ವೀರಾಜಪೇಟೆ, ಅ. ೩೦: ವೀರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಪಾಲಂಗಾಲ ಗ್ರಾಮದ ಕರಿನೆರವಂಡ ವಿನು ಪೊನ್ನಪ್ಪ (೪೧) ಅವರು ತಾ. ೨೧ರಂದು ಸಂಜೆ ಮನೆಯಿಂದ ತೆರಳಿದವರು ಮರಳಿ ಬಾರದ ಹಿನ್ನೆಲೆಯಲ್ಲಿ ಅವರ ತಾಯಿ ಅ. ೨೬ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಸಂದರ್ಭ ವಿನು ಪೊನ್ನಪ್ಪ ಅವರೊಂದಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದ ತೋರ ಗ್ರಾಮದ ಮುದ್ದು ಸೋಮಯ್ಯ ಎಂಬಾತನನ್ನು ವಿಚಾರಣೆಗಾಗಿ ಠಾಣೆಗೆ ಹಾಜರಾಗುವಂತೆ ಪೊಲೀಸರು ದೂರವಾಣಿ ಮೂಲಕ ಸೂಚಿಸಿದ್ದರು. ಆದರೆ, ಪೊಲೀಸ್ ತನಿಖೆಯ ಭೀತಿಯಿಂದ ಮುದ್ದು ಸೋಮಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುದ್ದು ಸೋಮಯ್ಯ ಅವರ ಮೊಬೈಲ್ ಪರಿಶೀಲಿಸಿದ ವೇಳೆ ಕೊಲೆ ಮಾಡಿರುವ ಸಂದೇಶವನ್ನು ತನ್ನ ಪತ್ನಿಗೆ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಆದರೆ, ಈ ಸಂದೇಶ ಪತ್ನಿಗೆ ರವಾನೆಯಾಗಿರಲಿಲ್ಲ. ಮಾಹಿತಿ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕಾಡಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ವಿನು ಪೊನ್ನಪ್ಪ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮಡಿಕೇರಿಯ ವಿಧಿವಿಜ್ಞಾನ ವಿಭಾಗದ ವೈದ್ಯ ಕಿಶೋರ್ ಕುಮಾರ್ ನೇತೃತ್ವದ ತಂಡ ಗ್ರಾಮಸ್ಥರ ಸಹಕಾರದೊಂದಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ಹಾಗೂ ಶವಪರೀಕ್ಷೆ ನಡೆಸಿತು. ಬಳಿಕ ಮೃತದೇಹವನ್ನು ವಾರಿಸುದಾರರಿಗೆ ಹಸ್ತಾಂತರಿಸಲಾಯಿತು. ಘಟನಾ ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿ ಪ್ರಮೋದ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶವಪರೀಕ್ಷೆಯ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.