ವೀರಾಜಪೇಟೆ, ನ. ೧೮: ಕಲೆ, ಸಾಹಿತ್ಯ ಮತ್ತು ಸಂಗೀತ ಮನುಷ್ಯನ ಮನಸ್ಸನ್ನು ಅರಳಿಸುವ ದಿವ್ಯ ಔಷಧಿಗಳಾಗಿವೆ. ಇಂದಿನ ಮಕ್ಕಳು ಕೇವಲ ಪಠ್ಯಪುಸ್ತಕ ಹಾಗೂ ಅಂಕಗಳಿಗೆ ಸೀಮಿತವಾಗದೆ ಕ್ರೀಡೆ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲೂ ಆಸಕ್ತಿ ಬೆಳೆಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಎಸ್.ಎಂ.ಎಸ್. ಸಂಸ್ಥೆಯ ಶಿಕ್ಷಕಿ ಎಚ್. ಮೈಥಿಲೀ ರಾವ್ ಕರೆ ನೀಡಿದರು.
ಶ್ರೀ ಅರಮೇರಿ ಕಳಂಚೇರಿ ಮಠದ ಶ್ರೀ ಅಂಗರಾಜೇAದ್ರ ಪ್ರಸಾದ ಭವನದಲ್ಲಿ ನಡೆದ ಹೊಂಬೆಳಕು ಕಿರಣ ೨೪೯ ಮಾಸಿಕ ತತ್ತ್ವಚಿಂತನಾಗೋಷ್ಠಿ ಹಾಗೂ ಭಕ್ತಿಸಿಂಚನ ‘ದಾಸ-ವಚನ-ರಸಧಾರೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತಕ್ಕೆ ಕಲ್ಲನ್ನೂ ಕರಗಿಸುವ ಶಕ್ತಿಯಿದ್ದು, ಅದು ಮನಸ್ಸಿನಲ್ಲಿ ಏಕಾಗ್ರತೆ ಮತ್ತು ಸಂಸ್ಕಾರವನ್ನು ಬೆಳೆಸುತ್ತದೆ. ‘ಕಾವ್ಯ ಕುಂಚ’ ಗಾಯನದ ವಿಶಿಷ್ಟ ಪ್ರಯೋಗ ಶ್ಲಾಘನೀಯ. ಸಾಹಿತ್ಯವು ಬದುಕಿನ ಕೈಗನ್ನಡಿಯಾಗಿದ್ದು, ಪುಸ್ತಕ ಓದುವ ಹವ್ಯಾಸ ಮಕ್ಕಳಲ್ಲಿ ಆಲೋಚನಾ ಶಕ್ತಿ ಹಾಗೂ ಸೃಜನಶೀಲತೆಯನ್ನು ವೃದ್ಧಿಸುತ್ತದೆ. ಕ್ರೀಡೆಯು ದೈಹಿಕ ಸದೃಢತೆಯೊಂದಿಗೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸುತ್ತದೆ. ಕಲೆ ಮತ್ತು ಸಾಹಿತ್ಯ ಬದುಕಿಗೆ ಪರಿಪೂರ್ಣತೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮೈಥಿಲೀ ರಾವ್ ಅವರು ಭಕ್ತಿಗೀತೆಗಳು ಹಾಗೂ ವಚನಗಳನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ಆಶೀರ್ವಚನ ನೀಡಿದ ಶ್ರೀ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಅಮೂಲ್ಯ ಸಮಯ ಮತ್ತು ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಅಂಕ ಗಳಿಸುವ ಯಂತ್ರಗಳಾಗುವ ಧಾವಂತದಲ್ಲಿ ಮಾನವೀಯ ಸಂವೇದನೆ, ಸಹನೆ ಹಾಗೂ ಹಿರಿಯರನ್ನು ಗೌರವಿಸುವ ಮೌಲ್ಯಗಳು ಮರೆಯಾಗಬಾರದು. ಭೌತಿಕ ಸುಖದ ಬೆನ್ನತ್ತುವುದಕ್ಕಿಂತ ನಮ್ಮ ಪರಂಪರೆ, ಕಲೆ ಮತ್ತು ಸಾಹಿತ್ಯದ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಹೆಸರಾಂತ ಗಾಯಕ ಹೆಡತಲೆ ನಾರಾಯಣ ಅವರ ದಾಸ-ವಚನ-ರಸಧಾರೆ ಗಾಯನ ಕಲಾರಸಿಕರನ್ನು ಭಕ್ತಿಪರವಶರನ್ನಾಗಿಸಿತು. ದಾಸ ಸಾಹಿತ್ಯದ ಜೀವನಮೌಲ್ಯಗಳು, ಸಾಮಾಜಿಕ ಕಳಕಳಿ ಹಾಗೂ ವಚನ ಸಾಹಿತ್ಯದ ಆಶಯಗಳನ್ನು ಭಾವಪೂರ್ಣ ಗಾಯನದ ಮೂಲಕ ಪ್ರಸ್ತುತಪಡಿಸಿ ಸಂಗೀತದ ರಸದೌತಣ ನೀಡಿದರು.
ಶ್ರೀಮಠದ ವತಿಯಿಂದ ಉದ್ಘಾಟಕರಾದ ಎಚ್. ಮೈಥಿಲೀ ರಾವ್ ಹಾಗೂ ಗಾಯಕ ಹೆಡತಲೆ ನಾರಾಯಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.