ಸುಂಟಿಕೊಪ್ಪ, ನ. ೧೧: ಪಟ್ಟೆಮನೆ ಉದಯಕುಮಾರ್ ಅವರು ಕಳೆದ ೫ ದಶಕಗಳಿಂದ ಭತ್ತದ ಕೃಷಿಯಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿ ಅತ್ಯುತ್ತಮ ಇಳುವರಿ ಭತ್ತದ ಫಸಲನ್ನು ಪಡೆದವರು. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಕೃಷಿ ಇಲಾಖೆಯ ಮೂಲಕ ಬೀಜದ ಭತ್ತವನ್ನು ಪಡೆದು ಭತ್ತದ ನಾಟಿ ಮಾಡಿದ್ದಾರೆ.

ಹವಾಮಾನ ವೈಪರೀತ್ಯ, ಪ್ರತಿಕೂಲ ವಾತವಾರಣದ ನಡುವೆಯೂ ತಮ್ಮ ಅನುಭವದಿಂದ ಭತ್ತದ ನಾಟಿಯನ್ನು ಜೋಪಾನ ಮಾಡಿ ಪೋಷಣೆ ಮಾಡಿಕೊಂಡು ಬಂದ ಪಟ್ಟೆಮನೆ ಉದಯಕುಮಾರ್ ಅವರಿಗೆ ಭತ್ತದ ಕದಿರು ಅಥವಾ ತೆನೆ ಬಿಡುವ ಹೊತ್ತಿಗೆ ಆಘಾತವಾಗಿದೆ. ಒಟ್ಟು ಸರಾಸರಿ ಇಳುವರಿಯ ಪೈಕಿ ಶೇಕಡ ೫ ರಿಂದ ೧೦ ರಷ್ಟೆ ಇಳುವರಿಯಾಗಿದ್ದು ಆತಂಕದಲ್ಲಿದ್ದಾರೆ.

ಅನೇಕ ವರ್ಷಗಳಿಂದ ಕುಶಾಲನಗರ ರೈತ ಸಂಪರ್ಕ ಕೇಂದ್ರದ ಮೂಲಕ ಭತ್ತದ ಬೀಜವನ್ನು ತಂದು ಪೈರು ಮಾಡಿ ಸಸಿ ಮಾಡಿ ನಾಟಿ ಮಾಡಿದ ಪಟ್ಟೆಮನೆ ಉದಯಕುಮಾರ್ ಈಗ ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಈ ಬಾರಿ ಸುಂಟಿಕೊಪ್ಪ ರೈತ ಸಂಪರ್ಕದಿAದ ಆರ್‌ಎನ್‌ಆರ್ ಭತ್ತದ ತಳಿಯನ್ನು ತಂದು ನಾಟಿ ಮಾಡಿರುವ ಉದಯಕುಮಾರ್ ಅವರಿಗೆ ಪೈರು ಬಾರದೆ ಇರಲು ಕಾರಣ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಅವರು ಸಂಬAಧಿಸಿದ ಕೃಷಿ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿದ್ದು, ತಮ್ಮ ಭತ್ತದ ಗದ್ದೆಗೆ ಭೇಟಿ ನೀಡಿ ಬೆಳೆಯ ಸ್ಥಿತಿಗತಿ ಅವಲೋಕಿಸಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.