ಮಡಿಕೇರಿ ನ. ೧೬: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಮಡಿಕೇರಿಯ ಮಹಾತ್ಮ ಗಾಂಧಿ ರಸ್ತೆ (ರಾಜಾಸೀಟು ರಸ್ತೆ)ಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಇಂದಿನಿAದ ಕಾಮಗಾರಿ ಆರಂಭಗೊAಡಿದೆ.
ತೀರಾ ಹದಗೆಟ್ಟು ಹೊಂಡ ಗುಂಡಿಗಳಾಗಿದ್ದ ರಾಜಾಸೀಟು ರಸ್ತೆ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ್ಗೆ ಪ್ರತಿಕ್ರಿಯೆಗಳು ವ್ಯಕ್ತಗೊಳ್ಳುತ್ತಿದ್ದುದರಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ದಸರಾ ಉತ್ಸವಕ್ಕೂ ಮುನ್ನ ಅಂದರೆ ಕಳೆದ ಆಗಸ್ಟ್ ೧೫ರಂದು ಉಸ್ತುವಾರಿ ಸಚಿವರಿಂದ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಭೂಮಿ ಪೂಜೆ ಕೂಡ ನೆರವೇರಿಸಲಾಗಿತ್ತು. ರಾತೋರಾತ್ರಿ ರಸ್ತೆಯನ್ನು ಅಗೆದು ಕೆಲಸ ಕೂಡ ಮಾಡಲಾಯಿತು. ಆದರೆ, ಕಾಮಗಾರಿ ನಡೆಸಲು ರಸ್ತೆ ಬಂದ್ ಮಾಡಲು ಜಿಲ್ಲಾಡಳಿತದಿಂದ ಅವಕಾಶ ಲಭಿಸದ ಕಾರಣ ಇದುವರೆಗೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.
ಇತ್ತ ಕಾಮಗಾರಿಯ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರು ಕಾಮಗಾರಿಗೆ ಅವಶ್ಯವಿರುವ ಸಾಮಗ್ರಿಗಳು, ಯಂತ್ರೋಪಕರಣಗಳÀನ್ನು ತಂದಿರಿಸಿದ್ದರೂ ರಸ್ತೆ ಬಂದ್ ಮಾಡಲು ಅನುಮತಿ ದೊರಕದ ಕಾರಣ ಕಾಮಗಾರಿ ವಿಳಂಬವಾಗಿತ್ತು.
ಪ್ರವೇಶ ನಿರ್ಬಂಧ
ಇದೀಗ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಆರಂಭಿಸುವ ಸಲುವಾಗಿ ಜಿಲ್ಲಾಡಳಿತದಿಂದ ಅನುಮತಿ ದೊರೆತಿದೆ. ನಗರದ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಾಸೀಟುವರೆಗೆ ತೆರಳುವ ರಸ್ತೆಯಲ್ಲಿ ಸಾರ್ವಜನಿಕರು, ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ತಾ.೧೬ರಿಂದ ಡಿ. ೧೫ರವರೆಗೆ ನಿರ್ಬಂಧ ವಿಧಿಸಲಾಗಿದೆ.
ಕಾಮಗಾರಿ ಆರಂಭ
ಈ ನಡುವೆ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ಅಗತ್ಯ ಸಾಮಗ್ರಿ ಹಾಗೂ ಯಂತ್ರೋಪಕರಣಗಳನ್ನು ತಂದಿರಿಸಿಕೊAಡು ಸಿದ್ಧತೆ ಮಾಡಿಕೊಂಡಿದ್ದಾರೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ರಸ್ತೆಯ ಅಡಿ ಭಾಗದಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ಲೈನ್ಗಳ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.
೨೫ರಿಂದ ಕಾಂಕ್ರಿಟ್
ಒಟ್ಟು ರೂ. ೧.೫೦ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರಿಟ್ ರಸ್ತೆ ಕಾಮಗಾರಿ ಇನ್ನೆರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಬಳಿಯಿಂದ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದವರೆಗೆ ಒಟ್ಟು ೭೨೦ ಮೀಟರ್ ರಸ್ತೆ ಕಾಂಕ್ರಿಟ್ ರಸ್ತೆಯಾಗಲಿದೆ. ೭ ಮೀಟರ್ ಅಗಲದಲ್ಲಿ ರಸ್ತೆ ನಿರ್ಮಾಣವಾಗಲಿದ್ದು, ರಸ್ತೆ ಬದಿ ಹೊಟೇಲ್ ರಾಜ್ದರ್ಶನ್ ಬಳಿ ಇರುವ ಒಂದು ಸಿಲ್ವರ್ ಮರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ಬಳಿ ಇರುವ ಒಂದು ಅತ್ತಿ ಮರ ತೆರವುಗೊಳಿಸಬೇಕಾಗುತ್ತದೆ. ಹಾಗೂ ಮಧ್ಯದಲ್ಲಿ ಒಂದೆರಡು ಮರಗಳ ಕೊಂಬೆಗಳನ್ನು ಮಾತ್ರ ತೆರವುಗೊಳಿಸಬೇಕಿದೆ. ಡಿಸೆಂಬರ್ ಮೂರನೇ ವಾರದೊಳಗೆ ರಸ್ತೆ ನಿರ್ಮಾಣವಾಗಲಿದೆ ಎಂದು ನಗರಸಭಾ ಅಭಿಯಂತರ ಹೇಮಕುಮಾರ್ ಮಾಹಿತಿ ನೀಡಿದ್ದಾರೆ.
ಸಂಚಾರ ಬದಲಾವಣೆ
ಇದುವರೆಗೆ ಖಾಸಗಿ ಬಸ್ಗಳು ಸೇರಿದಂತೆ ಎಲ್ಲ ವಾಹನಗಳು ರಾಜಾಸೀಟ್ ರಸ್ತೆ ಮೂಲಕ ಸಂಚರಿಸುತ್ತಿದ್ದವು. ಆದರೆ ಇದೀಗ ರಸ್ತೆ ಬಂದ್ ಆಗುವದರಿಂದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಖಾಸಗಿ ಬಸ್ಗಳು ತಿಮ್ಮಯ್ಯ ವೃತ್ತದಿಂದ ನೇರವಾಗಿ ಹಳೆ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದಲೇ ನಿಗದಿಪಡಿಸಿದ ಮಾರ್ಗಗಳಿಗೆ ತೆರಳುತ್ತಿವೆ. ಇತರ ವಾಹನಗಳು ಗೌಳಿ ಬೀದಿ, ಹೊಟೇಲ್ ರಾಜ್ದರ್ಶನ್ ಕೆಳಭಾಗದ ಮಾರ್ಗವಾಗಿ ಸಂಚರಿಸುತ್ತಿವೆ. ರಾಜಾಸೀಟ್ ಮಾರ್ಗ ಪೂರ್ಣಗೊಳ್ಳುವವರೆಗೂ ಇದೇ ವ್ಯವಸ್ಥೆ ಮುಂದುವರೆಯಲಿದೆ.