ಮಡಿಕೇರಿ, ನ. ೧: ದೇಶದ ಆರ್ಥಿಕ ಪ್ರಗತಿಯಲ್ಲಿ ಉತ್ಪಾದನೆ ಮತ್ತು ರಫ್ತು ವಹಿವಾಟು ಪ್ರಮುಖ ಪಾತ್ರ ವಹಿಸುತ್ತವೆ. ಸ್ಥಳೀಯ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಗುಣಮಟ್ಟದೊಂದಿಗೆ ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡುವ ಮೂಲಕ ದೇಶದ ಜಿಡಿಪಿ ಮತ್ತು ಆರ್ಥಿಕ ಸಂಪತ್ತನ್ನು ಹೆಚ್ಚಿಸಬೇಕಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್. ಯೋಗೀಶ್ ಅವರು ತಿಳಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನಗರದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ‘ಚೇತನ ಚಿಲುಮೆ’ ಸಭಾಂಗಣದಲ್ಲಿ ಜವಳಿ ವಲಯದ ರಫ್ತು ಉದ್ಯಮಿಗಳಿಗಾಗಿ ಆಯೋಜಿಸಿದ್ದ ‘ಜಾಗತಿಕ ಮಾರುಕಟ್ಟೆಗೆ ಜವಳಿ’ ವಿಷಯಾಧಾರಿತ ರಫ್ತು ಪ್ರೋತ್ಸಾಹನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದೇಶದಿಂದ ಸುಮಾರು ೩೭ ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದ್ದು, ೨೦೩೦ರ ವೇಳೆಗೆ ಈ ಪ್ರಮಾಣವನ್ನು ೧೦೦ ಬಿಲಿಯನ್ ಅಮೆರಿಕನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದರೊಂದಿಗೆ ರಫ್ತು ಸಾಮರ್ಥ್ಯ ಹೊಂದಿರುವ ಜಿಲ್ಲೆಗಳನ್ನು ಗುರುತಿಸಿದೆ ಎಂದು ತಿಳಿಸಿದರು.

ಜಿಲ್ಲೆಗಳಲ್ಲಿ ಲಭ್ಯವಿರುವ ಸ್ಥಳೀಯ ಉತ್ಪನ್ನಗಳನ್ನು ಗುಣಮಟ್ಟದೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ವಿದೇಶಗಳಿಗೆ ರಫ್ತು ಮಾಡುವ ಮೂಲಕ ವಿದೇಶಿ ವಿನಿಮಯವನ್ನು ಹೆಚ್ಚಿಸಲು ಅವಕಾಶವಿದೆ. ಇದರಿಂದ ಅಂತರರಾಷ್ಟಿçÃಯ ಮಟ್ಟದಲ್ಲಿ ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಬಲಗೊಳ್ಳಲಿದೆ ಎಂದರು.

ರಫ್ತು ಉತ್ತೇಜನ ಮಂಡಳಿಗಳ ಮೂಲಕ ವಿದೇಶಿ ಖರೀದಿದಾರರ ಸಭೆಗಳು, ವ್ಯಾಪಾರ ಮೇಳಗಳು ಹಾಗೂ ಪ್ರದರ್ಶನ ಆಯೋಜಿಸಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ವಿದೇಶಿ ಖರೀದಿದಾರರನ್ನು ಭಾರತಕ್ಕೆ ಆಹ್ವಾನಿಸಿ ಉದ್ಯಮಿಗಳೊಂದಿಗೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ. ಇಂತಹ ಪ್ರದರ್ಶನಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶಿಸುವುದರಿಂದ ವಿದೇಶಿ ಖರೀದಿದಾರರಿಂದ ಆರ್ಡರ್‌ಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಬಟ್ಟೆ, ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಪ್ರತ್ಯೇಕ ರಫ್ತು ಉತ್ತೇಜನ ಮಂಡಳಿಗಳಿದ್ದು, ಅವುಗಳ ಮೂಲಕ ಉತ್ಪಾದಕರು ರಫ್ತು ಚಟುವಟಿಕೆಗಳಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವುದು, ಗುಣಮಟ್ಟ ಹೆಚ್ಚಿಸುವುದು ಹಾಗೂ ವಿದೇಶಿ ಮಾರುಕಟ್ಟೆಗಳನ್ನು ತಲುಪುವ ಮೂಲಕ ಉದ್ಯಮಿಗಳ ಆದಾಯದ ಜತೆಗೆ ದೇಶದ ವಿದೇಶಿ ವಿನಿಮಯ ಮತ್ತು ಆರ್ಥಿಕ ಬೆಳವಣಿಗೆಗೂ ಕೊಡುಗೆ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಿ.ಎನ್.ರಘು ಮಾತನಾಡಿ, ಕೊಡಗಿನಿಂದ ಉತ್ತಮ ಗುಣಮಟ್ಟದ ಕಾಫಿಯನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಹಂತ ಹಂತವಾಗಿ ಉದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು. ಆ ಮೂಲಕ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಎಂದರು.

ಸರ್ಕಾರವು ವಿವಿಧ ಯೋಜನೆಗಳ ಮೂಲಕ ನಿರುದ್ಯೋಗಿಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷ ಹಾಗೂ ಉದ್ಯಮಿ ಅಂಬೇಕಲ್ ನವೀನ್ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದ ಉದ್ಯಮಿಗಳನ್ನು ರೂಪಿಸಬಹುದು ಎಂದರು.

ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸರ್ಕಾರ ಕೈಮಗ್ಗ ಮತ್ತು ಜವಳಿ ಮಳಿಗೆ ತೆರೆಯುವುದರಿಂದ ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ನಂದಕುಮಾರ್ ಮಾತನಾಡಿ, ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಕೈಮಗ್ಗ ಮತ್ತು ಜವಳಿ ಮಳಿಗೆಗಳನ್ನು ತೆರೆದು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಆ ಮೂಲಕ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದರು. ಅಲ್ಲದೆ, ಸರ್ಕಾರದ ವಿವಿಧ ಯೋಜನೆಗಳನ್ನು ಉದ್ಯಮಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎಚ್.ಆರ್. ರಾಮಕೃಷ್ಣ ಮಾತನಾಡಿ, ಜಾಗತಿಕ ಮಾರುಕಟ್ಟೆಯಲ್ಲಿ ಜವಳಿ ಉತ್ಪನ್ನಗಳ ರಫ್ತು ವಿಸ್ತರಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ರಾಷ್ಟçಮಟ್ಟದಲ್ಲಿ ‘ಸ್ಮಿತ್‌ಆನ್ ಟೆಕ್ಸ್ಟೈಲ್ಸ್ ಫಾರ್ ಗ್ಲೋಬಲ್ ಮಾರ್ಕೆಟ್ ಸ್ಟಾçಟಜಿ ಫಾರ್ ಅಚೀವ್‌ಮೆಂಟ್ ಯುಎಸ್‌ಡಿ ೧೦೦ ಬಿಲಿಯನ್ ಎಕ್ಸ್ಪೋರ್ಟ್ಸ್’ ಕುರಿತು ಸಮಾವೇಶ ಆಯೋಜಿಸಿದ್ದಾರೆ. ಪ್ರಸ್ತುತ ಸುಮಾರು ೪೦ ಬಿಲಿಯನ್ ಅಮೆರಿಕನ್ ಡಾಲರ್ ಇರುವ ಜವಳಿ ರಫ್ತು ವಹಿವಾಟನ್ನು ೨೦೩೦ರ ವೇಳೆಗೆ ೧೦೦ ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರ ಅಂಗವಾಗಿ ಕೊಡಗು ಜಿಲ್ಲೆಯಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಬಿ.ಎಸ್.ಸೋಮಶೇಖರ್ ಮಾತನಾಡಿ, ನಮ್ಮಲ್ಲಿರುವ ಉತ್ಪನ್ನಗಳನ್ನು ಹೆಚ್ಚಿನ ಮಟ್ಟದಲ್ಲಿ, ಗುಣಮಟ್ಟದಲ್ಲಿ ಉತ್ಪಾದನೆ ಮಾಡಬೇಕು, ಜೊತೆಗೆ ಅದನ್ನು ಹೊರದೇಶಗಳಿಗೆ ರಫ್ತು ಮಾಡುವ ಮೂಲಕ ನಮ್ಮ ದೇಶದ ಆರ್ಥಿಕತೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳಾದ ಭಾಗ್ಯ, ದೀಪ್ತಿ ಮತ್ತು ರಶ್ಮಿ ಪ್ರಾರ್ಥಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಬಿ.ಎಸ್.ಸೋಮಶೇಖರ್ ಸ್ವಾಗತಿಸಿದರು. ನೇಕಾರರಾದ ಮೇಘಾ ನಾಯಕ್ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಫ್ತು ಕ್ರೀಯಾ ಯೋಜನೆಯ ಪುಸ್ತಕ ಬಿಡುಗಡೆ ಮಾಡಲಾಯಿತು. ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.