ಸುಂಟಿಕೊಪ್ಪ, ನ. ೩: ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನ್ವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ಪುಷ್ಪ ಫಲ ವಸ್ತುಗಳಿಂದ ಸಿಂಗರಿಸಲಾಗಿತ್ತು. ಸುಂಟಿಕೊಪ್ಪ ಸಭಾಪಾಲಕ ಜೈಸನ್ಗೌಡರ್ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರ್ಥನೆ, ಆರ್ಶೀವಚನ ನೀಡಿದರು.
ಈ ಸಂದರ್ಭ ಮಂಗಳೂರು ಕೃಷ್ಣಾಪುರದ ಸಿ.ಎಸ್.ಐ. ಕಾರುಣ್ಯ ದೇವಾಲಯದ ಸ್ಟೀವನ್ ಸರ್ವೋತ್ತಮ್ ಮಾತನಾಡಿ, ನಮ್ಮ ದೇವಾಲಯಗಳ ವಾರ್ಷಿಕ ವಿಧಿವಿಧಾನಗಳಲ್ಲಿ ಬೆಳೆ ಹಬ್ಬವು ಪ್ರಮುಖವಾಗಿದ್ದು, ಸತ್ಯವೇದ ಅಥವಾ ಬೈಬಲಿನ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಉತ್ಪನ್ನ ಮತ್ತು ಬೆಳೆದ ಫಲವಸ್ತುಗಳನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಸರ್ಮಪಿಸುವುದು ಒಂದು ಪದ್ಧತಿ ಮತ್ತು ನಂಬಿಕೆಯ ನಡವಳಿಕೆಯಾಗಿದೆ. ಇದರ ಮೂಲಕ ನಮ್ಮನ್ನು ನಾವು ದೇವರಿಗೆ ಪುನಾರವರ್ತಿ ಕಾಣಿಕೆಯಾಗಿ ಸಮರ್ಪಿಸಿಕೊಳ್ಳುವದಾಗಿದೆ. ನಮ್ಮ ಜೀವನದಲ್ಲಿ ಯೇಸು ಸ್ವಾಮಿಯ ಕೃಪೆ ಮತ್ತು ಆಶೀರ್ವಾದಗಳಿಗೆ ಪಾತ್ರರಾಗಿ ಜೀವನವನ್ನು ಮುನ್ನಡೆಸುವುದಾಗಿದೆ ಎಂದು ಹೇಳಿದರು.
ಆನಂತರ ಭಕ್ತಾದಿಗಳು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿದ ವಿವಿಧ ಫಲ ವಸ್ತುಗಳ ಹರಾಜು ಪ್ರಕ್ರಿಯೆ ನಡೆದ ನಂತರ ಸಾಮೂಹಿಕ ಭೋಜನದೊಂದಿಗೆ ಸಂಜೆಯವರೆಗೂ ಆಟೋಟ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿದ್ದಿತು.
ಕಾರ್ಯಕ್ರಮವು ಸುಂಟಿಕೊಪ್ಪ ಸಭಾಪಾಲಕ ಮಧುಕಿರಣ್ ಅವರ ಉಸ್ತುವಾರಿಯಲ್ಲಿ ಸಹಕಾರದೊಂದಿಗೆ ನೇರವೇರಿತು.