ನಾಪೋಕ್ಲು, ಅ. ೩೦: ಸಮೀಪದ ನೆಲಜಿ ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಉಪಟಳ ಆರಂಭಗೊAಡಿದ್ದು, ಬೆಳೆದು ನಿಂತ ಭತ್ತದ ಬೆಳೆಯನ್ನು ನಾಶಪಡಿಸಿರುವುದರಿಂದ ಗ್ರಾಮಸ್ಥರು ಹಾಗೂ ಕೃಷಿಕರು ತೀವ್ರ ಹೈರಾಣಾಗಿದ್ದಾರೆ.
ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ನೆಲಜಿ ಗ್ರಾಮದ ಕೃಷಿಕ ಬಾಳೆಯಡ ಲವ ಬೆಳ್ಳಿಯಪ್ಪ ಅವರ ಭತ್ತದ ಗದ್ದೆಗೆ ದಾಳಿ ನಡೆಸಿದ ಕಾಡಾನೆಗಳ ಹಿಂಡು, ಪೈರುಗಳನ್ನು ತುಳಿದು ಹಾಳುಮಾಡುವ ಮೂಲಕ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ.
ಈಗಾಗಲೇ ಹವಾಮಾನ ವೈಪರೀತ್ಯ, ಕೂಲಿ ಕಾರ್ಮಿಕರ ಅಭಾವ ಹಾಗೂ ರಸಗೊಬ್ಬರಗಳ ಬೆಲೆ ಏರಿಕೆಯಂತಹ ಹತ್ತಾರು ಸವಾಲುಗಳಿಂದ ನಲುಗಿರುವ ರೈತರು, ಅತ್ಯಂತ ಕಷ್ಟಪಟ್ಟು ಭತ್ತದ ಬೆಳೆ ಬೆಳೆದಿದ್ದಾರೆ. ಭತ್ತದ ಬಿತ್ತನೆ ಹಾಗೂ ನಾಟಿ ಸಂದರ್ಭದಲ್ಲೂ ಕಾಡಾನೆಗಳ ಹಾವಳಿ ಇತ್ತು. ಇದೀಗ ಪೈರುಗಳು ಉತ್ತಮವಾಗಿ ಬೆಳೆದು ಕದಿರು ಬಿಡುವ ಹಂತ ತಲುಪಿರುವಾಗಲೇ ಕಾಡಾನೆಗಳು ದಾಳಿ ನಡೆಸಿ ಬೆಳೆ ನಾಶಪಡಿಸಿರುವುದು ರೈತರನ್ನು ಕಂಗೆಡಿಸಿದೆ.
ರಾತ್ರಿ ವೇಳೆ ಕಾಡಾನೆಗಳು ಮತ್ತೆ ದಾಳಿ ನಡೆಸಿ ಉಳಿದ ಪೈರುಗಳನ್ನು ನಾಶಪಡಿಸುವ ಭೀತಿ ಎದುರಾಗಿದೆ. ಆದ್ದರಿಂದ ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು, ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳಬೇಕು ಮತ್ತು ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೃಷಿಕ ಬಾಳೆಯಡ ಲವ ಬೆಳ್ಳಿಯಪ್ಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ದುಗ್ಗಳ ಸದಾನಂದ