ಮಡಿಕೇರಿ, ಅ.೩೧:ಕೊಡಗು ಪ್ರವಾಸೋದ್ಯಮ ಅಭಿವೃದ್ಧಿ ಸಂಬAಧಿತ ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗುತ್ತದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರಕಟಿಸಿದ್ದು, ಕೊಡಗಿನ ಪ್ರವಾಸಿ ತಾಣಗಳಿಗೆ ತೆರಳುವ ೫ ಕಿ.ಮೀ.ಯೊಳಗಿನ ಗ್ರಾಮೀಣ ರಸ್ತೆಗಳನ್ನು ಶೀಘ್ರಗತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದೂ ಘೋಷಿಸಿದ್ದಾರೆ.

ನಗರದ ಹೊರವಲಯದಲ್ಲಿನ ಕೂರ್ಗ್ ವೈಲ್ಡರ್ ನೆಸ್ ರೆಸಾರ್ಟ್ನಲ್ಲಿ ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್‌ನ ವಾರ್ಷಿಕ ಮಹಾಸಭೆ ಹಿನ್ನಲೆಯಲ್ಲಿ ಆಯೋಜಿತ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಡಿಮೆ ಸೌಕರ್ಯಗಳ ನಡುವೇ ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಗಮನ ಸೆಳೆದಿದೆ. ಪ್ರವಾಸೋದ್ಯಮಕ್ಕೆ ಬಹಳ ಮುಖ್ಯವಾಗಿರುವ ರಸ್ತೆಗಳ ಅಭಿವೃದ್ಧಿಗೆ ತಾನು ಎಲ್ಲಾ ರೀತಿಯಲ್ಲಿಯೂ ಸಹಾಯ ನೀಡುವುದಾಗಿಯೂ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು. ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸಚಿವರ ಸಭೆ ನಡೆಸಿ ಕೊಡಗು ಪ್ರವಾಸೋದ್ಯಮದ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದ ಸಚಿವರು, ಕೊಡಗಿನ ಗ್ರಾಮೀಣ ಭಾಗದಲ್ಲಿರುವ ೫ ಕಿ.ಮೀ.ಯೊಳಗಿನ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ತುರ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕೊಡಗಿನಲ್ಲಿ ಪ್ರವಾಸೋದ್ಯಮ ತರಬೇತಿ ಕೇಂದ್ರ ಸ್ಥಾಪನೆ, ಅಂತರರಾಜ್ಯ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮಿನಿ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಬೇಡಿಕೆಗಳ ಬಗ್ಗೆ ತಾನು ಗಂಭೀರವಾಗಿ ಗಮನ ನೀಡುವುದಾಗಿಯೂ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ೨೦ ವರ್ಷಗಳ ಬಳಿಕ ರಾಜ್ಯ ಸರ್ಕಾರದಿಂದ ಮೂರೂವರೆ ವರ್ಷಗಳಲ್ಲಿ ೪ ಸಾವಿರ ಸೇತುವೆಗಳನ್ನು ರಾಜ್ಯವ್ಯಾಪಿ ನಿರ್ಮಿಸಲಾಗಿದೆ ಎಂದು ಹೇಳಿದ ಸಚಿವರು, ಕಳೆದ ಹಲವಾರು ವರ್ಷಗಳಿಂದ ರಾಜ್ಯ ಸರ್ಕಾರಗಳು ಮುಂಗಡ ಪತ್ರದಲ್ಲಿ ಲೋಕೋಪಯೋಗಿ ಇಲಾಖೆಗೆ ನೀಡುತ್ತಿರುವ ೧೦ ಸಾವಿರ ಕೋಟಿ ರು. ವಾರ್ಷಿಕ ಅನುದಾನವನ್ನು ಹೆಚ್ಚು ಮಾಡಲೇ ಇಲ್ಲ ಎಂದು ವಿಷಾದಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಪ್ರವಾಸೋದ್ಯಮ ದೃಷ್ಟಿಯಿಂದ ಕೊಡಗನ್ನು ನಿರ್ಲಕ್ಷಿಸಲಾಗುವುದಿಲ್ಲ. ಕೊಡಗಿನ ನೈಜ ಸೌಂದರ್ಯ ಸಂರಕ್ಷಿಸುವಲ್ಲಿ ಸ್ಥಳೀಯ ಪರಿಸರವಾದಿಗಳ ಕೊಡುಗೆ ಮಹತ್ವದ್ದಾಗಿದೆ ಎಂದರು. ಕೊಡಗಿನಲ್ಲಿ ಹಿಂದಿನ ಕಾಲದಲ್ಲಿದ್ದ ನದಿ ತೊರೆ, ಕಾಡು, ಜಾನುವಾರು, ಗ್ರಾಮೀಣ ಪ್ರದೇಶಗಳ ಸೌಂದರ್ಯವನ್ನು ಭವಿಷ್ಯದ ಪೀಳಿಗೆಗೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಕರೆ ನೀಡಿದ ಪೊನ್ನಣ್ಣ, ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಈ ಅಮೂಲ್ಯ ನಿಸರ್ಗವನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಬ್ದಾರಿಯೂ ನಮ್ಮೆಲ್ಲರ ಮೇಲಿದೆ ಎಂದರು. ಕೊಡಗಿನ ಮೂಲ ಸಂಸ್ಕೃತಿ ಮತ್ತು ಸೌಂದರ್ಯವನ್ನು ಸಂರಕ್ಷಿಸಲು ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು. ಕೊಡಗಿಗೆ ಬರುವ ಪ್ರವಾಸಿಗರಿಂದ ಮಾತ್ರ ತ್ಯಾಜ್ಯ ಮಾಲಿನ್ಯ ನಡೆಯುತ್ತಿಲ್ಲ, ಸ್ಥಳೀಯರು ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಕೂಡ ತ್ಯಾಜ್ಯ ವಿಲೇವಾರಿ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಎ.ಎಸ್. ಪೊನ್ನಣ್ಣ ಮನವಿ ಮಾಡಿದರು. ಕೊಡಗಿಗೆ ಬರುವ ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಬದ್ದವಾಗಿದೆ ಎಂದೂ ಅವರು ಭರವಸೆ ನೀಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ೨ ಸಾವಿರ ಕಿ.ಮೀ ರಾಜ್ಯ ಹೆದ್ದಾರಿಯಿದ್ದು, ೩,೫೦೦ ಕಿ.ಮೀ. ಗ್ರಾಮೀಣ ರಸ್ತೆಗಳಿವೆ. ಮಳೆಯಿಂದಾಗಿ ಗುಂಡಿಬಿದ್ದಿರುವ ರಸ್ತೆಗಳನ್ನು ಶೀಘ್ರವೇ ದುರಸ್ಥಿಗೊಳಿಸಲಾಗುತ್ತದೆ ಎಂದರು. ಸ್ಥಳೀಯ ಸಂಸ್ಥೆಗಳು ಪ್ರವಾಸೋದ್ಯಮ ತಾಣಗಳ ನಿರ್ವಹಣೆ, ನಿಯಂತ್ರಣಕ್ಕೆ ಮುಂದಾಗಿ, ಸ್ಥಳೀಯರಿಗೆ ಉದ್ಯೋಗ ಕಲ್ಸಿಸುವುದನ್ನು ಆದ್ಯತೆಯಾಗಿ ಪರಿಗಣಿಸುವಂತೆಯೂ ಶಾಸಕ ಮಂತರ್ ಗೌಡ ಕರೆ ನೀಡಿದರು.

ವಿಳಂಬವಾಗಿರುವ ಕೊಡವ ಹೆರಿಟೇಜ್ ಕೇಂದ್ರದ ಅಂತಿಮ ಹಂತದ ಕಾಮಗಾರಿಗೆ ಸರ್ಕಾರದಿಂದ ೫ ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ. ನವಂಬರ್‌ನಿAದ ಕಾಮಗಾರಿಗೆ ಮತ್ತಷ್ಟು ವೇಗ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಶಾಸಕ ಮಂತರ್ ಗೌಡ ನುಡಿದರು.

ಕೊಡಗು ಜಿಲ್ಲೆಯಲ್ಲಿ ಭೂಕುಸಿತ ದುರಂತ ಸಂಭವಿಸಿದ ನಂತರ ಅಧಿಕಾರಿಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಿದ್ದು ಪರಿಸರಕ್ಕೆ ಧಕ್ಕೆ ಬರುವಂಥ ಕಾರ್ಯಗಳಿಗೆ ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಪರಿಶೀಲನೆಯ ಪ್ರಕ್ರಿಯೆಯಿಂದಾಗಿ ಕೆಲವೊಂದು ಸರ್ಕಾರಿ ಕೆಲಸಗಳು ವಿಳಂಬವಾಗುತ್ತಿದೆ ಎಂದೂ ಶಾಸಕ ಮಂತರ್ ಅಭಿಪ್ರಾಯಪಟ್ಟರು. ಕೊಡಗಿನ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸೋದ್ಯಮ ರಂಗಕ್ಕೆ ಬರುತ್ತಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ತ್ಯಾಜ್ಯ ನಿರ್ವಹಣೆಯಲ್ಲಿ ರೆಸಾರ್ಟ್, ಹೊಟೇಲ್‌ಗಳು ಮತ್ತಷ್ಟು ಕಾಳಜಿ ತೋರಬೇಕಾಗಿದೆ ಎಂದು ಸೂಚಿಸಿದರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ಮಾತನಾಡಿ, ಇತರೆಡೆಗೆ ಹೋಲಿಸಿದರೆ ಕೊಡಗಿನಲ್ಲಿ ಎಲ್ಲಾ ರೀತಿಯ ಪ್ರವಾಸಿಗರಿಗೂ ಮೆಚ್ಚುಗೆಯಾಗಬಲ್ಲಂಥ ಸೌಂದರ್ಯವಿದೆ. ಪ್ರಕೃತ್ತಿಯೇ ಕೊಡಗಿನ ನಿಜವಾದ ಆಸ್ತಿ. ಹೀಗಾಗಿ ಈ ಅಮೂಲ್ಯ ಸಂಪತ್ತಿಗೆ ಧಕ್ಕೆ ಬಾರದಂತೆ ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದು ಅವರು ನುಡಿದರು. ಭವಿಷ್ಯದಲ್ಲಿ ಕೊಡಗಿನ ಇತಿಹಾಸವನ್ನು ದಾಖಲಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ. ಮಡಿಕೇರಿಯ ಕೋಟೆ ಅರಮನೆಗೆ ಧ್ವನಿಬೆಳಕು, ಲೇಸರ್ ಪ್ರದರ್ಶನದ ಯೋಜನೆಗೂ ಚಾಲನೆ ನೀಡಲಾಗುತ್ತದೆ ಎಂದರು. ಉತ್ತರ ಭಾರತದ ಮಾದರಿಯನ್ನು ಅಭ್ಯಸಿಸಿ, ಕೊಡಗಿನಲ್ಲಿಯೂ ಪರಿಸರ, ಹವಾಮಾನಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದು ಸಲಹೆ ನೀಡಿದ ಸಂಸದರು, ಕೊಡಗಿನ ಗಡಿಯಾದ ಕುಶಾಲನಗರದವರೆಗೂ ಉತ್ತಮ ಗುಣಮಟ್ಟದ ಹೆದ್ದಾರಿ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.

ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಮಾತನಾಡಿ, ೧೯೯೦ ರಲ್ಲಿ ಪ್ರಾರಂಭವಾದ ಹೋಟೇಲ್ ಅಸೋಸಿಯೇಷನ್ ಪ್ರಸ್ತುತ ೧೮೦ ಸದಸ್ಯರನ್ನು ಹೊಂದಿದೆ. ಜಿಲ್ಲೆಯಲ್ಲಿ ೮೬ ಹೋಟೇಲ್, ೬೩ ರೆಸಾರ್ಟ್ಗಳು, ೩೧ ರೆಸ್ಟೋರೆಂಟ್‌ಗಳ ಸದಸ್ಯತ್ವ ಹೊಂದಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಗೆ ಮೂರು ವರ್ಷಗಳಲ್ಲಿ ೧.೨೫ ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು, ಈ ವರ್ಷ ಜನವರಿಯಿಂದ ಸೆಪ್ಟಂಬರ್ ಅಂತ್ಯಕ್ಕೆ ೨೮ ಲಕ್ಷ ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿದ್ದಾರೆ. ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಕೊಡಗು - ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನ ದೊರಕಿತ್ತು ಎಂದು ಹೆಮ್ಮೆಯಿಂದ ನುಡಿದರು.

ಕರ್ನಾಟಕ ಹೋಟೇಲ್ ಅಸೋಸಿಯೇಷನ್ ಅಧ್ಯಕ್ಷ ಮಧುಕರ್ ಶೆಟ್ಟಿ ಮಾತನಾಡಿ, ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ರಾಜ್ಯದಲ್ಲಿ ೪೨ ಸಾವಿರ ಹೋಟೇಲ್ ಉದ್ಯಮಿಗಳಿದ್ದು ೧.೫೦ ಕೋಟಿ ಕಾರ್ಮಿಕರಿಗೆ ಹೋಟೇಲ್ ಉದ್ಯಮ ಉದ್ಯೋಗ ನೀಡಿದೆ ಎಂದೂ ಅವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸರ್ಕಾರಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಕೊಡಗು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಶಶಿಧರ್, ಕೂರ್ಗ್ ಹೊಟೇಲ್ ರೆಸಾರ್ಟ್ ಅಸೋಸಿಯೇಷನ್ ಖಜಾಂಚಿ ಸಾಗರ್ ಗಣಪತಿ, ಜಂಟಿ ಕಾರ್ಯದರ್ಶಿ ಡಿ.ಕೆ. ಮಂಜುನಾಥ್ ವೇದಿಕೆಯಲ್ಲಿದ್ದರು.

ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸೀರ್ ಅಹಮ್ಮದ್ ಸ್ವಾಗತಿಸಿ, ನಿರ್ದೇಶಕ ಹರಿಕೃಷ್ಣನ್ ವಂದಿಸಿದರು. ಸಂಘದ ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ನಿರೂಪಿಸಿದರು. ಸಭೆಗೂ ಮುನ್ನ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ನೇತೃತ್ವದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸಚಿವರು, ಶಾಸಕರಿಗೆ ಪ್ರವಾಸೋದ್ಯಮ ಸಂಬAಧಿತ ೧೬ ಪ್ರಮುಖ ಬೇಡಿಕೆಗಳ ಪ್ರಸ್ತಾವನೆಯನ್ನು ಸಂವಾದದ ಮೂಲಕ ನೀಡಿದರು.