ಚೆಯ್ಯಂಡಾಣೆ, ನ. ೧೬: ನರಿಯಂದಡ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರು, ಮೃತಪಟ್ಟ ಹಸುವಿನ ಕಳೇಬರವನ್ನು ವಿರಾಜಪೇಟೆಯ ಅರಣ್ಯ ಇಲಾಖೆ ಕಚೇರಿಗೆ ಸಾಗಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟರು.

ನ.೧೫ರ ಬೆಳಗ್ಗಿನಿಂದಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ರಾತ್ರಿ ಕಳೆದರೂ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿತ್ತು.

ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯ ಎಸಿಎಫ್ ತಹಸಿನ್ ಭಾನು ಹಾಗೂ ಆರ್‌ಎಫ್‌ಒ ಶಿವರಾಂ ಅವರು ಹುಲಿ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಡಿಎಫ್‌ಒ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟುಹಿಡಿದರು.

ಗ್ರಾಮಸ್ಥರಾದ ಪೊಕ್ಕುಳಂಡ್ರ ದನೋಜ್ (ದಿವ್ಯ), ತೋಟಂಬೈಲು ಅನಂತ್ ಕುಮಾರ್ ಹಾಗೂ ಮಕ್ಕಿಮನೆ ಸುಧೀರ್ ಮಾತನಾಡಿ, ಸ್ಥಳದಲ್ಲಿಯೇ ಪರಿಹಾರ ನೀಡಬೇಕು, ಡಿಎಫ್‌ಒ ಭೇಟಿ ನೀಡಬೇಕು ಹಾಗೂ ಬೇಜವಾಬ್ದಾರಿ ಉತ್ತರ ನೀಡಿದ ಅಧಿಕಾರಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ, ಹಸುವಿನ ಮಾಲೀಕರಿಂದ ಪರಿಹಾರಕ್ಕೆ ಅಗತ್ಯವಾದ ದಾಖಲೆಗಳನ್ನು ಸ್ಥಳದಲ್ಲಿಯೇ ಪಡೆದುಕೊಂಡರು. ೧೫ ದಿನಗಳೊಳಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಡಿಸೆಂಬರ್ ೨ರಂದು ಚೆಯ್ಯಂಡಾಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಕುಂದುಕೊರತೆ ಸಭೆ ನಡೆಸಲು ತೀರ್ಮಾನಿಸಲಾಯಿತು.

ಅಲ್ಲದೆ, ಹುಲಿಯ ಚಲನವಲನ ಪತ್ತೆಹಚ್ಚಲು ದಾಳಿ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ನಿಗಾ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದAತೆ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭ ಡಿಆರ್‌ಎಫ್‌ಒ ಶ್ರೀನಿವಾಸ್, ಇಟಿಎಫ್ ಡಿಆರ್‌ಎಫ್‌ಒ ಪ್ರಶಾಂತ್, ಗಾರ್ಡ್ ನಂದೀಶ್, ಕ್ಯಾಂಪ್ ಸಿಬ್ಬಂದಿ, ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು. ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.