ಮಡಿಕೇರಿ, ನ. ೧೨: ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ತಾ. ೧೭ ರಂದು ನಗರದ ಮೈತ್ರಿ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಗೌರವಾಧ್ಯಕ್ಷ ಎಂ.ಎ. ಅಪ್ಪಯ್ಯ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಸುಮಾರು ೧೦೯೫ ಸದಸ್ಯರಿದ್ದು, ನಿವೃತ್ತ ಪೊಲೀಸರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ವಿವಿಧ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಸಿ.ಎನ್. ಅಪ್ಪಯ್ಯ ಮಾತನಾಡಿ, ಸದಸ್ಯರೆಲ್ಲರಿಗೂ ಆರೋಗ್ಯ ಭಾಗ್ಯ ಯೋಜನೆಯ ಸೌಲಭ್ಯವಿದ್ದು, ನಮ್ಮ ಸಂಘದಲ್ಲಿ ೫೨೦ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ನಿಧನ ಹೊಂದಿದ ಸದಸ್ಯರಿಗೆ ಸಂಘದ ವತಿಯಿಂದ ರೂ.೫ ಸಾವಿರ, ಜಿಲ್ಲಾ ಎಸ್.ಪಿ. ಕಚೇರಿಯಿಂದ ರೂ. ೧೦ ಸಾವಿರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಸದಸ್ಯತ್ವ ಹೊಂದಿರುವ ೮೦ ವರ್ಷ ಮೀರಿದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಮ್ಮ ಹೆಸರನ್ನು ಸಂಘದ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವAತೆ ಕೋರಿದರು.

ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಿಯುಸಿಯಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ ೮೫ ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ಎಂ.ಸಿ. ಕಾವೇರಪ್ಪ ಮಾತನಾಡಿ, ಕೆ.ಎನ್. ಮಾದಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಾರ್ಷಿಕ ಮಹಾಸಭೆಯನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಬಿ. ಬೆಟ್ಟೇಗೌಡ ಉದ್ಘಾಟಿಸಲಿದ್ದಾರೆ. ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಬಿ.ಬಿ. ಅಶೋಕ್ ಕುಮಾರ್, ಹುಬ್ಬಳಿಯ ಡಿಸಿಪಿ ಎನ್.ಎಸ್. ಶ್ರುತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಖಜಾಂಚಿ ಡಿ.ಟಿ. ಬಿದ್ದಪ್ಪ, ನಿರ್ದೇಶಕರುಗಳಾದ ಕೆ.ಎಂ. ಸುಬ್ರಮಣಿ, ಕೆ.ವೈ. ಹಮೀದ್ ಹಾಜರಿದ್ದರು.