪು ಹಾಡಿಯ ಜನತೆ ಮಾತ್ರ ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗೆ ಮರಗಳ ಸಹಾಯದಿಂದ ಬಿದಿರು ಬಳಸಿ ಅಪಾಯಕಾರಿ ಸ್ಥಿತಿಯಲ್ಲಿ ಪಾಲ ನಿರ್ಮಾಣ ಮಾಡಿ ಮಕ್ಕಳು, ವಯಸ್ಕರು ಜೀವಭಯದಿಂದ ದಾಟುತಿದ್ದು, ಮಾತ್ರವಲ್ಲದೆ ಸೀಮೆಎಣ್ಣೆ ಸಿಗದೆ, ವಿದ್ಯುತ್ ಇಲ್ಲದೆ ಡೀಸೆಲ್ ಬಳಸಿ ದೀಪ ಉರಿಸುತ್ತಿದ್ದು, ಇನ್ನು ವಿದ್ಯುತ್ ಬೆಳಕು ಕಂಡಿಲ್ಲ.

ಸರಕಾರದಲ್ಲಿ ಬಡವರಿಗೆ, ಹಿಂದುಳಿದ ಜನತೆಗೆ ಸಾಕಷ್ಟು ಯೋಜನೆಗಳಿದ್ದರೂ ಈ ಹಾಡಿಗೆ ಮಾತ್ರ ಯಾವುದೇ ಸೌಲಭ್ಯವಿಲ್ಲದಿರುವುದು ಆಡಳಿತ ವೈಖರಿಗೆ ಸಾಕ್ಷಿಯಾಗಿದೆ. ಕೂಡಲೇ ಸರಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಹಾಡಿಯ ಜನತೆಗೆ ಮೂಲಸೌಕರ್ಯ ಒದಗಿಸಲು ಕೂಡಲೇ ಕ್ರಮ ವಹಿಸಬೇಕಿದೆ.