ಸಿದ್ದಾಪುರ, ನ. ೪: ಹಾಡಹಗಲೇ ಹಸುವಿನ ಮಾಲೀಕರ ಎದುರಲ್ಲೇ ಹುಲಿ ದಾಳಿ ನಡೆಸಿ ಹಸು ಮತ್ತು ಕರುವನ್ನು ಬಲಿ ತೆಗೆದುಕೊಂಡಿದ್ದು ಹಸುವಿನ ಮಾಲೀಕರು ಕೂದಲೆಳೆಯ ಅಂತರದಿAದ ಪ್ರಾಣಪಾಯದಿಂದ ಪಾರಾದ ಘಟನೆ ಮರಗೋಡು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಮರಗೋಡು ಗ್ರಾಮದ ನಿವಾಸಿ ಪರ್ಚನ ಮನೋಜ್ ಎಂಬವರು ತಮ್ಮ ಮನೆಯ ಸಮೀಪದ ಕೊಟ್ಟಿಗೆಯಿಂದ ಹಸು ಮತ್ತು ಕರುವನ್ನು ಮೇಯಿಸಲು ತೆರಳುತ್ತಿರುವ ಸಂದರ್ಭ ಕಾಫಿ ತೋಟದ ಒಳಗಿನಿಂದ ಹಠಾತ್ತನೆ ಹುಲಿಯೊಂದು ಹಸು ಮತ್ತು ಕರುವಿನ ಮೇಲೆ ದಾಳಿ ನಡೆಸಿದೆ. ಮಾಲೀಕರ ಎದುರಿನಲ್ಲಿ ನಡೆದ ಘಟನೆಯಿಂದಾಗಿ ಹಸುವಿನ ಮಾಲೀಕ ಮನೋಜ್ ಅವರು ಭಯಗೊಂಡು ಸ್ಥಳದಿಂದ ಓಡಿ ಹೋಗಿದ್ದಾರೆ.

ಹುಲಿಯ ದಾಳಿಗೆ ಸಿಲುಕಿದ ಹಸು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ. ಜೊತೆ ಇದ್ದ ಎಂಟು ತಿಂಗಳ ಕರು ಕೂಡ ಗಂಭೀರ ಗಾಯಗೊಂಡು ಸ್ವಲ್ಪ ಸಮಯ ಬಿಟ್ಟು ಸಾವನ್ನಪ್ಪಿದೆ. ಇದರಿಂದಾಗಿ ಹೈನುಗಾರಿಕೆ ಮಾಡಿಕೊಂಡು ಜೀವನ ಮಾಡುತ್ತಿರುವ ರೈತ ಪರ್ಚನ ಮನೋಜ್ ಅವರಿಗೆ ನಷ್ಟ ಸಂಭವಿಸಿದೆ. ಈ ಬಗ್ಗೆ ಮನೋಜ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಮೂರ್ನಾಡು ವಲಯ ಅರಣ್ಯ ಅಧಿಕಾರಿ ಶಿವಕುಮಾರ್ ಹಾಗೂ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮರಗೋಡು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಂಬಿAಗ್ ನಡೆಸಿದರು.

ಬೋನ್ ಇಡಲು ನಿರ್ಧಾರ

ಮರಗೋಡು ಗ್ರಾಮದಲ್ಲಿ ಹಸು ಮತ್ತು ಕರುವನ್ನು ಹುಲಿ ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಸುವಿನ ಕಳೇಬರವನ್ನು ಇರಿಸಿ ಬೋನ್ ಅಳವಡಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಹುಲಿ ಹಾವಳಿಯಿಂದಾಗಿ ಕಾರ್ಮಿಕರು ಕಾಫಿ ತೋಟಕ್ಕೆ ತೆರಳಲು ಆತಂಕ ಸೃಷ್ಟಿಸಿದೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರಿಗೆ ಇದೀಗ ಹುಲಿ ಹಾವಳಿಯಿಂದಾಗಿ ನೆಮ್ಮದಿ ಇಲ್ಲದಂತಾಗಿದೆ.