ಮಡಿಕೇರಿ, ನ. ೧೮: ನಿವೃತ್ತ ಪೊಲೀಸರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕೆಂದು ನಿವೃತ್ತ ಎಸಿಪಿ ಟೈಗರ್ ಬಿ.ಬಿ, ಅಶೋಕ್ ಕುಮಾರ್ ಕರೆ ನೀಡಿದರು.
ನಗರದ ಮೈತ್ರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆಯಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕಾದರೆ ಅಹಂಕಾರ ಹಾಗೂ ಹೊಟ್ಟೆಕಿಚ್ಚಿನಂತಹ ಮನೋಭಾವವನ್ನು ನಿಯಂತ್ರಿಸಬೇಕು. ಪಂಚೇAದ್ರಿಯಗಳನ್ನು ನಿಯಂತ್ರಿಸುವ ಶಕ್ತಿ ಬುದ್ಧಿಗಿದ್ದು, ಬುದ್ದಿಯ ಮೇಲೆ ನಿಗಾವಹಿಸಬೇಕು. ಮಹಿಳೆಯರಿಗೆ ಗೌರವ ನೀಡಬೇಕು. ಬದುಕಿನ ಪಾಠವನ್ನು ಯಾವುದೇ ವಿಶ್ವವಿದ್ಯಾನಿಲಯ ಕಲಿಸುವುದಿಲ್ಲ; ಜೀವನವೇ ಕಲಿಸುತ್ತದೆ ಎಂದರು.
ಪೊಲೀಸರು, ವಕೀಲರು ಹಾಗೂ ವೈದ್ಯರಂತಹ ವೃತ್ತಿಗಳಲ್ಲಿ ವೃತ್ತಿಪರತೆ ಅತ್ಯಂತ ಮುಖ್ಯ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸ ಬೇಕು. ಆಹಾರ ಪದ್ಧತಿಯೇ ಆರೋಗ್ಯದ ಮೂಲವಾಗಿದ್ದು, ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿದ್ದು, ನಿಯಮಿತ ದೈಹಿಕ ವ್ಯಾಯಮದೊಂದಿಗೆ ಚಟುವಟಿಕೆಯಿಂದ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಬಿ. ಬೆಟ್ಟೇಗೌಡ, ಕೊಡಗು ದೇಶಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಅವರಂತಹ ಮಹಾನ್ ಸೇನಾನಿಗಳನ್ನು ನೀಡಿದ ವಿಶೇಷ ಜಿಲ್ಲೆ. ಪೊಲೀಸ್ ಅಧಿಕಾರಿಗಳು ಸೇವಾವಧಿಯಲ್ಲಿ ಹಲವು ಕಷ್ಟ, ಸವಾಲುಗಳನ್ನು ಎದುರಿಸುತ್ತಾರೆ. ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ದಿನದ ೨೪ ಗಂಟೆಯೂ ಕರ್ತವ್ಯಕ್ಕೆ ಸಿದ್ಧರಾಗಿರುತ್ತಾರೆ. ಆದರೆ ನಿವೃತ್ತಿಯ ನಂತರ ಅವರಿಗೆ ದೊರೆಯಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಲಭಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಧನರಾದ ಪೊಲೀಸ್ ಸಿಬ್ಬಂದಿಯ ಅಂತ್ಯಕ್ರಿಯೆ ವೆಚ್ಚಕ್ಕಾಗಿ ಪ್ರಸ್ತುತ ನೀಡಲಾಗುತ್ತಿರುವ ೧೦ ಸಾವಿರ ರೂ. ಸಹಾಯಧನವನ್ನು ೨೦ ಸಾವಿರ ರೂ.ಗೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಿವೃತ್ತ ಪೊಲೀಸರನ್ನು ಇಲಾಖೆಯ ಮಾಹಿತಿದಾರರನ್ನಾಗಿ ಬಳಸಿಕೊಳ್ಳುವ ಅವಕಾಶವಿದೆ. ಸಂಘದ ಸದಸ್ಯರು ಒಗ್ಗಟ್ಟಿನಿಂದ ಸಂಘಟನಾತ್ಮಕ ಬೆಳವಣಿಗೆಗೆ ಶ್ರಮಿಸಬೇಕು. ನಿವೃತ್ತ ಪೊಲೀಸರ ಆರೋಗ್ಯ ಯೋಜನೆಗಾಗಿ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದ ಅವರು, ನಿವೃತ್ತ ಪೊಲೀಸರು ಮಾನಸಿಕ ಹಾಗೂ ದೈಹಿಕ ಆರೋಗ್ಯದೊಂದಿಗೆ ಕೌಟುಂಬಿಕ ಸಂತೋಷಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಂಘದ ಗೌರವಾಧ್ಯಕ್ಷ ಎಂ.ಎ. ಅಪ್ಪಯ್ಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಬಿದ್ದಪ್ಪ ಲೆಕ್ಕಪತ್ರ ಮಂಡಿಸಿದರು. ಹೆಚ್ಚಿನ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ೮೦ ವರ್ಷ ಪೂರೈಸಿದ ಮೊಣ್ಣಪ್ಪ ಹಾಗೂ ಅಯ್ಯಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಯಾಲದಾಳು ಕೇಶವಾನಂದ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ಎಂ. ಮುದ್ದಯ್ಯ, ನಾಯಕ್ ಹಾಗೂ ಎಸ್.ಕೆ. ಹೆಗ್ಗಡೆ ಉಪಸ್ಥಿತರಿದ್ದರು.
ಸರಳಾ ಕರುಂಬಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷ ಚೊಕ್ಕಾಡಿ ಅಪ್ಪಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.