ಸೋಮವಾರಪೇಟೆ, ನ. ೧೨: ಹಾಕಿ ಕೂರ್ಗ್ ನೇತೃತ್ವದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಪಂದ್ಯಾವಳಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟಗಳು ತಾ. ೧೪ ಹಾಗೂ ೧೫ ರಂದು ಸೋಮವಾರಪೇಟೆಯ ಜೂನಿಯರ್ ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆಯಲಿವೆೆ ಎಂದು ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ಮಹೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಹಾಕಿ ಕೂರ್ಗ್ ನೇತೃತ್ವದಲ್ಲಿ ನಡೆಯುತ್ತಿರುವ ಲೀಗ್ ಹಾಕಿ ಪಂದ್ಯಾವಳಿಯ ಎರಡು ಸೆಮಿಫೈನಲ್ ಪಂದ್ಯಗಳು ತಾ. ೧೪ರಂದು ಹಾಗೂ ಫೈನಲ್ ಪಂದ್ಯಾಟ ತಾ. ೧೫ರಂದು ಪಟ್ಟಣದ ಟರ್ಫ್ ಮೈದಾನದಲ್ಲಿ ನಡೆಯಲಿದ್ದು, ಈ ಮೂರೂ ಪಂದ್ಯಾವಳಿಗಳನ್ನು ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಸಲು ಹಾಕಿ ಕೂರ್ಗ್ ಅವಕಾಶ ಕಲ್ಪಿಸಿದೆ ಎಂದರು.
ತಾ. ೧೪ರಂದು ಮಧ್ಯಾಹ್ನ ೧ ಗಂಟೆಗೆ ಪ್ರಥಮ ಸೆಮಿ ಫೈನಲ್ ಪಂದ್ಯ ಬೊಟ್ಟಿಯತ್ತ್ನಾಡ್ ಕುಂದ ಹಾಗೂ ಚಾಮರ್ಸ್ ಮಡಿಕೇರಿ ತಂಡಗಳ ನಡುವೆ, ಎರಡನೇ ಸೆಮಿಫೈನಲ್ ಪಂದ್ಯಾಟ ಕೂರ್ಗ್ ಚಾಲೆಂರ್ಸ್ ಮತ್ತು ಶಿವಾಜಿ ನಾಪೋಕ್ಲು ತಂಡಗಳ ನಡುವೆ ನಡೆಯಲಿದೆ ಎಂದರು.
ಸೆಮಿಫೈನಲ್ನಲ್ಲಿ ಜಯಗಳಿಸುವ ಎರಡು ತಂಡಗಳ ನಡುವೆ ಫೈನಲ್ ಪಂದ್ಯಾಟ ತಾ. ೧೫ರಂದು ಪೂರ್ವಾಹ್ನ ೧೦.೩೦ಕ್ಕೆ ಜರುಗಲಿದೆ. ಸುಮಾರು ೨೦ ವರ್ಷಗಳ ನಂತರ ಸೋಮವಾರಪೇಟೆಯಲ್ಲಿ ಲೀಗ್ ಪಂದ್ಯಾಟಗಳು ನಡೆಯುತ್ತಿದ್ದು, ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಕೂರ್ಗ್ ಹಾಕಿ ಅಧ್ಯಕ್ಷ ಲವ, ಕಾರ್ಯದರ್ಶಿ ಚೇತನ್, ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಗೌರವ ಸಲಹೆಗಾರ ಪ್ರಕಾಶ್ ಉಪಸ್ಥಿತರಿದ್ದರು.