ಕಡಂಗ, ಅ. ೩೧: ಹಿಂಗಾರು ಕೃಷಿಯನ್ನು ಉಳಿಸಿ, ರೈತರಲ್ಲಿ ಕೃಷಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಡಂಗದಲ್ಲಿ ಹಿಂಗಾರು ಕೃಷಿ ಉಳಿಸಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಡಂಗ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮಮ್ಮದ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ವಿಜ್ಞಾನಿ ವೀರೇಂದ್ರ ಕುಮಾರ್ ಮಾತನಾಡಿ, ಪ್ರಾಕೃತಿಕ ಕೃಷಿ ಪದ್ಧತಿಗಳು, ಮಣ್ಣು ಪರೀಕ್ಷೆಯ ಮಹತ್ವ, ಬೆಳೆಗಳ ಸಂರಕ್ಷಣೆ ಹಾಗೂ ಕಾಫಿ, ಅಡಿಕೆ ಮತ್ತು ಕಾಳುಮೆಣಸು ಬೆಳೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಉತ್ತಮ ಗುಣಮಟ್ಟದ ಸಸಿಗಳನ್ನು ಗುರುತಿಸುವ ವಿಧಾನ ಹಾಗೂ ವಿವಿಧ ಕೃಷಿ ಚಟುವಟಿಕೆಗಳ ಬಗ್ಗೆಯೂ ರೈತರಿಗೆ ಮಾರ್ಗದರ್ಶನ ನೀಡಿದರು.

ಮಡಿಕೇರಿಯ ಕೃಷಿ ಅಧಿಕಾರಿ ವರದರಾಜು ಮಾತನಾಡಿ, ಕೃಷಿ ಇಲಾಖೆ ವತಿಯಿಂದ ರೈತರಿಗೆ ಲಭ್ಯವಿರುವ ಯಂತ್ರೋಪಕರಣಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬAಧಿಸಿದ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭ ರೈತ ಅಭಿವೃದ್ಧಿ ಯೋಜನೆಯಡಿ ಮಣ್ಣಿನ ಆರೋಗ್ಯ ನಿರ್ವಹಣೆ, ಮಣ್ಣು ಆರೋಗ್ಯ ತರಬೇತಿ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳ ಕುರಿತು ಅಧಿಕಾರಿಗಳು ರೈತರಿಗೆ ತಿಳುವಳಿಕೆ ನೀಡಿದರು.

ಈ ಸಂದರ್ಭ ಕೃಷಿ ಇಲಾಖೆಯ ಮೋನಿಷಾ, ಮೋನಿಕಾ, ಹಿತ, ಕೃಷಿ ಸಖಿ ಅಂಬಿಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.