ಗೋಣಿಕೊಪ್ಪಲು, ನ. ೧೨: ಎದುರಿನಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಮಿನಿ ಲಾರಿಯೊಂದು ರಸ್ತೆಗೆ ಮಗುಚಿಕೊಂಡ ಪರಿಣಾಮ ಮೂರು ವರ್ಷದ ಮಗು ಸೇರಿದಂತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಗೋಣಿಕೊಪ್ಪಲು-ತಿತಿಮತಿ ಮುಖ್ಯ ರಸ್ತೆಯ ಸೀಗೆತೋಡು ಬಳಿ ಸಂಭವಿಸಿದೆ.

ಗುರುವಾರ ಬೆಳಿಗ್ಗೆ ಸುಮಾರು ೮.೩೦ರ ವೇಳೆಗೆ ಗೋಣಿಕೊಪ್ಪಲಿನಿಂದ ದೇವರಪುರದ ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿಲಾರಿ ಸೀಗೆತೋಡು ಸಮೀಪದ ಇಳಿಜಾರು ರಸ್ತೆಯ ತಿರುವಿನಲ್ಲಿ ಸಾಗುತ್ತಿದ್ದಾಗ, ಮೈಸೂರು ಕಡೆಯಿಂದ ಕಣ್ಣನೂರಿಗೆ ತೆರಳುತ್ತಿದ್ದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಾರು ವೇಗವಾಗಿ ಎದುರಾಗಿದೆ. ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಲಾರಿ ಚಾಲಕ ಎಡಭಾಗಕ್ಕೆ ವಾಹನವನ್ನು ತಿರುಗಿಸಿದಾಗ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆಗೆ ಅಡ್ಡಲಾಗಿ ಮಗುಚಿಕೊಂಡಿದೆ ಎನ್ನಲಾಗಿದೆ.

ಅಪಘಾತದಲ್ಲಿ ಲಾರಿ ಚಾಲಕ ಎ.ಎ. ಶಂಶೀರ್ ಸೇರಿದಂತೆ ಲಾರಿಯಲ್ಲಿದ್ದ ಅಸ್ಸಾಂ ಮೂಲದ ಕಾರ್ಮಿಕರಾದ ಸರ್ಜಿನ ಬೇಗಂ (೨೦), ಜನಾಬ್ ಬಿಬಿ (೩೨), ಮೆಹಬೂಬ್ ರೆಹಮಾನ್ (೨೬), ನೋಬಿಕೋಲ್ (೩೧), ಮೂರು ವರ್ಷದ ಫರ್ವಿನ್ ಹಾಗೂ ಆಕೆಯ ತಾಯಿ ಜಿಶಾಂತ್ (೨೫) ಗಾಯಗೊಂಡಿದ್ದಾರೆ.

ಲಾರಿ ಮಗುಚಿಕೊಂಡ ರಭಸಕ್ಕೆ ಹಿಂಭಾಗದಲ್ಲಿದ್ದ ಮೂರು ವರ್ಷದ ಮಗು ಫರ್ವಿನ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಗಾಯವಾಗಿದೆ. ಗಾಯಾಳುಗಳನ್ನು ತಕ್ಷಣ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಆ್ಯಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು.

ಗೋಣಿಕೊಪ್ಪಲಿನ ಉದ್ಯಮಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತನ್ವೀರ್ ಅಹಮ್ಮದ್ ಅವರಿಗೆ ಸೇರಿದ ಮಿನಿ ಲಾರಿ ಇದಾಗಿದ್ದು, ಕಾರ್ಮಿಕರನ್ನು ದೇವರಪುರದ ತೋಟಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ.

ಲಾರಿ ರಸ್ತೆಗೆ ಅಡ್ಡಲಾಗಿ ಮಗುಚಿಕೊಂಡಿದ್ದರಿAದ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸಂಚಾರ ದಟ್ಟಣೆ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗೋಣಿಕೊಪ್ಪ ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಸಂಬAಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.