ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಅ. ೩೧: ರಾಜ್ಯಾದ್ಯಂತ ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆಗಳೇ ಇಲ್ಲದ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಸರ್ಕಾರ ನಿರ್ಧರಿಸಿದ್ದು, ನವೆಂಬರ್ ೨ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಆಸ್ತಿ ಮಾಲೀಕರ ಬಹು ದಿನಗಳ ಸಮಸ್ಯೆ ಪರಿಹರಿಸಲು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳಿಗೆ ತಿದ್ದುಪಡಿ ಮಾಡಿ, ಅಧಿಸೂಚನೆ ಹೊರಡಿಸಲಾಗಿದ್ದು, ಇ-ಸ್ವತ್ತು ೨ ತಂತ್ರಾAಶದಲ್ಲೂ ಕೆಲವು ಮಾರ್ಪಾಡು ಮಾಡಲಾಗಿದೆ.
ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವಾರು ತಲೆಮಾರುಗಳಿಂದ ವಾಸಿಸುತ್ತಿರುವ ಅಂದಾಜು ೨೫ - ೩೦ ಲಕ್ಷ ನಿವಾಸಿಗಳಿಗೆ ಇದರಿಂದ ಅನುಕೂಲವಾಗಲಿದೆ. ದಾಖಲೆಗಳು ಲಭ್ಯವಿಲ್ಲದ ಗ್ರಾಮಠಾಣಾ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳಿಂದ ವಿನಾಯಿತಿ ನೀಡಲಾಗಿದ್ದು, ೨೦೨೫ ಏಪ್ರಿಲ್ ೭ರ ಪೂರ್ವದ ವಿದ್ಯುತ್ ಬಿಲ್ ಆಧಾರದ ಮೇಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಇ - ಸ್ವತ್ತು ನೀಡಲಾಗುವುದು ಎಂದರು.
ಈ ರೀತಿ ದಾಖಲೆ ಇಲ್ಲದವರಿಗೆ ಇ-ಸ್ವತ್ತು ನೀಡುವಾಗ ನ್ಯಾಯಾಲಯದಲ್ಲಿ ವ್ಯಾಜ್ಯ ಏನಾದರೂ ಇದ್ದರೆ, ಭಾಗಕ್ಕಾಗಿ ತಗಾದೆ ಇದ್ದರೆ, ಅಥವಾ ಅರ್ಜಿ ಸಲ್ಲಿಸಿದವರು ಮೂಲ ಮಾಲೀಕರಲ್ಲದಿದ್ದಲ್ಲಿ ಅಥವಾ ಇನ್ಯಾವುದೇ ಸಿಂಧುವಾದ ಕಾರಣವಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ತೊಡಕು ಎದುರಾಗದಂತೆ, ಸ್ವತ್ತಿನ ಮಾಲೀಕರಿಂದ ಪ್ರಮಾಣಪತ್ರ ಪಡೆದು, ಅವರು ಸಲ್ಲಿಸಿರುವ ಮಾಹಿತಿ ತಪ್ಪಾಗಿದ್ದಲ್ಲಿ ಇ - ಸ್ವತ್ತು ಪ್ರಮಾಣ ಪತ್ರ ರದ್ದು ಮಾಡಬಹುದು ಎಂದು ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು ಎಂದೂ ಸಚಿವರು ತಿಳಿಸಿದರು. ವಸತಿ ಯೋಜನೆಗೆ ಸಂಬAಧಿಸಿದAತೆ ಸರ್ಕಾರದಿಂದ ಯಾವುದೇ ಹಕ್ಕುಪತ್ರ ಪಡೆದಿದ್ದು, ಪ್ರಸ್ತುತ ಹಕ್ಕುಪತ್ರ ಲಭ್ಯವಿಲ್ಲದಿದ್ದರೂ ಕೂಡ ಹಕ್ಕುಪತ್ರ ವಿತರಣಾ ಪ್ರಾಧಿಕಾರದ ಧೃಢೀಕರಣ ಪತ್ರ ಪಡೆದು ಇ - ಸ್ವತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಮಲೆನಾಡು ಪ್ರದೇಶಗಳಿಗೆ ಅನುಕೂಲವಾಗುವಂತೆ ಕಣ ಮನೆ/ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲಾಗುವುದು ಎಂದರು.
ಇದಲ್ಲದೆ ನಮೂನೆ ೧೧ ಬಿ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಿ ಗ್ರಾಮೀಣ ಭಾಗದ ಜನರು ಯಾವುದೇ ನೋಂದಾಯಿತ ಪತ್ರ ಇಲ್ಲದೇ ತಮ್ಮ ಕೃಷಿ ಜಮೀನಿನಲ್ಲಿ ವಾಸ/ಕೃಷಿ ಉಪಯೋಗಕ್ಕೆ ನಿರ್ಮಿಸಿರುವ ಕಟ್ಟಡಗಳಿಗೆ ಇ - ಸ್ವತ್ತು ನಮೂನೆ ೧೧ ಬಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಭೂಮಿಯಲ್ಲಿ ವಸತಿ ಯೋಜನೆಯಡಿ ಸೃಜನೆಯಾಗಿರುವ ಕಟ್ಟಡಗಳಿಗೆ ಮತ್ತು ಪಾರಂಪರಿಕವಾಗಿ ಅರಣ್ಯವಾಸಿಗಳು, ಅರಣ್ಯ ಭಾಗದಲ್ಲಿ ವಾಸವಾಗಿರುವವರು ಅರಣ್ಯ ಹಕ್ಕು ಕಾಯಿದೆಯಂತೆ ಹಕ್ಕು ಪತ್ರ ಪಡೆದಿದ್ದಲ್ಲಿ ಅಂತಹ ಆಸ್ತಿಗಳಿಗೆ ನಮೂನೆ ಪಡೆಯಲು ಈ ತಿದ್ದುಪಡಿ ನಿಯಮದಲ್ಲಿ ಅವಕಾಶ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಹಿತ್ತಲು, ಮನೆಯಂಗಳ ಸೇರಿ ಒಟ್ಟು ೪ ಸಾವಿರ ಚದರಡಿಯೊಳಗಿರುವ ನಿವೇಶನ, ಆಸ್ತಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಈ ತಿದ್ದುಪಡಿಯಿಂದ ಗ್ರಾಮೀಣ ಭಾಗದ ಪ್ರತಿಶತ ೯೦ಕ್ಕೂ ಹೆಚ್ಚು ಆಸ್ತಿಗಳಿಗೆ ನಮೂನೆ ೧೧ಎ/೧೧ಬಿ ನೀಡಲು ಅವಕಾಶ ಆಗಲಿದೆ ಎಂದು ತಿಳಿಸಿದರು.