ಚೆಯ್ಯAಡಾಣೆ, ನ. ೩: ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳನ್ನು ಕ್ರೀಡೆಯ ಮೂಲಕ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಕೊಡವ ಜಮ್ಮಾ ಮುಸ್ಲಿಂ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ೨೦೨೭ರಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ವಾಲಿಬಾಲ್ ಹಾಗೂ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟಕ್ಕೆ ಸಿದ್ಧತೆಗಳು ಆರಂಭಗೊAಡಿವೆ.

ಎರಡೂ ಕ್ರೀಡಾಕೂಟಗಳ ಆಯೋಜನೆಯ ಜವಾಬ್ದಾರಿ ವಹಿಸಿಕೊಂಡಿರುವ ಕುಟುಂಬಗಳಿಗೆ ಪಂದ್ಯಾಟದ ಧ್ವಜ ಹಸ್ತಾಂತರಿಸುವ ಕಾರ್ಯಕ್ರಮ ವೀರಾಜಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಕುವಲೇರ ಅನಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎರಡನೇ ಆವೃತ್ತಿಯ ವಾಲಿಬಾಲ್ ಪಂದ್ಯಾಟದ ಆಯೋಜನೆಯ ಜವಾಬ್ದಾರಿಯನ್ನು ಚಿಟ್ಟಡೆ ಎರಟೆಂಡ ಕುಟುಂಬಸ್ಥರು ಹಾಗೂ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟದ ಆತಿಥ್ಯದ ಜವಾಬ್ದಾರಿಯನ್ನು ಕುಂಜಿಲ ವಯಕೋಲಂಡ ಕುಟುಂಬಸ್ಥರು ವಹಿಸಿಕೊಂಡರು. ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ಹಿರಿಯರಿಗೆ ಅಧಿಕೃತವಾಗಿ ಪಂದ್ಯಾಟದ ಧ್ವಜವನ್ನು ಹಸ್ತಾಂತರಿಸಲಾಯಿತು.

ಧ್ವಜ ಹಸ್ತಾಂತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕುವಲೇರ ಅನಿಸ್ ಅವರು, ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳ ನಡುವೆ ಪರಸ್ಪರ ಬಾಂಧವ್ಯ, ಸೌಹಾರ್ದತೆ ಹಾಗೂ ಕ್ರೀಡಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಸಂಘದ ವತಿಯಿಂದ ಪ್ರತಿವರ್ಷ ಕ್ರೀಡಾಕೂಟಗಳನ್ನು ಆಯೋಜಿಸ ಲಾಗುತ್ತಿದೆ. ೨೦೨೭ರ ಸಾಲಿನಲ್ಲಿ ವಾಲಿಬಾಲ್ ಪಂದ್ಯಾಟದ ಎರಡನೇ ಆವೃತ್ತಿಯನ್ನು ಎರಟೆಂಡ ಕುಟುಂಬಸ್ಥರು ಹಾಗೂ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ಆವೃತ್ತಿಯನ್ನು ವಯಕೋಲಂಡ ಕುಟುಂಬಸ್ಥರು ಆಯೋಜಿಸುವ ಜವಾಬ್ದಾರಿ ವಹಿಸಿಕೊಂಡಿರುವುದು ಸಂತಸದ ವಿಚಾರ ಎಂದರು.

ಕ್ರೀಡೆ ಕೇವಲ ಗೆಲುವು - ಸೋಲಿನ ಸ್ಪರ್ಧೆಯಾಗದೆ ಕುಟುಂಬಗಳ ನಡುವೆ ಆತ್ಮೀಯತೆ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರವನ್ನು ಬೆಸೆಯುವ ಮಹತ್ವದ ವೇದಿಕೆಯಾಗಬೇಕು. ಕೊಡಗಿನಲ್ಲಿರುವ ಎಲ್ಲಾ ಕೊಡವ ಜಮ್ಮಾ ಮುಸ್ಲಿಂ ಕುಟುಂಬಗಳು ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಂಘಟಕರಿಗೆ ಸಹಕಾರ ನೀಡುವ ಮೂಲಕ ಪಂದ್ಯಾಟಗಳನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಪುಡಿಯಂಡ ಮುನೀರ್, ಕುವಲೇರ ಖಲೀಲ್, ಮಿತಲ ತಂಡ ಲತೀಫ್, ಕುವಲೇರ ಷಂಶುದ್ದೀನ್, ಕುವಲೇರ ರಶೀದ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸದಸ್ಯ ಮಂದಮಡ ಮುನೀರ್ ಅಝಿಝ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.