ಸೋಮವಾರಪೇಟೆ, ನ. ೧೩: ವಿವಿಧ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಶಾಸಕರಲ್ಲಿ ಚರ್ಚೆ ನಡೆಸಿದ ಸಂದರ್ಭ ನೀಡಿದ ಭರವಸೆಯಲ್ಲಿ ಯಾವೊಂದೂ ಈಡೇರದ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿರುವುದಾಗಿ ಶಾಂತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಬಗ್ಗನ ಅನಿಲ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರಪೇಟೆ ಭಾಗದ ರೈತರು, ಸಾರ್ವಜನಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಈ ಹಿಂದೆ ಶಾಸಕರಲ್ಲಿ ಚರ್ಚೆ ನಡೆಸಿ, ಈಡೇರಿಸುವಂತೆ ಮನವಿ ಮಾಡಿದ ಸಂದರ್ಭ, ತಾವುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಿ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದ್ದರು. ಅದರಂತೆ ನಾವುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದೆವು. ಆದರೆ ಈವರೆಗೆ ಒಂದೇ ಒಂದು ಸಮಸ್ಯೆಯನ್ನೂ ಶಾಸಕರು ಬಗೆಹರಿಸಿಲ್ಲ ಎಂದರು.

ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಪೋಡಿ ದುರಸ್ತಿ ಮಾಡಿಸಿಕೊಡಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಪುಷ್ಪಗಿರಿ-ಸುಬ್ರಹ್ಮಣ್ಯ ರಸ್ತೆ ನಿರ್ಮಾಣ ಮಾಡಬೇಕು. ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದೆವು. ಇದಕ್ಕೆ ಒಪ್ಪಿದ ಶಾಸಕರು ಪಕ್ಷಕ್ಕೆ ಆಹ್ವಾನಿಸಿದ್ದರು. ಹಾಗಾಗಿ ಹಲವಷ್ಟು ಸಮಾನ ಮನಸ್ಕರು ಕಾಂಗ್ರೆಸ್ ಸೇರಿದ್ದೆವು. ಆದರೆ ಈವರೆಗೆ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಿದರು. ತಾ. ೧೬ರಿಂದ ಪೋಡಿ ದುರಸ್ತಿಗೆ ಆಗ್ರಹಿಸಿ ಸೋಮವಾರಪೇಟೆ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು.

ಕಳೆದ ಬಾರಿ ಪ್ರತಿಭಟನೆ ಸಂದರ್ಭ ಜಿಲ್ಲಾಧಿಕಾರಿಗಳು ಆಗಮಿಸಿ ತಿಂಗಳೊಳಗೆ ಪೋಡಿ ದುರಸ್ತಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಮೂರು ವರ್ಷ ಕಳೆದರೂ ಯಾವುದೇ ಕಡತ ದುರಸ್ತಿಯಾಗಿಲ್ಲ. ಕಾಮಗಾರಿಗಳೂ ಸಹ ಕಳಪೆಯಾಗುತ್ತಿವೆ. ಆಲೇಕಟ್ಟೆ-ಕೂತಿ ರಸ್ತೆ ೨೦ ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದರೂ ತೀರಾ ಕಳಪೆಯಾಗಿದೆ ಎಂದು ಅನಿಲ್ ಆರೋಪಿಸಿದರು.

ಸಾರ್ವಜನಿಕ ಸಮಸ್ಯೆಗಳೊಂದಿಗೆ ತಾಲೂಕು ಕಚೇರಿಯಲ್ಲಿ ರೈತರ ದಾಖಲೆಗಳಿಗೆ ಸಂಬAಧಿಸಿದAತೆ ದುರಸ್ತಿ ಕಾರ್ಯಗಳಿಗೆ ಆಗ್ರಹಿಸಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ತಾ. ೧೬ರಿಂದ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ರೂಪಿಸಲಾಗುವುದು ಎಂದರು. ಗೋಷ್ಠಿ ಯಲ್ಲಿ ಹರಗ ಡಾಲಿ ಪ್ರಕಾಶ್, ಶುಂಠಿ ಚರಣ್ ಇದ್ದರು.