ವೀರಾಜಪೇಟೆ, ನ. ೧೩: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ನೀಡಲಾಗುವ ಈ ಸಾಲಿನ ‘ಕೆ.ಎಂ.ಎ. ವಿಶೇಷ ಶೈಕ್ಷಣಿಕ ಪುರಸ್ಕಾರ-೨೦೨೬’ ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವು ವೀರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಶ್ ಹಾಲ್‌ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಬೆಂಗಳೂರಿನ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಇನ್ಸ್ಪೆಕ್ಟರ್ ಮೀನಕ್ಕೆರ ಎ.ಮಹಮ್ಮದ್ ಅವರು ದಫ್ ಬಾರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದ ನಿಜವಾದ ಸಂಪತ್ತು ಯುವ ಸಮೂಹವಾಗಿದ್ದು, ಪೋಷಕರು ಮಕ್ಕಳನ್ನೇ ನಿಜವಾದ ಆಸ್ತಿಯನ್ನಾಗಿ ಮಾಡಬೇಕೇ ಹೊರತು ಮಕ್ಕಳಿಗಾಗಿ ಆಸ್ತಿ ಮಾಡುವುದು ಮುಖ್ಯವಲ್ಲ ಎಂದರು. ಪ್ರತಿಭೆಗಳನ್ನು ಮತ್ತು ಅವರ ಸಾಧನೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಕೊಡವ ಮನೆತನಗಳ ಕೊಡವ ಮುಸ್ಲಿಂ ಸಮುದಾಯವು ಕೊಡವ ಹಾಗೂ ಮುಸ್ಲಿಮರ ನಡುವೆ ಸಾಂಸ್ಕöÈತಿಕ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಸಂಘಟನೆ ಶ್ರಮಿಸುತ್ತಿದೆ ಎಂದರು. ಕೊಡವ ಮನೆ ಹೆಸರು ನಮ್ಮ ಅಸ್ಮಿತೆಯಾಗಿದ್ದು, ಇದರ ಬಗ್ಗೆ ಕೀಳರಿಮೆ ಇರದೆ ವಿಶೇಷ ಅಭಿಮಾನವಿರಬೇಕು ಹಾಗೂ ಇದರ ಕುರಿತು ಅಧ್ಯಯನ ಮತ್ತು ಸಂಶೋಧನೆಗಳು ನಡೆಯಬೇಕು, ಇದಕ್ಕೆ ಕೆ.ಎಂ.ಎ. ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಪೊನ್ನಂಪೇಟೆ ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಮಾತನಾಡಿ, ತಂದೆ-ತಾಯಿಗಳು ತಮ್ಮ ಕಷ್ಟಗಳನ್ನು ಬದಿಗೊತ್ತಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಪೋಷಕರು ಯಾವ ಉದ್ದೇಶಕ್ಕಾಗಿ ನಮ್ಮನ್ನು ಓದಿಸುತ್ತಿದ್ದಾರೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಶಿಕ್ಷಣದ ನಿಜವಾದ ಅರ್ಥವನ್ನು ಅರಿತುಕೊಳ್ಳಬೇಕು ಎಂದರು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಮಾನ್ಯ ಜ್ಞಾನ, ವ್ಯವಹಾರ ಜ್ಞಾನ ಹಾಗೂ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಯಬೇಕು. ಮಕ್ಕಳು ತಪುö್ಪ ಮಾಡಿದಾಗ ತಂದೆ-ತಾಯಿಗಳು ತಿಳಿಹೇಳುವುದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಡಪಾಲದ ನಿವೃತ್ತ ಮುಖ್ಯೋಪಾಧ್ಯಾಯರು, ರಾಷ್ಟç ಪ್ರಶಸ್ತಿ ವಿಜೇತ ಕಿಕ್ಕರೆ ಎ. ಉಮ್ಮರ್ ಮಾಸ್ಟರ್ ಮಾತನಾಡಿ, ಚಿರಾಸ್ತಿ ಮತ್ತು ಚರಾಸ್ತಿಯ ನಡುವಿನ ವ್ಯತ್ಯಾಸವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ನಾವು ಸಂಪಾದಿಸುವ ಹಣ, ಆಸ್ತಿ ಚರಾಸ್ತಿಯಾದರೆ, ನಾವು ಕಲಿಯುವ ವಿದ್ಯೆ ಎಂಬುದು ನಮ್ಮ ಜೊತೆಗೇ ಬರುವ ಶಾಶ್ವತವಾದ ಚಿರಾಸ್ತಿಯಾಗಿದೆ ಎಂದರು.

ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಕುಪ್ಪೋಡಂಡ ಎ. ರಫೀಕ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟವಾದ ಗುರಿ ಇರುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ನಾವು ಉತ್ತಮ ಮಾನವರಾಗಿ ರೂಪುಗೊಳ್ಳಲು ನೈತಿಕ ಶಿಕ್ಷಣದ ಅಗತ್ಯವಿದೆ ಎಂದರು. ಕೇವಲ ಪದವಿಗಳನ್ನು ಪಡೆಯುವುದು ಮಾತ್ರವಲ್ಲದೆ, ವೃತ್ತಿಜೀವನದಲ್ಲಿ ಉನ್ನತ ಸಾಧನೆ ಮಾಡಿ ಗುರುತಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಪಣ ತೊಟ್ಟು ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಸದುದ್ದೇಶದಿಂದ ಶಿಕ್ಷಣ ನಿಧಿ ಅನ್ನು ಸ್ಥಾಪಿಸಲಾಗಿದ್ದು, ಅದು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು. ಸಮಾಜದ ಯಾರೊಬ್ಬರೂ ಆರ್ಥಿಕ ಅಥವಾ ಇನ್ನಾವುದೇ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಸಂಸ್ಥೆಯ ಮುಖ್ಯ ಗುರಿಯಾಗಿದೆ. ಜಾತಿ-ಧರ್ಮ ಭೇದವಿಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಿ, ಅವರ ಉನ್ನತ ವ್ಯಾಸಂಗಕ್ಕೆ ದಾರಿದೀಪವಾಗುವ ನಿಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಈ ವಿಶೇಷ ಪುರಸ್ಕಾರವನ್ನು ನೀಡುತ್ತಾ ಬರಲಾಗುತ್ತಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಈ ಸಾಲಿನ ‘ಕೆ.ಎಂ.ಎ. ವಿಶೇಷ ಶೈಕ್ಷಣಿಕ ಪುರಸ್ಕಾರ-೨೦೨೬’ಕ್ಕೆ ಆಯ್ಕೆಯಾದ ಜಿಲ್ಲೆಯ ಒಟ್ಟು ೭ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಓದಿ ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಡಿ.ಹೆಚ್. ಸೂಫಿಯವರು ತಮ್ಮ ಪೋಷಕರಾದ ದಿವಂಗತ ಡಿ.ಪಿ. ಹುಸೈನಾರ್ ಹಾಜಿ ಮತ್ತು ಆಮೀನಾ ಅವರ ಸ್ಮರಣಾರ್ಥಕವಾಗಿ ಪ್ರಾಯೋಜಿಸಿರುವ ‘ಕೆಎಂಎ ಕನ್ನಡ ಚೈತನ್ಯ ಪುರಸ್ಕಾರ-೨೦೨೬’ವನ್ನು ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಪಡೆದ ಮಾಲ್ದಾರೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಎಸ್. ಕೌಸಲ್ಯ ಮತ್ತು ೧೨೫ಕ್ಕೆ ೧೨೩ ಅಂಕಗಳನ್ನು ಪಡೆದ ಹೊದವಾಡದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿದ್ದ ಹೊದವಾಡ ಕೆ.ಎಂ. ಫಾತಿಮತ್ ಸಹ್ಲ ಅವರಿಗೆ ಪ್ರದಾನ ಮಾಡಲಾಯಿತು.

೨೦೨೫-೨೬ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸೋಮವಾರಪೇಟೆ ವಿಶ್ವಮಾನವ ಕುವೆಂಪು ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಶಿವಾನಿ ಶಾರದಾಮಣಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ಸಂತ ಮೈಕಲರ ಪಿ.ಯು. ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಿಂಚನ ಪ್ರಸನ್ನ ಹೆಚ್. ಅವರಿಗೆ ಎನ್.ಸಿ.ಟಿ. ಗ್ರೂಪ್ ಮಾಲೀಕರಾದ ಕೆ.ಎಂ.ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಅವರು ತಮ್ಮ ಸಹೋದರ ದಿ. ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿರುವ ‘ಕೆ.ಎಂ.ಎ. ವಿಶೇಷ ಶೈಕ್ಷಣಿಕ ಪುರಸ್ಕಾರ’ವನ್ನು ತಲಾ ಹತ್ತು ಸಾವಿರ ರೂಪಾಯಿ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಂಸನಾ ಪತ್ರದೊಂದಿಗೆ ನೀಡಿ ಗೌರವಿಸಲಾಯಿತು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಎಂ.ಎ. ಮಹಮ್ಮದ್ ಅವರು ಪ್ರಾಯೋಜಿಸಿರುವ ‘ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ’ವನ್ನು ಎಸ್.ಎಸ್.ಎಲ್.ಸಿ. ವಿಭಾಗದಲ್ಲಿ ಕೊಟ್ಟಮುಡಿಯ ಮರ್ಕಜ್ಹ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಕುಂಜಿಲದ ಪಿ.ಯು. ಜುನೈಸ, ದ್ವಿತೀಯ ಪಿಯುಸಿ ವಿಭಾಗದಲ್ಲಿ ವೀರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕುಂಜಿಲದ ಎಂ.ಎಸ್. ಫರೀದಾ (ಶೇ. ೯೮) ಮತ್ತು ಮೂರ್ನಾಡು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕೆ.ಎಂ. ಜುಹರ (ಶೇ. ೯೫) ಅವರಿಗೆ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಮುದಾಯದ ಹಿರಿಯ ಸಾಧಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ರಾಷ್ಟಿçÃಯ ಮಾನವ ಶ್ರೇಷ್ಠತಾ ಪ್ರಶಸ್ತಿ ಪುರಸ್ಕöÈತ ದುದ್ದಿಯಂಡ ಹೆಚ್. ಸೂಫಿ ಹಾಜಿ, ರಾಷ್ಟç ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ಎಡಪಾಲದ ಕಿಕ್ಕರೆ ಎ. ಉಮರ್ ಮಾಸ್ಟರ್, ರಾಷ್ಟçಪತಿ ಪದಕ ಪುರಸ್ಕöÈತ ಪೊಲೀಸ್ ಇನ್ಸ್ಪೆಕ್ಟರ್ ಮೀನಕ್ಕೆರ ಎ. ಮಹಮ್ಮದ್ (ಶಶಿಪ್ರಿಯ), ಮುಖ್ಯಮಂತ್ರಿಗಳ ಪದಕ ಪುರಸ್ಕöÈತ ಸಿಐಡಿ ಡಿಟೆಕ್ಟಿವ್ ಇನ್ಸ್ಪೆಕ್ಟರ್ ಕುಪ್ಪೋಡಂಡ ಎ. ರಫೀಕ್ ಹಾಗೂ ನಿವೃತ್ತ ಸೈನಿಕ ಅಂಬಟ್ಟಿಯ ಕರ್ತೊರೆರ ಎ. ಮುಸ್ತಫ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ. ಜೋಯಿಪೇರ ಕುಂಞÂ ಅಬ್ದುಲ್ಲಾ, ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ ಸೇರಿದಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.