ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ನ. ೬: ಈ ವರ್ಷ ಕರ್ನಾಟಕದಲ್ಲಿ ಕಾಫಿ ಉತ್ಪಾದನೆಯು ನಿಗದಿತ ಗುರಿಗಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕಾಫಿ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ ಕೂರ್ಮ ರಾವ್ ಅವರು ತಿಳಿಸಿದ್ದಾರೆ. ಮಳೆ ಕೊರತೆ, ಕಾರ್ಮಿಕರ ಕೊರತೆ ಮತ್ತು ವಿದ್ಯುತ್ ಸಂಬAಧಿತ ಸಮಸ್ಯೆಗಳೇ ಇದಕ್ಕೆ ಕಾರಣ ಎಂದು ಅವರು ವಿವರಿಸಿದರು. ಈಶಾನ್ಯ ಮಾನ್ಸೂನ್ (ಮುಂಗಾರು ನಂತರದ ಮಳೆ) ಕೈಕೊಟ್ಟರೆ, ಅದು ಮುಂದಿನ ವರ್ಷದ ಬೆಳೆಯ ಮೇಲೆ (೨೦೨೭-೨೮)ತೀವ್ರ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದರು.
“ಶಕ್ತಿ''ಯೊಂದಿಗೆ ಮಾತನಾಡಿದ ಅವರು ಈ ವರ್ಷ ದೇಶದ ಕಾಫಿ ಉತ್ಪಾದನೆಯು ೪ ಲಕ್ಷ ಟನ್ ಆಗಬಹುದು ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಆದರೆ, ಈಗಿನ ಅಂದಾಜಿನ ಪ್ರಕಾರ ಉತ್ಪಾದನೆಯು ಸುಮಾರು ೩.೫ ಲಕ್ಷ ಟನ್ಗಳ ಆಸು ಪಾಸಿನಲ್ಲಿ ಇರುವ ನಿರೀಕ್ಷೆಯಿದೆ. ೨೦೨೪-೨೫ ರಲ್ಲಿ ಒಟ್ಟು ಉತ್ಪಾದನೆ ೩.೬೩ ಲಕ್ಷ ಟನ್ಗಳಷ್ಟಿತ್ತು. ೨೦೨೫-೨೬ ರಲ್ಲಿ ಇದು ೧೦ ಲಕ್ಷ ಟನ್ ಹೆಚ್ಚಾಗಿ ೩.೭೩ ಲಕ್ಷ ಟನ್ಗಳಿಗೆ ಏರಿಕೆ ಆಗಿತ್ತು. ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಈ ವರ್ಷ ನಿಗದಿತ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಕಾಫಿ ಮಂಡಳಿಯು ಹೂ ಮಳೆಯ ನಂತರ ಹಾಗೂ ಮಾನ್ಸೂನ್ ನಂತರ ಬೆಳೆಯ ಅಂದಾಜನ್ನು ಮಾಡುತಿದ್ದು ಪ್ರಸ್ತುತ ಅಂದಾಜು ಸಮೀಕ್ಷೆ ನಡೆಸಲಾಗುತ್ತಿದೆ. ಅಂದಾಜು ಮುಗಿದ ನಂತರವಷ್ಟೆ ನಿಖರ ಮಾಹಿತಿ ದೊರೆಯಲಿದೆ ಎಂದು ಅವರು ಹೇಳಿದರು.
ಏಪ್ರಿಲ್ನಿಂದಲೂ ಮಳೆ ಪ್ರಮಾಣವು ಸಾಮಾನ್ಯಕ್ಕಿಂತ ಕಡಿಮೆಯಿದೆ. ಹಲವು ಕಡೆಗಳಲ್ಲಿ, ಇಡೀ ತಿಂಗಳು ಸುರಿಯಬೇಕಿದ್ದ ಮಳೆಯು ಒಂದೆರಡು ದಿನಗಳಲ್ಲೇ ಸುರಿದುಹೋಗಿದ್ದು, ಕಾಫಿ ಕೃಷಿಗೆ ತೊಂದರೆ ಉಂಟುಮಾಡಿದೆ. ಕಾಫಿ ಉದ್ಯಮವು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಂತಹ ಹೊರ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರನ್ನೇ ಹೆಚ್ಚಾಗಿ ಅವಲಂಬಿಸಿದೆ. ವಿಧಾನಸಭಾ ಚುನಾವಣೆಗಳಿಗಾಗಿ ತಮ್ಮ ತವರು ರಾಜ್ಯಗಳಿಗೆ ತೆರಳಿದ್ದ ಅನೇಕ ಕಾರ್ಮಿಕರು ಸಮಯಕ್ಕೆ ಸರಿಯಾಗಿ ಹಿಂತಿರುಗಲಿಲ್ಲ. ಇದರಿಂದ ತೋಟಗಳಲ್ಲಿನ ಕೆಲಸಗಳಿಗೆ ಅಡಚಣೆಯಾಗಿ, ಅಂತಿಮವಾಗಿ ಬೆಳೆಯ ಮೇಲೂ ಪರಿಣಾಮ ಬೀರಿದೆ.
ಕರ್ನಾಟಕದಲ್ಲಿ ಸುಮಾರು ೨.೪೬ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತಿದ್ದು ವಾರ್ಷಿಕವಾಗಿ ೨.೫ ಲಕ್ಷದಿಂದ ೨.೮ ಲಕ್ಷ ಟನ್ ಕಾಫಿ ಉತ್ಪಾದನೆಯಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ಕಾಫಿ ಬೆಳೆಯುವ ವಿಸ್ತೀರ್ಣದಲ್ಲಿ ಯಾವುದೇ ಹೆಚ್ಚಳವಾಗಿಲ್ಲ , ಇದಕ್ಕೆ ಸೂಕ್ತ ನೆರವು ಸಿಗದಿರುವುದು, ಸಾಲ ಸೌಲಭ್ಯದ ಕೊರತೆ ಮತ್ತು ಪ್ರಕೃತಿಯ ವೈಪರೀತ್ಯಗಳೇ ಕಾರಣ ಆಗಿದೆ. ವಿಯೆಟ್ನಾಂ ಮತ್ತು ಬ್ರೆಜಿಲ್ನಂತಹ ದೇಶಗಳಲ್ಲಿ ಕಾಫಿ ಬೆಳೆಯುವ ಪ್ರದೇಶಗಳು ವೇಗವಾಗಿ ವಿಸ್ತರಿಸುತ್ತಿವೆ, ಆದರೆ ಭಾರತವು ಅಂತಹ ಬೆಳವಣಿಗೆಯನ್ನು ಸಾಧಿಸಲು ಪರದಾಡುತ್ತಿದೆ. “ನಾವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮತ್ತು ಸುಸ್ಥಿರ ಪದ್ಧತಿಯಲ್ಲಿ ಬೆಳೆದ ‘ಅರೇಬಿಕಾ’ (ಂಡಿಚಿbiಛಿಚಿ) ಹಾಗೂ ‘ರೋಬಸ್ಟಾ’ (ಖobusಣಚಿ) ಕಾಫಿಗಳನ್ನು ಉತ್ತೇಜಿಸಬೇಕಿದೆ,” ಎಂದು ಕಾಫಿ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು. ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ಮತ್ತು ಉತ್ತಮ ಬೆಲೆ ಪಡೆಯಲು, ನೆರಳಿನಲ್ಲಿ ಬೆಳೆದ ಕಾಫಿ, ಕೈಯಿಂದ ಕೊಯ್ಲು ಮಾಡಿದ ಕಾಫಿ ಬೀಜಗಳು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇಕಡಾ ೭೦ ರಷ್ಟಿದ್ದು , ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕಾಫಿ ಬೆಳೆಯಲಾಗುತಿದ್ದು ಈ ವರ್ಷ ಮಳೆಯ ಹಾನಿ ಕರ್ನಾಟಕದಲ್ಲೇ ಅಧಿಕವಾಗಿದೆ. ಹೊರ ರಾಜ್ಯಗಳಲ್ಲಿ ಹೆಚ್ಚಿನ ಹಾನಿ ಆಗಿಲ್ಲ ಎಂದು ಮಂಡಳಿಯ ಮೂಲಗಳು ತಿಳಿಸಿವೆ.