ಸೋಮವಾರಪೇಟೆ, ನ. ೧೨: ಅನನ್ಯ ಪರಿಸರ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ “ಹಸಿರು ದೀಪಾವಳಿ” ಆಚರಿಸ ಲಾಯಿತು.
ದೀಪ ಬೆಳಗಿಸಿ ಪರಿಸರ ಉಳಿಸಿ ಎಂಬ ಶೀರ್ಷಿಕೆಯಡಿ ಶಿಕ್ಷಕ ವಿಜಯಕುಮಾರ್ ಅವರು ವಿದ್ಯಾರ್ಥಿಗಳಿಗೆ ಹಸಿರು ದೀಪಾವಳಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಪಟಾಕಿಯನ್ನು ನಮ್ಮ ಮನರಂಜನೆಗೆ ಬಳಸುವುದರಿಂದ ಪರಿಸರ ಹಾಗೂ ಪ್ರಾಣಿ-ಪಕ್ಷಿಗಳ ಮೇಲೆ ತೀವ್ರ ಪರಿಣಾಮ ಬೀರುವುದು. ಶಬ್ಧ ಮಾಲಿನ್ಯದೊಂದಿಗೆ ಪರಿಸರಕ್ಕೂ ಹಾನಿಯಾಗುವುದು ಎಂದು ತಿಳಿಸಿದ ಅವರು, ಹಸಿರು ಪಟಾಕಿಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು.
ಶಿಕ್ಷಕಿ ರಾಜರತ್ನ ಅವರು ಎಲ್ಲರೂ ಪರಿಸರಕ್ಕೆ ಪೂರಕವಾದ ಹಸಿರು ಪಟಾಕಿಯನ್ನೇ ಬಳಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಎಸ್ ಹೇಮಲತಾ, ಶಿಕ್ಷಕರಾದ ಬಸವರಾಜ್, ಶಶಿಧರ್, ಧನ್ಯ, ಚಂದ್ರಕಲಾ, ಋತ್ವಿಕಾ ಹಾಗೂ ವಿದ್ಯಾರ್ಥಿಗಳು ಇದ್ದರು.