ಕುಶಾಲನಗರ, ನ. ೪: ಬದುಕಿಗಾಗಿ ಶಿಕ್ಷಣ ಪಡೆಯುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಅರಿತು ನಡೆದರೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ನಿವೃತ್ತ ಶಿಕ್ಷಕ, ಸಮಾಜ ಚಿಂತಕ ಉ.ರಾ.ನಾಗೇಶ್ ತಿಳಿಸಿದರು.

ಕುಶಾಲನಗರ ಫಾತಿಮಾ ಕಾನ್ವೆಂಟ್ ಶಾಲೆಯ ಸುವರ್ಣ ವರ್ಷಾಚರಣೆ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ಅಂಗವಾಗಿ ಮಂಗಳವಾರ ಕನ್ನಡ ರಾಜ್ಯೋತ್ಸವ ಮತ್ತು ಸ್ವಚ್ಛತಾ ಸೇನಾನಿಗಳಾದ ೧೩ ಜನ ಪೌರಕಾರ್ಮಿಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಅವಶ್ಯಕ. ಅಂತಹ ಶಿಕ್ಷಣವನ್ನು ಪಡೆದಾಗ ನಮ್ಮ ಮನಸ್ಸು ಸ್ವಚ್ಛವಾಗುತ್ತದೆ. ಮನಸ್ಸು ಸ್ವಚ್ಛವಾದಾಗ ನಾವು ಮಾಡುವ ಪ್ರತಿಯೊಂದು ಕೆಲಸವು ಅರ್ಥಪೂರ್ಣವಾಗುತ್ತದೆ. ಸ್ವಚ್ಛ ಸಮಾಜಕ್ಕೆ ಕೈಜೋಡಿಸೋಣ, ಪೌರಕಾರ್ಮಿಕರನ್ನು ಗೌರವಿಸೋಣ ಎಂದು ಕರೆ ನೀಡಿದರು.

ಕುಶಾಲನಗರ ಪುರಸಭೆಯ ಆರೋಗ್ಯಾಧಿಕಾರಿ ಉದಯ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್, ಶಾಲಾ ಆಡಳಿತ ಮಂಡಳಿಯ ಸಿಸ್ಟರ್ ಆಗ್ನೆಸ್, ವ್ಯವಸ್ಥಾಪಕಿ ಸಿಸ್ಟರ್ ಪ್ಲೋರೆಟ್, ಸಂಪರ್ಕಾಧಿಕಾರಿ ಸಿಸ್ಟರ್ ಅರ್ಪಿತಾ, ಸಿಸ್ಟರ್ ಸೋಪಿಯಾ, ಶಾಲೆಯ ಸಲಹಾ ಸಮಿತಿಯ ಡಾ. ರಾಮ್ ಭಟ್, ಶಾರಿಕ್, ವೈಶಾಲಿ, ಸಂಚಾರಿ ಠಾಣಾಧಿಕಾರಿ ಗೀತಾ, ವಿಧ್ಯಾರ್ಥಿಗಳು, ಶಿಕ್ಷಕರು, ಇತರೆ ಸಿಬ್ಬಂದಿಗಳು ಇದ್ದರು.