ಶ್ರೀಮಂಗಲ, ನ. ೪: ಹಸುಗಳ ಮೇಲೆ ದಾಳಿ ನಡೆಸಿ ಬಲಿಪಡೆದಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಸಚಿವರು ಹಾಗೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು, ಹುಲಿಯ ಗುರುತು ಪತ್ತೆಯಾದ ತಕ್ಷಣವೇ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಹೇಳಿದರು.

ಬುಧವಾರ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸುಗಳನ್ನು ಕಳೆದುಕೊಂಡ ರೈತರನ್ನು ಭೇಟಿ ಮಾಡಿ ಮಾತನಾಡಿದ ಅವರು, ಹುಲಿ ಪತ್ತೆ ಹಾಗೂ ಸೆರೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಹುಲಿ ಗುರುತಿಸುವಿಕೆಗೆ ಹೆಚ್ಚುವರಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಇತ್ಯಾದಿಗಳನ್ನು ಅಳವಡಿಸಿ ಹುಲಿ ಗುರುತು ಪತ್ತೆ ಮಾಡುವಂತೆ ಉನ್ನತ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳ್ಳೂರು ಮತ್ತು ಸಮೀಪದ ಗ್ರಾಮಗಳಲ್ಲಿ ಹುಲಿ ಹಾವಳಿಯಿಂದ ಹಸುಗಳು ಮೃತಪಟ್ಟಿದ್ದು, ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದ್ದು, ಇಲಾಖಾಧಿಕಾರಿಗಳು ಹುಲಿ ಸೆರೆಗೆ ಏನು ಕ್ರಮ ಕೈಗೊಂಡಿದ್ದಾರೆ.? ಎಂಬಿತ್ಯಾದಿ ಮಾಹಿತಿಯನ್ನು ಪಡೆದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಯಾಮೆರಾ, ರಾತ್ರಿ ಚಿತ್ರ ಸೆರೆ ಹಿಡಿಯುವ ಆಧುನಿಕ ತಂತ್ರಜ್ಞಾನದ ಕ್ಯಾಮೆರಾ ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾಹಿತಿಯನ್ನು ಸಹ ಪಡೆದುಕೊಂಡು ಗ್ರೌಂಡ್ ಕ್ಯಾಮೆರಾ ಗಳನ್ನು ಅಳವಡಿಸಿ ಹುಲಿಯನ್ನು ಗುರುತಿಸಿ ಅದನ್ನು ಸೆರೆ ಹಿಡಿಯುವ ಕೆಲಸ ಆಗಬೇಕೆಂದು ಸೂಚಿಸಿದರು.

ಹುಲಿಯು ಹಸುಗಳ ಮೇಲೆ ದಾಳಿ ನಡೆಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಕಾರ್ಮಿಕರು ಸಹ ತೋಟದಲ್ಲಿ ಕೆಲಸ ಮಾಡಲು ಸಮಸ್ಯೆಯಾಗಿದೆ. ಆದ್ದರಿಂದ ಅರಣ್ಯ ಸಚಿವರ ಜೊತೆ ಹಾಗೂ ಪಿಸಿಸಿಎಫ್ ಜೊತೆ ಚರ್ಚೆ ಮಾಡಿ ಹುಲಿಯನ್ನು ಸೆರೆ ಹಿಡಿಯಲು ಕ್ರಮ ಜರುಗಿಸುವ ಕೆಲಸ ಮಾಡುತ್ತೇನೆ ಎಂದು ಪೊನ್ನಣ್ಣ ಹೇಳಿದರು.

ಐದು ವರ್ಷಗಳ ಹಿಂದೆ ಹುಲಿ ದಾಳಿಗೆ ಈ ಭಾಗದಲ್ಲಿ ಹಲವಾರು ಹಸುಗಳು ಬಲಿಯಾಗಿದ್ದು, ಪರಿಹಾರ ತುಂಬಾ ಕಡಿಮೆ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಹಸುಗಳ ಮೇಲೆ ಹುಲಿ ದಾಳಿ ಹೊಸದಾಗಿ ಆಗಿರುವ ವಿಚಾರ ಅಲ್ಲ.ರಾಜಕೀಯ ಮಾಡುವ ವಿಚಾರವೂ ಅಲ್ಲ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹುಲಿ-ಆನೆಗಳಿಂದ ತೊಂದರೆ ಆಗಬೇಕೆಂದು ಯಾರೂ ಸಹ ಬಯಸುವುದಿಲ್ಲ. ಅನೇಕರು ಮುಂಬರುವ ಚುನಾವಣೆಗಳನ್ನು ಮುಂದಿಟ್ಟುಕೊAಡು ಈ ವಿಚಾರದಲ್ಲಿ ರಾಜಕೀಯ ಮಾಡುವ ವಾತಾವರಣ ಒಳ್ಳೆಯದಲ್ಲ, ಇದು ಆರೋಗ್ಯಕರ ಅಲ್ಲ. ಗ್ರಾಮದ ರೈತ ಮಹಿಳೆಯೊಬ್ಬರು ೫ ವರ್ಷದ ಹಿಂದಿನ ಸಮಸ್ಯೆ ಹೇಳುತ್ತಿದ್ದಾರೆ. ಈ ‘ಹುಲಿ ಬೇಟೆಗಾರರು’ ಆಗ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ ಶಾಸಕರು, ರಾಜಕಾರಣ ಮಾಡುವುದು ಒಂದು ಭಾಗವಿರಲಿ, ಯಾರು ಶಾಸಕರಾಗಬೇಕು ಎಂಬುದನ್ನು ಚುನಾವಣೆಯಲ್ಲಿ ಜನ ತೀರ್ಮಾನಿಸುತ್ತಾರೆ ಎಂದರು.

ಈ ಹುಲಿಯನ್ನು ಆದಷ್ಟು ಬೇಗ ಸೆರೆಹಿಡಿದು ಸಮಸ್ಯೆ ಬಗೆಹರಿಸುವ ವಿಶ್ವಾಸ ಇದೆ. ಅರಣ್ಯ ಇಲಾಖೆಯವರು ಸಹ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಗ್ರಾಮಕ್ಕೆ ಹುಲಿ ಬಂದರೆ ಆತಂಕದಿAದ ಪಕ್ಕದ ಊರಿನಲ್ಲಿ ಪಟಾಕಿ ಸಿಡಿಸುವುದರಿಂದ ಹುಲಿ ಸೆರೆಹಿಡಿಯಲು ಹಿನ್ನಡೆಯಾಗುತ್ತದೆ. ಈ ರೀತಿಯಾದಾಗ ಸ್ಥಳೀಯರಿಗೆ ಅರಣ್ಯ ಇಲಾಖೆಯ ಬಗ್ಗೆ ವಿಶ್ವಾಸ ಕಡಿಮೆ ಆಗುತ್ತದೆ. ಆದ್ದರಿಂದ ಅವರಿಗೆ ವಿಶ್ವಾಸ ತುಂಬುವ ಹಾಗೂ ಕಾರ್ಯಾಚರಣೆಯ ಬಗ್ಗೆ ಕೂಲಂಕುಶವಾಗಿ ಅವರ ಮುಂದೆ ತಿಳಿಸುವಂತಹ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.

ತದನಂತರ ಪೊನ್ನಣ್ಣ ಅವರು, ತಮ್ಮ ನಿವಾಸದಲ್ಲಿ ಅರಣ್ಯ ಅಧಿಕಾರಿಗಳ ಸಭೆ ನಡೆಸಿ ಹುಲಿ ಸೆರೆಗೆ ಕೈಗೊಳ್ಳಬೇಕಾದ ಕಾರ್ಯಾಚರಣೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಅಗತ್ಯ ಸೂಚನೆ ನೀಡಿದರು.

ಈ ಸಂದರ್ಭ ವೀರಾಜಪೇಟೆ ಡಿ.ಸಿ.ಎಫ್ ವಿನುತ ಚೌಹಾಣ್ ಅವರು ಮಾತನಾಡಿ, ಹುಲಿ ಗುರುತಿಸುವಿಕೆಗೆ ಶಾಸಕರ ಸೂಚನೆಯಂತೆ ಎಲ್ಲಾ ರೀತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಆರ್‌ಆರ್‌ಎಫ್ ಹಾಗೂ ನಾಗರಹೊಳೆ ಅಭಯಾರಣ್ಯದಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿಕೊಂಡು ಹುಲಿ ಗುರುತಿಸುವಿಕೆಗೆ ಎಲ್ಲಾ ಪ್ರಯತ್ನ ನಡೆಸಲಾಗುವುದು. ಹುಲಿ ಗುರುತಿಸುವಿಕೆ ಆದ ತಕ್ಷಣ ಹುಲಿ ಸೆರೆಗೆ ಅರಣ್ಯ ಸಚಿವರು ಹಾಗೂ ಪಿಸಿಸಿಎಫ್ ಅವರೊಂದಿಗೆ ಸಮಾಲೋಚನೆ ನಡೆಸಿ ಅನುಮತಿ ಒದಗಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ ಎಂದು ಹೇಳಿದರು.

ಹಸುವನ್ನು ಕಳೆದುಕೊಂಡ ಸಂತ್ರಸ್ತ ರೈತ ಕುಟುಂಬ ಬಾಚೀರ ವಾಸು ದೇವಯ್ಯ ಹಾಗೂ ಬಿಂದು ದೇವಯ್ಯ ಅವರು ಮಾತನಾಡಿ, ಶಾಸಕರು ಸ್ಥಳಕ್ಕೆ ಆಗಮಿಸಿ ನಮ್ಮ ಸಮಸ್ಯೆಯನ್ನು ಕೇಳಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ ರೂ.೭೦ ಸಾವಿರದವರೆಗೆ ಪರಿಹಾರವನ್ನು ಒದಗಿಸಲು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ. ಇದರಿಂದ ನಮಗೆ ಸಮಾಧಾನವಾಗಿದೆ ಎಂದು ಹೇಳಿದರು.

ಈ ಸಂದರ್ಭ ಮಡಿಕೇರಿ ವನ್ಯಜೀವಿ ಡಿಸಿಎಫ್ ತಸಿನ ಬಾನು, ತಿತಿಮತಿ ಎಸಿಎಫ್ ಮಂಜುನಾಥ್, ಎಸಿಎಫ್ ಅನನ್ಯ ಕುಮಾರ್, ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಎಸಿಎಫ್ ಎ. ಎ. ಗೋಪಾಲ್, ಆರ್‌ಎಫ್‌ಒ ಗಳಾದ ಪೊನ್ನಂಪೇಟೆಯ ರಾಕೇಶ್, ವೀರಾಜಪೇಟೆಯ ಶಿವರಾಂ, ಆನೆಚೌಕೂರುವಿನ ಗಂಗಾಧರ್, ತಿತಿಮತಿಯ ಮಮ್ತಾಜ್ ಆಯೇಷಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಲಾಲ ಅಪ್ಪಣ್ಣ, ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷ ಬೋಸ್ ಮಾದಪ್ಪ, ಪೊನ್ನಂಪೇಟೆ ವಲಯ ಅಧ್ಯಕ್ಷ ಮೀದೇರಿರ ನವೀನ್, ವಿವಿಧ ವಲಯಗಳ ಅಧ್ಯಕ್ಷರಾದ ಚಂಗುಲAಡ ಸೂರಜ್, ಪ್ರಭು ಸುಬ್ಬಯ್ಯ, ಪೋರಂಗಡ ಪವನ್, ಡಿಸಿಸಿ ಸದಸ್ಯ ಮುಕ್ಕಾಟಿರ ಸಂದೀಪ್ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

-ಅಣ್ಣೀರ ಹರೀಶ್ ಮಾದಪ್ಪ