ಮಡಿಕೇರಿ, ನ. ೧೪: ಮಡಿಕೇರಿ ಹೊರವಲಯದ ಗಾಳಿಬೀಡು ವ್ಯಾಪ್ತಿಯಲ್ಲಿ ವರ್ಷಗಳಿಂದ ಹದಗೆಟ್ಟಿದ್ದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನಡೆಸಿ ಇಂದಿಗೆ ಒಂದು ವರ್ಷ ಕಳೆದಿದ್ದು, ಇದುವರೆಗೂ ರಸ್ತೆ ಕಾಮಗಾರಿ ಸರಿಯಾಗಿ ಪ್ರಾರಂಭವಾಗದಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ಇಂದು ಬೆಳಿಗ್ಗೆ ೯.೪೫ಕ್ಕೆ ಜಿಲ್ಲಾ ಪಂಚಾಯಿತಿ ಕಚೇರಿ ಬಳಿಯ ಜಂಕ್ಷನ್ನಲ್ಲಿ ಜಮಾಯಿಸಿದ ಗ್ರಾಮಸ್ಥರು ಸುಮಾರು ೩ ಗಂಟೆಗಳ ಕಾಲ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಭು ಅವರು ಆಗಮಿಸಿದಾಗ ಗ್ರಾಮಸ್ಥರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ರಸ್ತೆ ತಡೆ ಮಾಡದಂತೆ ಮಡಿಕೇರಿ ಗ್ರಾಮಾಂತರ ಠಾಣೆಯ ಎಸ್.ಐ ಗೋಪಾಲ್ ಅವರು ಮಾನವಿ ಮಾಡಿದ ಸಂದರ್ಭವೂ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಶಾಸಕ ಮಂತರ್ ಗೌಡ ಅವರು ಒಂದು ವರ್ಷದ ಹಿಂದೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದು, ಅವರು ಕೂಡ ಸ್ಥಳಕ್ಕೆ ಆಗಮಿಸಬೇಕು. ಅವರು ಬರುವವರೆಗೂ ರಸ್ತೆ ತಡೆ ಮುಂದುವರಿಸುವುದಾಗಿ ಗ್ರಾಮಸ್ಥರು ಪಟ್ಟುಹಿಡಿದು ಧಿಕ್ಕಾರ ಕೂಗಿದರು. ಈ ಸಂದರ್ಭ ಸ್ಥಳದಲ್ಲಿದ್ದ ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು, ಶಾಸಕರಿಗೆ ಕರೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕೆಲ ಕಾಲ ಪ್ರತಿಭಟನಾ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭ ಮಾತನಾಡಿದ ಅಭಿಯಂತರ ಪ್ರಭು ಅವರು, ಗುತ್ತಿಗೆದಾರನ ನಿರ್ಲಕ್ಷö್ಯದಿಂದ ಈ ರೀತಿ ಆಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಡಿ. ೧೪ ರೊಳಗೆ ಮರುಟೆಂಡರ್ ಮಾಡಿಸಿ ನಂತರದ ೨ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ಇತ್ತರು. ಗ್ರಾಮಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕೆಲವೇ ದಿನಗಳಲ್ಲಿ ಸ್ಥಳೀಯ ಜಿ.ಪಂ ಚುನಾವಣೆ ಸಂಬAಧ ಅಧಿಸೂಚನೆ ಹೊರಡಿಸಿದರೆ ನೀತಿ ಸಂಹಿತೆ ಜಾರಿಯಾಗಲಿದೆ. ಆ ಸಂದರ್ಭ ಟೆಂಡರ್ ನಡೆಸುವುದು ಅಸಾಧ್ಯ ಎಂದು ಕೆಲ ಗ್ರಾಮಸ್ಥರು ಹೇಳಿದಾಗ, ರಾಜ್ಯಪಾಲರ ಅನುಮತಿ ಪಡೆದು ಮಾಡಬಹುದಾಗಿದೆ ಎಂದು ಅಭಿಯಂತರರು ಹೇಳಿದರು. ಒಂದು ವರ್ಷದಿಂದ ರಸ್ತೆ ಅಭಿವೃದ್ಧಿಪಡಿಸುವ ಪೊಳ್ಳು ಭರವಸೆಯನ್ನೇ ನೀಡಲಾಗುತ್ತಿದ್ದು, ರಾಜ್ಯಪಾಲರಿಂದ ಹೇಗೆ ಅನುಮತಿ ಪಡೆಯುತ್ತೀರಾ ಎಂದು ಸ್ಥಳದಲ್ಲಿದ್ದ ಪ್ರತಿಭಟನಾಕಾರರು ಈ ಸಂದರ್ಭ ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಪ್ರಮುಖರಾದ ದುಶಾಂತ್, ಹೊಸ ಟೆಂಡರ್ ಪ್ರಕ್ರಿಯೆಯಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ. ಹಳೆ ಟೆಂಡರ್ದಾರರಿAದಲೇ ಕಾಮಗಾರಿ ಆಗಲಿ. ಈ ಬಗ್ಗೆ ಲಿಖಿತ ರೂಪದಲ್ಲಿಯೇ ಭರವಸೆ ನೀಡಿ. ಈ ರಸ್ತೆಯಲ್ಲಿ ಪ್ರತಿನಿತ್ಯ ನಾವು ಕಣ್ಣೀರಿನೊಂದಿಗೆ ನಡೆದಾಡುತ್ತಿದ್ದೇವೆ. ಗಾಳಿಬೀಡಿನಿಂದ ಮಡಿಕೇರಿಗೆ ಪ್ರತಿನಿತ್ಯ ಕೂಟುಹೊಳೆ ಮೂಲಕ ನೀರು ಸರಬರಾಜಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ರೆಸಾರ್ಟ್ಗಳಿದ್ದು, ಆ ಮೂಲಕ ತೆರಿಗೆಯೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಆದರೆ ಸ್ಥಳೀಯ ರಸ್ತೆ ಅಭಿವೃದ್ಧಿಪಡಿಸದೇ ನಿರ್ಲಕ್ಷಿಸಲಾಗುತ್ತಿದೆ ಎಂದರು. ಶಾಸಕ ಮಂತರ್ ಗೌಡ ಅವರ ಪರ ತಾನು ಗಾಳಿಬೀಡು ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದ್ದು, ಅಭಿವೃದ್ಧಿ ಆಗಲಿದೆ ಎಂಬ ನಂಬಿಕೆ ಇತ್ತು. ಆದರೀಗ ಇಲ್ಲಿನ ಜನರು ತಮ್ಮನ್ನೇ ರಸ್ತೆ ಅವ್ಯವಸ್ಥೆ ಕುರಿತು ಪ್ರಶ್ನಿಸಿ ವ್ಯಂಗ್ಯ ಮಾಡುತ್ತಿದ್ದಾರೆ ಎಂದರು. ಈ ಹದಗೆಟ್ಟ ರಸ್ತೆಯಲ್ಲಿ ಅಭಿಯಂತರರು ಪಾದಯಾತ್ರೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.ಗಾಳಿಬೀಡು ವಲಯ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಆಳ್ವ ಮಾತನಾಡಿ, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹದಗೆಟ್ಟಿದ್ದ ರಸ್ತೆ ಅಭಿವೃದ್ಧಿಗೆ ಶಾಸಕರಲ್ಲಿ ಮನವಿ ಮಾಡಿದ ಮೇರೆಗೆ ರಸ್ತೆಗೆ ಅನುದಾನ ದೊರಕಿ ಟೆಂಡರ್ ಪ್ರಕ್ರಿಯೆಯೂ ನಡೆದಿತ್ತು. ಆದರೆ ಗುತ್ತಿಗೆದಾರನ ನಿರ್ಲಕ್ಷö್ಯದಿಂದ ಕಾಮಗಾರಿ ತಡವಾಗಿದೆ. ಮೇ ೨೬ಕ್ಕೆ ಗುತ್ತಿಗೆಯ ಅವಧಿ ಪೂರ್ಣಗೊಂಡಿದ್ದು, ಇದಾದ ಬಳಿಕ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಿಶ್ಚಯಿಸಲಾಗಿತ್ತು. ಆದರೆ ಗುತ್ತಿಗೆದಾರ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ ಮೇರೆಗೆ ಮತ್ತೆ ಅವಕಾಶ ನೀಡಲಾಗಿತ್ತು. ಆದರೆ ಕೇವಲ ರೂ.೪೦ ಲಕ್ಷ ವೆಚ್ಚದಲ್ಲಿ ೪ ಕಡೆಗಳಲ್ಲಿ ಮೋರಿ ಕಲ್ವರ್ಟ್ ನಿರ್ಮಾಣ ಮಾಡಲಾಗಿದ್ದು, ಮಳೆ, ಇತ್ಯಾದಿ ಕಾರಣಗಳ ನೆಪವೊಡ್ಡಿ ಗುತ್ತಿಗೆದಾರ ಮತ್ತಷ್ಟು ವಿಳಂಬ ಮಾಡಿದ್ದಾಗಿ ಹೇಳಿದರು.
ಗಾಳಿಬೀಡು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಿರೀಶ್, ಕೆ. ನಿಡುಗಣೆ ಪಂಚಾಯಿತಿ ಮಾಜಿ ಅಧ್ಯಕ್ಷ ಡೀನ್ ಬೋಪಣ್ಣ, ಪ್ರಮುಖರಾದ ಜಯಂತಿ ಶೆಟ್ಟಿ, ವಕೀಲರಾದ ಮನೋಜ್ ಬೋಪಯ್ಯ, ದುಗ್ಗಳ ಕಪಿಲ್ ಹಾಗೂ ಇತರರು ಮಾತನಾಡಿ, ರಸ್ತೆ ದುಸ್ಥಿತಿ ಕುರಿತು ತಮ್ಮ ಅಸಮಾಧಾನ ಹೊರಹಾಕಿದರು.