ಶ್ರೀಮAಗಲ, ನ. ೧೩ : ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಸೂಕ್ತ ವೇದಿಕೆ ಕಲ್ಪಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಪೊನ್ನಂಪೇಟೆ ತಾಲೂಕಿನ ನಲ್ಲೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ-ಮಾಯಮುಡಿ ಇವುಗಳ ಸಹಭಾಗಿತ್ವದಲ್ಲಿ ನಲ್ಲೂರಿನ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾಯಮುಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾ.ಪಂ. ಮಾಜಿ ಅಧ್ಯಕ್ಷ ತೀತರಮಾಡ ಎಸ್ ಕುಶಾಲಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಗ್ರಾಮದ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದರೂ ಸಹ ಗ್ರಾಮದ ದಾನಿಗಳ ಸಹಕಾರದಿಂದ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಂಡು ಮಕ್ಕಳ ಪ್ರತಿಭೆಯನ್ನು ತೋರಿಸಲು ಮುಂದಾದ ಎಲ್ಲಾ ಶಾಲೆಯ ಶಿಕ್ಷಕರಿಗೂ ಹಾಗೂ ಸ್ಥಳೀಯ ಯುವಕ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೂ ಧನ್ಯವಾದ ತಿಳಿಸುತ್ತಾ ಮಕ್ಕಳ ಪ್ರತಿಭೆಯನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸುವಂಥಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರಾ. ಪಂ. ಮಾಜಿ ಸದಸ್ಯ ಪುಳ್ಳಂಗಡ ಎಸ್. ಗಣಪತಿ ಅವರು ಮಾತನಾಡಿ, ಹತ್ತಾರು ವರ್ಷಗಳ ಹಿಂದೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕಾಗಿತ್ತು, ಆದರೂ ತಡವಾಗಿ ಕ್ಲಸ್ಟರ್ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸಿಕೊಂಡು ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯ ಎಂದರು. ಶಾಲೆಯಲ್ಲಿ ಮಕ್ಕಳನ್ನು ಒಂದನೇ ತರಗತಿಯಿಂದ ಹಿಡಿದು ಏಳನೇ ತರಗತಿಯವರೆಗೆ ಎಲ್ಲಾ ಕಲಿಕೆಯನ್ನು ನಿರ್ವಹಿಸುವುದರ ಮೂಲಕ ಅವರಲ್ಲಿ ಇರುವಂತಹ ಪ್ರತಿಭೆಯನ್ನು ಹೊರಸೂಸಲಿಕ್ಕೆ ಒಂದು ವೇದಿಕೆಯನ್ನು ಸರಕಾರ ಮಾಡಿಕೊಟ್ಟಿದೆ. ಆ ನಿಟ್ಟಿನಲ್ಲಿ ನಿಮ್ಮ ಪ್ರತಿಭೆಯನ್ನು ಹೊರಸೂಸಿ ನಿಮ್ಮ ನಿಮ್ಮ ಶಾಲೆಗೆ ಕೀರ್ತಿಯನ್ನು ತರುವಂತಾಗಲಿ ಎಂದರು.
ಮಾಯಮುಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸವಿತಾ ಕುಮಾರಿ ಅವರು ಪ್ರಾಸ್ತಾವಿಕ ನುಡಿಯಾಡಿದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಯಮುಡಿ ಸರಕಾರಿ ಪ್ರೌಢಶಾಲೆ, ಪೊನ್ನಪ್ಪಸಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚನ್ನಂಗೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೊನ್ನಪ್ಪಸಂತೆ ಎಂಸಿಎಸ್ ಪ್ರೌಢಶಾಲೆ, ಬೆಸಗೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಧನುಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಲ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಕಾರ್ಯಕ್ರಮ ದಲ್ಲಿ ನೆರೆದಿದ್ದ ಗಣ್ಯರು, ಗ್ರಾಮಸ್ಥರು, ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕಿಯರು ಬಹುಮಾನ ನೀಡಿದರಲ್ಲದೆ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರಿಗೆ ಹಾಗೂ ಶಿಕ್ಷಕಿಯರಿಗೆ ಸ್ಥಳೀಯ ಶಾಲಾ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ತೀರ್ಪುಗಾರರಾಗಿ ಸರಸ್ವತಿ, ಕೃಷ್ಣ , ಅಶ್ವಿನಿ, ಅಫೀಫಾ , ಸರೀನಾ, ಮೀನಾ, ಧಕ್ಷ, ರಾಧ, ರಸಿಕ ಮಾದಪ್ಪ, ಮಾಲಾ, ಅರುಣ್ ಕುಮಾರ್, ಶಿಲ್ಪ, ಸಹಿದ ಭಾನು, ವೆಂಕಟೇಶ್, ವನಿತಾ ಕುಮಾರಿ, ವನಜ, ಬಸವರಾಜು ಹಾಗೂ ಶಿಲ್ಪ ಅವರು ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ತೀತರಮಾಡ ರಾಜ ಕರುಂಬಯ್ಯ, ದಾನಿಗಳಾದ ಪುಚ್ಚಿಮಾಡ ರಾಯ್ ಮಾದಪ್ಪ, ಶಾಂತಿ ಪೊನ್ನಮ್ಮ, ಮಾಯಮುಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸವಿತಾ ಕುಮಾರಿ, ಬಾಳೆಲೆ ಸಿಆರ್ಪಿ ಅರುಣ್ ಕುಮಾರ್, ಕುಟ್ಟ ಸಿಆರ್ಪಿ ಆಫೀಫಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ವೆಂಕಟೇಶ್, ಎಂಟಿ ಸುಮಾ, ವಿವಿಧ ಶಾಲೆಯ ಶಿಕ್ಷಕ ವೃಂದದವರು ಶಾಲಾ ಮಕ್ಕಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಲ್ಲೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾ ಅವರು ಸ್ವಾಗತಿಸಿ, ಸಹ ಶಿಕ್ಷಕಿ ಕೆಎನ್ ರಾಧಾ ಅವರು ವಂದಿಸಿದರು.