ಶಕ್ತಿ ವರದಿ
ಮಡಿಕೇರಿ, ನ. ೯: ೨೦೨೮ಕ್ಕೆ ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾಗಲಿದೆ. ಈ ಚುನಾವಣೆಗೆ ಸಂಬAಧಿಸಿದAತೆ ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಭಾರೀ ಕುತೂಹಲ ಸೃಷ್ಟಿಯಾಗುತ್ತಿರುವುದು ಬಿಜೆಪಿ ಪಕ್ಷದಲ್ಲಿ..ಮುಂದಿನ ಬಾರಿಯ ಬಿಜೆಪಿ ಟಿಕೆಟ್ ಯಾರಿಗೆ..ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ಈಗಿನಿಂದಲೇ ಸಂಚಲನ ಮೂಡಿಸುತ್ತಿದೆ. ಮಾಜಿ ಶಾಸಕರುಗಳೇ ಅಭ್ಯರ್ಥಿಗಳಾಗುತ್ತಾರಂತೆ, ಕ್ಷೇತ್ರದಲ್ಲಿ ಇಬ್ಬರು ಬದಲಾವಣೆ ಮಾಡಿಕೊಂಡು ಮತ್ತೊಮ್ಮೆ ಸ್ಪರ್ಧಿಸಲಿದ್ದಾರಂತೆ ಎಂಬುದು ಒಂದು ಮಾತು. ಇದು ಒಂದೆಡೆಯಾದರೆ ಈ ಬಾರಿ ಹೊಸಮುಖಗಳಿಗೆ ಆದ್ಯತೆ ಸಿಗಲಿದೆ ಎಂಬುದು ಮತ್ತೊಂದೆಡೆಯ ಚರ್ಚೆ. ಈ ಬೆಳವಣಿಗೆಯ ನಡುವೆ ಈಗಾಗಲೇ ಪ್ರಮುಖವಾಗಿ ಹೊಸದಾದ ಇಬ್ಬರು ವ್ಯಕ್ತಿಗಳ ಬಗ್ಗೆ ಭಾರೀ ಪ್ರಚಾರವೂ ಸುದ್ದಿಯಾಗುತ್ತಿದೆ.
ಇಬ್ಬರೂ ಹೊಸಮುಖಗಳೇ ಆಗಿರುವುದು ಇನ್ನು ವಿಶೇಷ. ಪಕ್ಷದೊಳಗೆ ಹಲವಷ್ಟು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇವೆ ಎಂಬ ಪ್ರಬಲ ವಾದದೊಂದಿಗೆ ಟಿಕೆಟ್ ಆಕಾಂಕ್ಷಿಗಳ ಮತ್ತೊಂದು ದಂಡೇ ಇದೆ. ಇವರುಗಳೂ ಈಗಿನಿಂದಲೇ ಕ್ರಿಯಾಶೀಲವಾಗಿ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ಆರಂಭಿಸಿರುವುದು ಸಾರ್ವಜನಿಕವಾಗಿ ಬೆಳಕಿಗೆ ಬರುತ್ತಿರುವ ವಿಚಾರವೂ ಹೌದು.
ವಿಶೇಷವಾಗಿ ವೀರಾಜಪೇಟೆ ಕ್ಷೇತ್ರದಿಂದ ಈ ಬಾರಿ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ವ್ಯಕ್ತಿಗಳಿಬ್ಬರ ಓಡಾಟ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಪರಿ ಒಂದಷ್ಟು ಹೆಚ್ಚಿದೆ ಎನ್ನುವುದು ಬಿಜೆಪಿ ಮಾತ್ರವಲ್ಲ..ಇನ್ನಿತರ ಪಕ್ಷಗಳ ಕಾರ್ಯಕರ್ತರ ಗಮನಕ್ಕೂ ಬರುತ್ತಿರುವ ಅಂಶ. ಜಿಲ್ಲಾ ಬಿಜೆಪಿ ಪ್ರಮುಖರಲ್ಲಿ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗುತ್ತಿದೆ.
ಪಕ್ಷದಲ್ಲಿ ಅಸಮಾಧಾನ
ಅಭ್ಯರ್ಥಿಗಳು ಯಾರು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಕೆಲವರು ತಾವು ಅಭ್ಯರ್ಥಿಗಳು ಎಂಬAತೆ ಪ್ರತಿಬಿಂಬಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಪಕ್ಷದೊಳಗೆ ಇದೀಗ ಅಸಮಾಧಾನಕ್ಕೂ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಕೋರ್ ಕಮಿಟಿಯಲ್ಲೂ ಚರ್ಚೆಗಳು ನಡೆದಿರುವುದಾಗಿ ತಿಳಿದುಬಂದಿದೆ.
ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ವರ್ಷಗಳಿಂದ ಪಕ್ಷ ಕಟ್ಟಲು ದುಡಿದವರಿದ್ದಾರೆ. ಶ್ರಮವಹಿಸುತ್ತಿರುವವರು ಈಗಲೂ ಇದ್ದಾರೆ. ಆದರೆ, ಪಕ್ಷದ ತೀರ್ಮಾನಕ್ಕೂ ಮೊದಲು ಈಗಿನಿಂದಲೇ ತಾವೇ ಅಭ್ಯರ್ಥಿಗಳು ಎಂಬAತೆ ಬಿಂಬಿಸಿಕೊಳ್ಳುತ್ತಿರುವ ಪ್ರಯತ್ನ ಸರಿಯಲ್ಲ ಎಂಬುದು ಕೋರ್ ಕಮಿಟಿ ಸಭೆ ಸಂದರ್ಭ ಪ್ರಮುಖರಿಂದ ವ್ಯಕ್ತಗೊಂಡಿರುವ ಅಭಿಪ್ರಾಯವಾಗಿದ್ದು, ಇದನ್ನು ರಾಜ್ಯದ, ಕೇಂದ್ರದ ವರಿಷ್ಠರ ಗಮನಕ್ಕೂ ತರುವ ಅಭಿಪ್ರಾಯ ವ್ಯಕ್ತಗೊಂಡಿದೆ ಎನ್ನಲಾಗಿದೆ.
ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬಾರದೆಂಬ ಅಭಿಪ್ರಾಯವೂ ಕೋರ್ ಕಮಿಟಿಯದ್ದೆನ್ನಲಾಗಿದೆ.
ಪಕ್ಷದಿಂದ ನೇರ ಸೂಚನೆ
ಈ ನಡುವೆ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಿಗೆ ನೇರ ಸೂಚನೆಯನ್ನೂ ನೀಡಲಾಗಿದೆ. ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಅದರ ಸಾರಾಂಶ ಇಂತಿದೆ.
ಕೊಡಗು ಜಿಲ್ಲೆಯಲ್ಲಿ ಬಿಜೆಪಿಯ ಬಗ್ಗೆ ಒಲವು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತಗೊಳ್ಳುತ್ತಿದೆ.
ಇದರ ಪರಿಣಾಮವಾಗಿ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಅನೇಕರು ಬಿಜೆಪಿ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದು ಕೆಲವರು ನಾವೇ ಅಭ್ಯರ್ಥಿಗಳು ಎಂಬAತೆ ಸಾಮಾಜಿಕ ಜಾಲತಾಣ, ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಬಿಂಬಿಸುತ್ತಾ ಪ್ರಚಾರದಲ್ಲಿ ತೊಡಗಿದ್ದು ಕಾರ್ಯಕರ್ತರಲ್ಲಿ ಗೊಂದಲವನ್ನು ಮೂಡಿಸುತ್ತಿದೆ. ಇದು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿರುತ್ತದೆ. ಸಂದರ್ಭ ಬಂದಾಗ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರುಗಳು ಜಿಲ್ಲಾ ಪ್ರಮುಖರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದು ಅಲ್ಲಿಯತನಕ ಯಾವುದೇ ವ್ಯಕ್ತಿ ನಾನೇ ಅಭ್ಯರ್ಥಿ ಎಂಬುದಾಗಿ ಘೋಷಿಸಿಕೊಳ್ಳದೆ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ತೊಡಗಿಸಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಕಾರ್ಯಕರ್ತರಾಗಿ ದುಡಿಯಬೇಕಾಗಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನವಾಗಿದೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕಾಗಿ ಈ ಮೂಲಕ ಸೂಚನೆಯನ್ನು ನೀಡಲಾಗಿದೆ.
ಯಾವುದೇ ವ್ಯಕ್ತಿ ಪಕ್ಷದ ಸಿದ್ಧಾಂತಕ್ಕೆೆ ವಿರುದ್ಧವಾಗಿ ನಡೆದುಕೊಂಡಲ್ಲಿ ಆ ವಿಚಾರವನ್ನು ರಾಜ್ಯದವರ ಗಮನಕ್ಕೆ ತಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಜ್ಯದವರ ಸೂಚನೆಯ ಮೇರೆಗೆ ಈ ವಿಚಾರವನ್ನು ಪ್ರಕಟಿಸಿರುವುದಾಗಿ ಅಧ್ಯಕ್ಷ ಎನ್.ಎಂ. ರವಿ ಕಾಳಪ್ಪ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಸಂದೇಶ ಹರಿಬಿಟ್ಟಿದ್ದಾರೆ.