ವೀರಾಜಪೇಟೆ, ನ. ೧೨: ಹಾಲಿನ ದರ ಏರಿಕೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರ, ಮತ್ತೊಂದೆಡೆ ಪಶು ಆಹಾರದ ಬೆಲೆ ಏರಿಸುವ ಮೂಲಕ ರೈತರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೊರಿಸುತ್ತಿದೆ. ಸರಕಾರದ ಈ ರೈತ ವಿರೋಧಿ ನೀತಿಯನ್ನು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ೧ರಿಂದ ಹಾಲಿನ ದರವನ್ನು ಪ್ರತಿ ಲೀಟರ್ಗೆ ರೂ.೮ ಹೆಚ್ಚಳ ಮಾಡಿದ್ದು, ಅದರಲ್ಲಿ ರೂ.೭ ನೇರವಾಗಿ ರೈತರಿಗೆ ನೀಡುವುದಾಗಿ ಸರಕಾರ ಘೋಷಿಸಿತ್ತು. ಆದರೆ ರೈತರು ಈ ನಿರ್ಧಾರದಿಂದ ಪ್ರಯೋಜನ ಪಡೆಯುವ ಮುನ್ನವೇ ಪಶು ಆಹಾರದ ಬೆಲೆ ಏರಿಕೆ ಮಾಡಿರುವುದು ಸರಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಒಂದು ಚೀಲ ಪಶು ಆಹಾರದ ಬೆಲೆಯಲ್ಲಿ ರೂ. ೧೦೦ರಿಂದ ರೂ. ೧೫೦ ರವರೆಗೆ ಹೆಚ್ಚಳವಾಗಿದ್ದು, ಹಿಂಡಿಯ ಬೆಲೆ ರೂ. ೧,೬೦೦ರಿಂದ ರೂ. ೧,೭೫೦ಕ್ಕೆ, ಬೂಸಾ ೧,೧೦೦ರಿಂದ ೧,೧೫೦ಕ್ಕೆ ಹಾಗೂ ಡಿಲಕ್ಸ್ ಬ್ರಾನ್ ೧,೫೦೦ರಿಂದ ೧,೬೫೦ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಕಡ್ಲೆ ಹೊಟ್ಟಿನ ಬೆಲೆಯೂ ಹೆಚ್ಚಳವಾಗಿದೆ. ಇದರಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಹೈನುಗಾರರಿಗೆ ಮತ್ತಷ್ಟು ಹೊರೆ ಬೀಳಲಿದೆ.
ಪ್ರಸ್ತುತ ಬರ ಪರಿಸ್ಥಿತಿ ಹಾಗೂ ಹಸಿರು ಮೇವಿನ ಕೊರತೆಯಿಂದಾಗಿ ರೈತರು ಜಾನುವಾರುಗಳ ನಿರ್ವಹಣೆಗೆ ಪಶು ಆಹಾರದ ಮೇಲೆಯೇ ಹೆಚ್ಚಿನ ಅವಲಂಬನೆ ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಪಶು ಆಹಾರದ ಬೆಲೆ ಏರಿಕೆ ಮಾಡಿರುವುದು ಹಾಲು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿ, ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಒಂದು ಕೈಯಲ್ಲಿ ಹಾಲಿನ ದರ ಹೆಚ್ಚಳದ ಲಾಭ ನೀಡಿದಂತೆ ಮಾಡಿ, ಮತ್ತೊಂದು ಕೈಯಲ್ಲಿ ಪಶು ಆಹಾರದ ಬೆಲೆ ಏರಿಸುವ ಮೂಲಕ ರೈತರಿಗೆ ಸಿಗಬೇಕಾದ ಪ್ರಯೋಜನವನ್ನು ಕಸಿದುಕೊಳ್ಳುತ್ತಿರುವುದು ಯಾವ ರೀತಿಯ ರೈತಪರ ಆಡಳಿತ ಎಂದು ಅವರು ಪ್ರಶ್ನಿಸಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡುವ ಕಾಂಗ್ರೆಸ್ ಸರಕಾರ, ರೈತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಬದಲು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿರುವುದು ವಿಪರ್ಯಾಸ. ಸರಕಾರ ನಿಜವಾಗಿಯೂ ರೈತರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದ್ದರೆ ತಕ್ಷಣವೇ ಪಶು ಆಹಾರದ ಬೆಲೆ ಏರಿಕೆಯನ್ನು ನಿಯಂತ್ರಿಸಿ, ಹೈನುಗಾರರಿಗೆ ಆರ್ಥಿಕ ನೆರವು ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಕೇವಲ ಘೋಷಣೆಗಳು ಮತ್ತು ಪ್ರಚಾರಕ್ಕೆ ಸೀಮಿತವಾಗದೆ, ರೈತರ ಬದುಕಿಗೆ ಅನುಕೂಲವಾಗುವಂತಹ ನೈಜ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು. ರೈತರಿಗೆ ತೋರಿಕೆಯ ಅನು
ಕೂಲವಲ್ಲ, ಅವರ ಶ್ರಮಕ್ಕೆ ತಕ್ಕ ನ್ಯಾಯ ಮತ್ತು ಬದುಕಿಗೆ ಭದ್ರತೆ ಬೇಕು ಎಂದು ರಂಜಿ ಪೂಣಚ್ಚ ಆಗ್ರಹಿಸಿದ್ದಾರೆ.