ವೀರಾಜಪೇಟೆ, ನ. ೧೪: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ, ಆಡಳಿತಾತ್ಮಕ ಲೋಪದೋಷಗಳು, ಭ್ರಷ್ಟಾಚಾರ, ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿರುವ ನಿರಂತರ ಕಿರುಕುಳಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು ಆಗ್ರಹಿಸಿ ನಾಗರಿಕ ಸಮಿತಿ ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಮಾಳೇಟಿರ ಎಸ್. ಕಾಳಯ್ಯ ಅವರು ಪಟ್ಟಣದ ಗಂಭೀರ ವಾಹನ ದಟ್ಟಣೆ ಸಮಸ್ಯೆ ವಿವರಿಸಿದರು. ವೀರಾಜಪೇಟೆ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿರುವ ಮನೆ ಮತ್ತು ಕಟ್ಟಡ ಮಾಲೀಕರಿಗೆ ಕಾನೂನುಬದ್ಧವಾಗಿ ಸೂಕ್ತ ಪರಿಹಾರ ನೀಡಿ ಜಾಗವನ್ನು ಪಡೆದುಕೊಂಡು, ರಸ್ತೆ ಅಗಲೀಕರಣದ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

ರಸ್ತೆಯುದ್ದಕ್ಕೂ ಬಿದ್ದಿರುವ ಗುಂಡಿಗಳನ್ನು ಸೂಕ್ತವಾಗಿ ಮುಚ್ಚಿ, ಮಳೆ ನೀರು ಸುಗಮವಾಗಿ ಹರಿದುಹೋಗುವಂತೆ ಚರಂಡಿಗಳ ಸರಿಯಾದ ನಿರ್ವಹಣೆ ಮಾಡಬೇಕು. ವಾಹನ ಚಾಲಕರು ಅಡ್ಡಾದಿಡ್ಡಿ ಸಂಚರಿಸುವುದು ಮತ್ತು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಅಗಾಧ ತೊಂದರೆಯಾಗುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊರಗಿನಿಂದ ಬರುವ ವಾಹನ ಸವಾರರು ತಮ್ಮ ವಾಹನಗಳನ್ನು ಪಟ್ಟಣದಲ್ಲೇ ದಿನಗಟ್ಟಲೆ ನಿಲ್ಲಿಸುವುದರಿಂದ ಹೆಚ್ಚು ನಿಲ್ಲಿಸುವ ವಾಹನಗಳಿಗೆ ಗಂಟೆಯ ಆಧಾರದಲ್ಲಿ ದಂಡ/ಶುಲ್ಕ ವಿಧಿಸಬೇಕು. ನೂತನವಾಗಿ ನಿರ್ಮಿಸುವ ಕಟ್ಟಡಗಳ ತಳಭಾಗದಲ್ಲಿ (ಸೆಲ್ಲಾರ್) ವಾಹನ ಪಾರ್ಕಿಂಗ್‌ಗೆ ಜಾಗ ಮೀಸಲಿಡಬೇಕು ಎಂಬ ನಿಯಮವಿದ್ದರೂ, ಪಂಚಾಯತ್ ಆಡಳಿತದವರ ಪ್ರತ್ಯಕ್ಷ ಅಥವಾ ಪರೋಕ್ಷ ಸಹಯೋಗದಿಂದ ಕಟ್ಟಡ ಮಾಲೀಕರು ನಿಯಮ ಉಲ್ಲಂಘಿಸಿ ಅಂಗಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿ ದುಬಾರಿ ಹಣ

ಗಳಿಸುತ್ತಿದ್ದಾರೆ. ಇಂತಹ ಷರತ್ತು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳಿಗೆ ಪುರಸಭೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದರು.

ಪಿ.ಕೆ. ಅಬ್ದುಲ್ ರೆಹಮಾನ್ ಮಾತನಾಡಿ, ಕೇರಳದಿಂದ ಕೆಂಪು ಕಲ್ಲು ತರುವಾಗ ಕೆಲವು ನಿಯಮ ಹಾಗೂ ನಿರ್ಬಂಧಗಳಿದ್ದು, ಇವುಗಳನ್ನೇ ಬಂಡವಾಳ ಮಾಡಿಕೊಂಡು ಆಯಾ ಕಾಲದಲ್ಲಿ ಅಧಿಕಾರದಲ್ಲಿರುವ ಪಕ್ಷದ ಪ್ರಭಾವಿ ನಾಯಕರು ಹಾಗೂ ಶಾಸಕರ ಪಟ್ಟ ಶಿಷ್ಯರು, ಅಧಿಕಾರಿಗಳ ಮೂಲಕ ವಾಹನ ಸವಾರರಿಂದ ನೇರವಾಗಿ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ರೀತಿಯ ಅಕ್ರಮ ಹಫ್ತಾ ವಸೂಲಿಯನ್ನು ತಕ್ಷಣವೇ ಬಂದ್ ಮಾಡಬೇಕು. ಸರ್ಕಾರವೇ ಅಧಿಕೃತವಾಗಿ ಕೆಂಪು ಕಲ್ಲುಗಳ ಮೇಲೆ ಸೂಕ್ತ ಶುಲ್ಕವನ್ನು ನಿಗದಿಪಡಿಸಿ, ಅಧಿಕೃತ ರಶೀದಿ ನೀಡಿ ಕೊಡಗಿಗೆ ತರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಗ್ಯಾಸ್ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮದ ಕುರಿತು ಮಾತನಾಡಿದ ಮುಖಂಡ ಎಚ್.ಬಿ. ಸತೀಶ್ ಕುಮಾರ್ ಅವರು, ವೀರಾಜಪೇಟೆಯಲ್ಲಿ ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್ ವಿತರಣೆಯಲ್ಲಿ ಏಜೆನ್ಸಿಯು ಗ್ರಾಹಕರಿಗೆ ನಿರಂತರವಾಗಿ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.

ಸ್ಥಿರ ಆಡಳಿತದ ಕುರಿತು ಮಾತನಾಡಿದ ಮುಖಂಡ ಎನ್.ಕೆ. ಶರೀಫ್ ಅವರು, ವೀರಾಜಪೇಟೆ ಪುರಸಭೆಗೆ ಇನ್ಯಾವುದೋ ಇಲಾಖೆಯಿಂದ ತಾತ್ಕಾಲಿಕವಾಗಿ ಮುಖ್ಯಾಧಿಕಾರಿಗಳನ್ನು ನೇಮಿಸುತ್ತಿರುವುದರಿಂದ, ಅವರಿಗೆ ಸ್ಥಳೀಯ ಸಮಸ್ಯೆಗಳ ಸೂಕ್ತ ತಿಳಿವಳಿಕೆ ಇಲ್ಲದೆ ಸಾರ್ವಜನಿಕರು ತೀವ್ರ ಹಿಂಸೆ ಅನುಭವಿಸುವಂತಾಗಿದೆ ಎಂದು ದೂರಿದರು.

ಪಟ್ಟಣದ ಮಾಲಿನ್ಯದ ಕುರಿತು ಮಾತನಾಡಿದ ಮುಖಂಡ ಎಂ.ಕೆ. ಗಣೇಶ್ ಅವರು, ತಕ್ಷಣವೇ ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಪಟ್ಟಣದಲ್ಲಿರುವ ಫುಟ್‌ಪಾತ್ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ನಾಗರಿಕ ಸಮಿತಿಯ ಸಂಚಾಲಕರಾದ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ, ವೀರಾಜಪೇಟೆ ಪಟ್ಟಣದಲ್ಲಿ ಸಾರ್ವಜನಿಕರನ್ನು ಕಾಡುತ್ತಿರುವ ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಗಮನಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸಿದಲ್ಲಿ, ಪಟ್ಟಣದ ಎಲ್ಲಾ ನಾಗರಿಕರನ್ನು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರ ರೀತಿಯ ನಿರಂತರ ಹೋರಾಟ ಹಾಗೂ ಬೃಹತ್ ಪ್ರತಿಭಟನೆಯನ್ನು ಸಂಘಟಿಸಲಾಗುವುದು" ಎಂದರು.