ಮಡಿಕೇರಿ, ನ. ೮: ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ಬರುವ ೧೪ ಅಕಾಡೆಮಿಗಳಲ್ಲಿ ಈಗಿರುವ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರ ಬದಲಾವಣೆಯಾಗಲಿದೆ ಎಂಬ ಅಂಶ ಕುತೂಹಲ ಸೃಷ್ಟಿಸಿದೆ.
ಈಗಿರುವ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಳ್ಳದಿದ್ದರೂ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯೊಂದಿಗೆ ರಾಜಕೀಯ ಬೆಳವಣಿಗೆ ತಿರುವು ಪಡೆದಿರುವ ಹಿನ್ನೆಲೆ ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಅಕಾಡೆಮಿಗಳ ಸ್ಥಾನದಲ್ಲೂ ಬದಲಾವಣೆಯ ಮಾತು ಕೇಳಿ ಬಂದಿದೆ. ಈಗಾಗಲೇ ಎಲ್ಲಾ ಅಕಾಡೆಮಿ ಅಧ್ಯಕ್ಷರುಗಳಿಗೆ ಪದತ್ಯಾಗ ಮಾಡಲು ಸಂದೇಶ ನೀಡಲಾಗಿದೆ ಎನ್ನಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಸಂಬAಧಿಸಿದ ಕೊಡವ ಅಕಾಡೆಮಿ ಹಾಗೂ ಅರೆಭಾಷಾ ಅಕಾಡೆಮಿಗೂ ತೆರೆಮರೆಯಲ್ಲಿ ಬಿರುಸಿನ ಚಟುವಟಿಕೆ ಆರಂಭಗೊAಡಿದೆ. ಹಾಲಿ ಅಧ್ಯಕ್ಷರುಗಳಾಗಿ ಕೊಡವ ಅಕಾಡೆಮಿಯಲ್ಲಿ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹಾಗೂ ಅರೆಭಾಷಾ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯಲ್ಲಿ ಸದಾನಂದ ಮಾವಾಜಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಬದಲಾವಣೆಯ ಸೂಚನೆ ಅಧಿಕೃತವಾಗಿ ಬಾರದಿದ್ದರೂ ಮೌಖಿಕವಾಗಿ ಈ ಬಗ್ಗೆ ಸಂದೇಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ಎರಡೂ ಅಕಾಡೆಮಿಗಳಿಗೂ ಕೆಲವು ಹೊಸ ಆಕಾಂಕ್ಷಿಗಳು ಪ್ರಯತ್ನ ಆರಂಭಿಸಿದ್ದಾರೆ.
ಕೊಡವ ಅಕಾಡೆಮಿ
ಕೊಡವ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಹಾಗೂ ಕಲಾವಿದರೂ ಆಗಿರುವ ನೆರವಂಡ ಉಮೇಶ್, ಕೊಡವಾಮೆರ ಕೊಂಡಾಟ ಸಂಘಟನೆ ಸ್ಥಾಪಿಸಿ ಈ ಮೂಲಕ ಹಲವು ಚಟುವಟಿಕೆ ನಡೆಸುತ್ತಿರುವ ಯುವಕ ಚಾಮೆರ ದಿನೇಶ್ ಬೆಳ್ಯಪ್ಪ ಅವರುಗಳು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿ ಪಕ್ಷದವರನ್ನೇ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆ ಈ ಬಾರಿ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದರೂ ಹೊಸತನ, ಕೊಡವ ಆಚಾರ - ವಿಚಾರಗಳ ಕೆಲಸಗಳನ್ನು ಮುಂದಿಟ್ಟು ಅವಕಾಶಕ್ಕಾಗಿ ಇತರರ ಬೇಡಿಕೆಯೂ ಇದೆ. ಕೊಡವ ಅಕಾಡೆಮಿ ಅಧ್ಯಕ್ಷ ಸ್ಥಾನಾಕಾಂಕ್ಷಿಗಳಲ್ಲಿ ತೆನ್ನೀರಾ ಮೈನಾ ಅವರೂ ಪ್ರಬಲ ಬೇಡಿಕೆ ಮುಂದಿರಿಸಿದ್ದಾರೆ. ಆಪಟ್ಟಿರ ಟಾಟು ಮೊಣ್ಣಪ್ಪ ಅವರ ಹೆಸರೂ ಈ ಪಟ್ಟಿಯಲ್ಲಿದೆ. ಕೊಡವ ಭಾಷಾ ಜನಾಂಗಕ್ಕೂ ಪ್ರಾತಿನಿದ್ಯ ನೀಡಬೇಕು ಎಂಬ ಒತ್ತಾಯವೂ ಎದುರಾಗಿದೆ. ಡಾ. ಮೇಚಿರ ಸುಭಾಷ್ ನಾಣಯ್ಯ, ಕೂಡಂಡ ಸಾಬ ಸುಬ್ರಮಣಿ ಆಕಾಂಕ್ಷಿಗಳಾಗಿದ್ದಾರೆ.
ಅರೆಭಾಷಾ ಅಕಾಡೆಮಿ
ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸ್ಥಾನ ಈ ಬಾರಿ ಕೊಡಗಿಗೆ ಬೇಕೆಂಬ ಕೂಗು ಕೇಳಿಬಂದಿದೆ. ಶಾಸಕರುಗಳೂ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಅರೆಭಾಷೆ ಅಕಾಡೆಮಿಗೆ ಅವಕಾಶ ಕೋರಿ ಹಲವರು ಈಗಾಗಲೇ ಬೇಡಿಕೆ ಮುಂದಿರಿಸಿದ್ದಾರೆ.
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ಪೈಕಿ ಪ್ರಮುಖವಾಗಿ ಪೊನ್ನಚನ ಮೋಹನ್, ಹೊಸೂರು ಸೂರಜ್, ಬೇಕಲ್ ರಮಾನಾಥ್, ಕಡ್ಲೇರ ತುಳಸಿ ಮೋಹನ್, ಬಾರಿಯಂಡ ಜೋಯಪ್ಪ, ಸೂರ್ತಲೆ ಸೋಮಣ್ಣ ಅವರುಗಳ ಹೆಸರುಗಳು ಕೇಳಿಬರುತ್ತಿವೆ.
ಇವರಲ್ಲಿ ಪೊನ್ನಚನ ಮೋಹನ್ ಅವರ ಹೆಸರು ಮುಂಚೂಣಿಯಲ್ಲಿದೆ. ಈ ನಡುವೆ ಎರಡೂ ಅಕಾಡೆಮಿಯಲ್ಲಿ ಹಾಲಿ ಅಧ್ಯಕ್ಷರುಗಳೇ ಮುಂದುವರಿಯುವ ಹಂಬಲದಲ್ಲೂ ಇದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದು, ಜಿಲ್ಲೆಯ ಇಬ್ಬರು ಶಾಸಕರುಗಳಾಗಿರುವ ಎ.ಎಸ್. ಪೊನ್ನಣ್ಣ, ಡಾ. ಮಂತರ್ಗೌಡ ಅವರ ನಿಲುವೂ ಇಲ್ಲಿ ಮುಖ್ಯ. ಜತೆಗೆ ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.