ಸೋಮವಾರಪೇಟೆ, ನ. ೧೬: ರೈತರ ಕೃಷಿ ಭೂಮಿಗೆ ಸಂಬAಧಿಸಿದAತೆ ಯಾವೊಂದೂ ದಾಖಲಾತಿಗಳು ಕಂದಾಯ ಇಲಾಖೆಯಿಂದ ಆಗುತ್ತಿಲ್ಲ. ಪೋಡಿ ದುರಸ್ತಿಗೆ ಅರ್ಜಿ ಸಲ್ಲಿಸಿ ದಶಕಗಳೇ ಕಳೆದರೂ ಇಂದಿಗೂ ದಾಖಲೆಗಳು ಲಭಿಸಿಲ್ಲ ಎಂದು ಆರೋಪಿಸಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.

ರೈತ ಪರ ಸಂಘಟನೆಯ ಹೋರಾಟಗಾರ ಹಾಗೂ ಶಾಂತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಅವರ ನೇತೃತ್ವದಲ್ಲಿ, ತಾಲೂಕಿನ ವಿವಿಧ ರೈತಪರ ಸಂಘಟನೆಗಳ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಬೆಳಗ್ಗಿನಿಂದಲೇ ಧರಣಿ ಆರಂಭಿಸಿದರು.

ಈ ಸಂದರ್ಭ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೂತಿ ದಿನೇಶ್ ಅವರು, ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕೆಲ ಗ್ರಾಮ ಲೆಕ್ಕಿಗರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ರೈತರು ಕಚೇರಿಗೆ ಅಲೆದರೂ, ಕರೆ ಮಾಡಿದರೂ ಕೆಲಸಗಳು ಆಗುತ್ತಿಲ್ಲ. ಕರೆ ಮಾಡಿದ ಸಂದರ್ಭ ದರ್ಪದಿಂದ ಮಾತನಾಡಿ ಕರೆ ಕಡಿತ ಮಾಡುತ್ತಾರೆ ಎಂದು ಆರೋಪಿಸಿದರು. ಒಂದು ಹಂತದಲ್ಲಿ ನೌಕರರ ವಿರುದ್ಧ ಬಳಸಿದ ಪದವೊಂದಕ್ಕೆ ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭ, ಗೊಂದಲ ನಿರ್ಮಾಣವಾಯಿತು.

ರೈತರ ಜಮೀನಿಗೆ ಸಂಬAಧಿಸಿದAತೆ ತಾಲೂಕು ಕಚೇರಿಯಲ್ಲಿ ದುರಸ್ತಿ ಕಡತ ವಿಲೇವಾರಿ ಆಗುತ್ತಿಲ್ಲ. ಬೆಂಗಳೂರಿನವರ ಫೈಲ್‌ಗಳು, ಹಣ ನೀಡಿದವರ ಫೈಲ್‌ಗಳು ಶೀಘ್ರವಾಗಿ ದುರಸ್ತಿಯಾಗುತ್ತದೆ. ಆದರೆ ಸ್ಥಳೀಯ ರೈತರ ಕಡತಗಳು ವಿಲೇವಾರಿಯಾಗುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿಲ್ಲ ಎಂದು ಬಗ್ಗನ ಅನಿಲ್ ಆರೋಪಿಸಿದರು.

ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಬರಬೇಕು. ದುರಸ್ತಿ ಎಷ್ಟು ದಿನದೊಳಗೆ ಮಾಡುತ್ತಾರೆ ಎಂದು ತಿಳಿಸಬೇಕು. ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಬಗೆಹರಿಸಲು ಸರ್ಕಾರ ವಿಶೇಷ ತನಿಖಾ ತಂಡ ರಚಿಸಿರುವುದು ರೈತರ ಕಣ್ಣೊರೆಸುವ ತಂತ್ರವಾಗಿದೆ. ಈಗಾಗಲೇ ರೈತರು ಸಾಗುವಳಿ ಮಾಡಿರುವ ಜಾಗದ ತಕರಾರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ. ಸರ್ಕಾರದ ಪರವಾಗಿ ಇರುವ ವಕೀಲರುಗಳು ರೈತರ ಪರವಾಗಿ ಸಮರ್ಪಕವಾಗಿ ವಾದ ಮಂಡಿಸದೇ ಇರುವುದರಿಂದ ಸಮಸ್ಯೆಯಾಗಿದೆ. ಈವರೆಗೆ ಆಡಳಿತ ನಡೆಸಿದ ಜನಪ್ರತಿನಿಧಿಗಳು, ಈಗ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳು ರೈತರ ಪರವಾಗಿ ಇಲ್ಲ ಎಂದು ದೂರಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಡಿಸಿಎಫ್ ಬರಬೇಕು ಎಂದು ಪಟ್ಟು ಹಿಡಿದು ಕಚೇರಿ ಎದುರು ಪ್ರತಿಭಟನೆ ಮುಂದುವರೆಸಿದರು.

ಗ್ರಾಮಲೆಕ್ಕಾಧಿಕಾರಿಗಳು ಕರೆ ಮಾಡಿದರೆ ಸ್ವೀಕರಿಸಿ ಕಟ್ ಮಾಡುತ್ತಿದ್ದಾರೆ. ನಾವುಗಳು ಅಧಿಕಾರಿಗಳಿಗೆ ಜೋರಾಗಿ ಮಾತನಾಡಿದರೆ ಸಿಟ್ಟು ತೋರುತ್ತಾರೆ. ಕಂದಾಯ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಹಣಕ್ಕೆ ಪೀಡಿಸುತ್ತಾರೆ. ಇವರುಗಳನ್ನು ಹದ್ದುಬಸ್ತಿನಲ್ಲಿಡಲು ಕ್ರಮ ವಹಿಸಿ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಆಗ್ರಹಿಸಿದರು.

ಒನ್ ಟು ಫೈವ್ ಕಡತಗಳೂ ಸಹ ವಿಲೇವಾರಿಯಾಗುತ್ತಿಲ್ಲ. ಗೈರು ವಿಲೇ ಕಡತಕ್ಕೆ ಕಳುಹಿಸುತ್ತಿದ್ದಾರೆ. ತಾಲೂಕು ಕಚೇರಿಯಲ್ಲಿಯೇ ಎಲ್ಲಾ ದಾಖಲಾತಿಗಳಿದ್ದರೂ ಸಹ ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ಹೂವಯ್ಯ ಮಾಸ್ಟರ್ ಆರೋಪಿಸಿದರು.

ಇನ್ನಾದರೂ ಭೂ ದಾಖಲೆಗಳ ಸಮಸ್ಯೆ ನಿವಾರಣೆಗೆ ಫಾಸ್ಟ್ ಟ್ರ‍್ಯಾಕ್ ಸಮಿತಿಗಳನ್ನು ರಚಿಸಿ ಕಡತಗಳನ್ನು ವಿಲೇವಾರಿ ಮಾಡಲು ಶಾಸಕರು ಮುಂದಾಗಬೇಕೆAದು ಬಗ್ಗನ ಅನಿಲ್ ಆಗ್ರಹಿಸಿದರು.

ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ೨೦೨೪ ರಿಂದ ಸಿ ಮತ್ತು ಡಿ ಭೂಮಿ ಸಮಸ್ಯೆ ವಿರುದ್ದ ಹೋರಾಟ ಮಾಡುತ್ತಿದ್ದೇವೆ. ಮರು ಪರಿಶೀಲನೆಗೆ ಎಸ್.ಐ.ಟಿ.ರಚನೆ ಮಾಡಿದೆ. ೬ ತಿಂಗಳಲ್ಲಿ ವರದಿ ನೀಡಬೇಕು. ಒಂದು ವರ್ಷ ಆಗುತ್ತಾ ಬಂದರೂ ಇನ್ನೂ ವರದಿ ನೀಡಿಲ್ಲ. ತಕ್ಷಣ ವರದಿ ನೀಡಿದರೆ ಚಳಿಗಾಲದ ಅಧಿವೇಶನದಲ್ಲಿ ನಿರ್ಣಯ ಮಾಡಿ ಸುಪ್ರಿಂ ಕೋರ್ಟ್ನಲ್ಲಿ ಪ್ರಶ್ನಿಸಬಹುದು. ಆದರೆ ಸಮಿತಿಯ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂದು ದೂರಿದರು.

ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಜಿಲ್ಲೆಯ ಈರ್ವರು ಶಾಸಕರ ಬಳಿ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ಜಮ್ಮಾ ಸಮಸ್ಯೆಯನ್ನು ಎ.ಕೆ. ಸುಬ್ಬಯ್ಯ ಅವರ ನಿರಂತರ ಹೋರಾಟದಿಂದ ಬಗೆಹರಿಸಲಾಗಿದೆ. ಸಿ ಮತ್ತು ಡಿ ಹಾಗೂ ದುರಸ್ತಿ ಸಮಸ್ಯೆಗಳನ್ನು ಶಾಸಕರುಗಳು ಹಾಗೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಸೋಮವಾರಪೇಟೆ ಭಾಗದ ಸೆಟಲ್‌ಮೆಂಟ್ ಸರ್ವೆ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಶಾಂತಳ್ಳಿ ವ್ಯಾಪ್ತಿಯಲ್ಲಿ ಟೆನ್ಯೂರ್ ಸಮಸ್ಯೆಯಿಂದ ಸರ್ವೆ ಆಗಿಲ್ಲ. ಬ್ರಿಟಿಷರ ಕಾಲದ ಸರ್ವೆ ಮಾತ್ರ ಇದೆ. ತಕ್ಷಣ ಸೆಟಲ್‌ಮೆಂಟ್ ಸರ್ವೆ ಆಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಡಿಡಿಎಲ್‌ಆರ್, ತಮ್ಮ ಕಚೇರಿಯಲ್ಲಿ ಬಾಕಿ ಇರುವ ಕಡತಗಳ ಸಮಗ್ರ ಮಾಹಿತಿ, ಎಷ್ಟು ದಿನಗಳ ಒಳಗೆ ವಿಲೇವಾರಿ ಮಾಡುತ್ತೀರೆಂಬ ಬಗ್ಗೆ ವರದಿ ನೀಡಬೇಕು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬಂದರೆ ಅಮಾನತು ಮಾಡಲಾಗುವುದು ಎಂದು ಸರ್ವೆಯರ್ ನರಸಯ್ಯ ಅವರಿಗೆ ಎಚ್ಚರಿಸಿದರು.

ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಸಾರ್ವಜನಿಕರ ಕಚೇರಿ ಆದ್ದರಿಂದ ಎಲ್ಲರೂ ಬರುತ್ತಿರುತ್ತಾರೆ. ಯಾರು ಬ್ರೋಕರ್‌ಗಳು ಎಂದು ತಿಳಿಯುವುದಿಲ್ಲ. ಸಾರ್ವಜನಿಕರು ತಮ್ಮ ಕೆಲಸಗಳು ಆಗದಿದ್ದರೆ ನೇರವಾಗಿ ತಹಶೀಲ್ದಾರನ್ನು ಭೇಟಿ ಮಾಡಬೇಕು. ಬ್ರೋಕರ್‌ಗಳ ಬಗ್ಗೆ ಮಾಹಿತಿ ನೀಡಿದರೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.

ಅಂತಿಮವಾಗಿ ಪ್ರತಿಭಟನಾಕಾರರ ಮನವಿಗಳನ್ನು ಶಾಂತಚಿತ್ತರಾಗಿ ಆಲಿಸಿದ ಡಿಡಿಎಲ್‌ಆರ್ ನಿರಂಜನ್ ಅವರು, ಹಿಂದೆ ಅರ್ಜಿ ನೀಡಿದ ಸ.ನಂ.ಗಳ ಪೈಕಿ ೫ ಸ.ನಂ.ಗಳನ್ನು ಪೋಡಿ ದುರಸ್ತಿ ಮಾಡಲಾಗಿದೆ. ಕೆಲವು ಕಡತಗಳು ಪೋಡಿ ದುರಸ್ತಿ ಹಂತದಲ್ಲಿದೆ. ಕೆಲವನ್ನು ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಸಲ್ಲಿಸಲಾಗಿದೆ. ಬಾಕಿಯಿರುವವರ ಪಟ್ಟಿಯನ್ನು ತೆಗೆದುಕೊಳ್ಳುತ್ತೇವೆ. ಅರಣ್ಯ ಹಾಗೂ ಕಂದಾಯ ಇಲಾಖೆಯಲ್ಲಿ ಜಾಗಕ್ಕೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ತಕ್ಷಣವೇ ಒಂದು ಗ್ರಾಮವನ್ನು ಪ್ರಾಯೋಗಿಕವಾಗಿ ಗುರುತಿಸಿ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಗೈರು ವಿಲೇ ಕಡತಗಳ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗುವುದು. ಇಲಾಖೆಯಿಂದ ರೈತರಿಗೆ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದ ಮೇರೆ ಸಂಜೆಯ ವೇಳೆಗೆ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಮುಖಂಡರಾದ ಎಡಿಕೇರಿ ಪ್ರಸನ್ನ, ಸಿ.ಕೆ. ರೋಹಿತ್, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಹಿರಿಕರ ರಮೇಶ್, ಡಾಲಿ ಪ್ರಕಾಶ್, ಶುಂಠಿ ಸಂದೀಪ್, ಐಗೂರು ಅಶೋಕ್, ಹುಲ್ಲುರಿಕೊಪ್ಪ ಚಂದ್ರು, ಗೌಡಳ್ಳಿ ಮೊಗಪ್ಪ, ಕಲ್ಕಂದೂರು ಕುಶಾಲಪ್ಪ, ಶಿವಪ್ಪ ಹಾನಗಲ್ಲು, ಕುಸುಬೂರು ರವಿ, ತ್ರಿಶೂಲ್ ಹರಗ, ಕೊತ್ನಳ್ಳಿ ರಾಜೇಶ್, ಮಾಟ್ನಳ್ಳಿ ಜಯರಾಂ, ತಲ್ತರೆ ರವಿಪ್ರಕಾಶ್, ಯಡೂರು ಮನೋಹರ್ ಸೇರಿದಂತೆ ಇತರರು ಭಾಗಿಯಾಗಿದ್ದರು.