ಸೋಮವಾರಪೇಟೆ, ನ. ೬: ತಾಲೂಕಿನ ಹೊನವಳ್ಳಿ, ಸುಳಿಮಳ್ತೆ ಮಾರ್ಗದಲ್ಲಿ ೫೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ಡಾ. ಮಂತರ್ ಗೌಡ ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದ್ದು, ಪ್ರತಿಯೊಂದು ಗ್ರಾಮವೂ ಅಭಿವೃದ್ಧಿಯ ಪಥದಲ್ಲಿ ಸಾಗಿದಾಗ ಮಾತ್ರ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಿಸಿದರು.
ಸೋಮವಾರಪೇಟೆ ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಗ್ರಾಮಸ್ಥರು ಕೂಡ ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮದ ರಸ್ತೆಗಳೂ ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂಬ ಕನಸಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಅನುದಾನ ಒದಗಿಸಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸುಳಿಮಳ್ತೆ ಗ್ರಾಮದಲ್ಲಿ ಉಳಿಕೆಯಾಗಿರುವ ೨೦೦ ಮೀಟರ್ ರಸ್ತೆ ಕಾಮಗಾರಿಗೆ ಅನುದಾನ ಕಲ್ಪಿಸಲಾಗುವುದು. ಈ ರಸ್ತೆ ಸುಸಜ್ಜಿತವಾದರೆ, ದೊಡ್ಡಮಳ್ತೆ ಶ್ರೀ ಹೊನ್ನಮ್ಮ ಕೆರೆ ಕ್ಷೇತ್ರಕ್ಕೆ ತೆರಳುವುದಕ್ಕೆ ಉತ್ತಮ ರಸ್ತೆಯಾಗುತ್ತದೆ ಎಂದು ಹೇಳಿದರು.
ಗ್ರಾಮಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹೆಚ್.ಈ. ಪುಟ್ಟಸ್ವಾಮಿ ಮಾತನಾಡಿ, ಹೊನವಳ್ಳಿ ಸುಳಿಮಳ್ತೆ ಗ್ರಾಮದಲ್ಲಿ ಪ್ರಗತಿಪರ ಕೃಷಿಕರೆ ಹೆಚ್ಚಿದ್ದಾರೆ. ಗ್ರಾಮಸ್ಥರ ರಸ್ತೆ ಕನಸು ನನಸಾಗಿದೆ. ಗ್ರಾಮದೊಳಗಿನ ಬಾಕಿಯಾಗಿರುವ ರಸ್ತೆ ಕಾಮಗಾರಿಗೆ ಶಾಸಕರು ಅನುದಾನ ಕಲ್ಪಿಸಿದರೆ ಇನ್ನಷ್ಟು ಉಪಯುಕ್ತವಾಗಲಿದೆ ಎಂದರು.
ಈ ಸಂದರ್ಭ ಹೊನವಳ್ಳಿ - ಸುಳಿಮಳ್ತೆ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ. ಶ್ರೀಧರ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಾಕರ್, ಪ್ರಮುಖರಾದ ಎಂ.ಪಿ. ರವಿ, ಕೆ.ಎಂ. ಲೋಕೇಶ್ ಕುಮಾರ್, ಬಿ.ಬಿ. ಸತೀಶ್, ಚೇತನ್ ಮತ್ತಿತರರು ಇದ್ದರು.