ಸೋಮವಾರಪೇಟೆ, ಅ.೩೦: ರೈತರ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿರುವ ರೈತ ಹೋರಾಟ ಸಮಿತಿಯ ಅಧ್ಯಕ್ಷರ ಮನೆ ಮೇಲೆ ಅರಣ್ಯ ಇಲಾಖೆಯವರು ಸುಖಾ ಸುಮ್ಮನೆ ಧಾಳಿ ನಡೆಸಿ, ಮನೆಯವರನ್ನು ಬೆದರಿಸಿದ್ದು, ಇದನ್ನು ಖಂಡಿಸಿ ನ.೨ರಂದು ಸೋಮವಾರಪೇಟೆಯಲ್ಲಿರುವ ಅರಣ್ಯ ಇಲಾಖಾ ಕಚೇರಿಗೆ ರೈತರಿಂದ ಮುತ್ತಿಗೆ ಹಾಕಲಾಗುವುದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿರುವ ಸಿ ಮತ್ತು ಡಿ ಜಾಗ ಸಮಸ್ಯೆ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರೋಧ, ಸೆಕ್ಷನ್-೪ ಸಮಸ್ಯೆ ಸೇರಿದಂತೆ ಅರಣ್ಯ ಇಲಾಖೆ ರೈತ ವಿರೋಧಿ ಧೋರಣೆ ವಿರುದ್ಧ ನಿರಂತರ ಹೋರಾಟ ಸಂಘಟಿಸುತ್ತಿರುವ, ರೈತ ಹೋರಾಟ ಸಮಿತಿಯ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅವರ ಮನೆ ಮೇಲೆ ಅನಧಿಕೃತವಾಗಿ ಅರಣ್ಯ ಇಲಾಖಾಧಿಕಾರಿ ಧಾಳಿ ನಡೆಸಿ, ಬೆದರಿಕೆಯೊಡ್ಡಿದ್ದಾರೆ ಎಂದರು.
ತಾ. ೧೯ರಂದು ಸುರೇಶ್ ಅವರು ಮನೆಯಲ್ಲಿ ಇಲ್ಲದ ಸಂದರ್ಭ ಆಗಮಿಸಿರುವ ಅರಣ್ಯಾಧಿಕಾರಿಗಳ ತಂಡ, ಏಕಾಏಕಿ ಮನೆಯೊಳಗೆ ಪ್ರವೇಶಿಸಿ, ಮರವನ್ನು ಎಲ್ಲಿ ಅಡಗಿಸಿಟ್ಟಿದ್ದೀರಾ? ಎಂದು ಪ್ರಶ್ನಿಸಿ ಪತ್ನಿ ಹಾಗೂ ಮಗನನ್ನು ಬೆದರಿಸಿದ್ದಾರೆ. ಮನೆಯ ಎಲ್ಲಾ ಕೊಠಡಿಗಳನ್ನು ಹುಡುಕಾಡಿದ್ದಾರೆ. ಮರಗಳನ್ನು ಎಲ್ಲೂ ದಾಸ್ತಾನು ಮಾಡಿಲ್ಲ ಎಂದು ತಿಳಿಸಿದರೂ ಕೇಳದೇ, ಬೆದರಿಕೆಯೊಡ್ಡಿದ್ದಾರೆ ಎಂದು ದಿನೇಶ್ ಹೇಳಿದರು.
ಈ ಬಗ್ಗೆ ಸುರೇಶ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಅರಣ್ಯಾಧಿಕಾರಿಗಳ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿಲ್ಲ. ಸಮಿತಿಯ ಅಧ್ಯಕ್ಷರ ಮನೆ ಮೇಲೆ ಧಾಳಿ ನಡೆಸಲು ಕಾರಣವೇನು? ಈ ಬಗ್ಗೆ ಸುಳ್ಳು ಮಾಹಿತಿ ನೀಡಿದವರಾರು? ಸುಖಾಸುಮ್ಮನೆ ಧಾಳಿ ನಡೆಸಿ ಬೆದರಿಕೆಯೊಡ್ಡಿದ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಅರಿಯುವ ಸಲುವಾಗಿ ನ. ೨ರಂದು ಅರಣ್ಯ ಇಲಾಖಾಧಿಕಾರಿಗಳ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.
ರೈತರ ಹೋರಾಟವನ್ನು ಹತ್ತಿಕ್ಕುವ ಯತ್ನ ಬೇಡ. ರೈತರು ಸಿಡಿದೆದ್ದರೆ ಮುಂದಾಗುವ ಪರಿಣಾಮಗಳನ್ನು ಇಲಾಖೆ ಎದುರಿಸಬೇಕಾಗುತ್ತದೆ ಎಂದ ಅವರು, ಕಾಜೂರು ಅರಣ್ಯದಲ್ಲಿದ್ದ ಲಕ್ಷಾಂತರ ಮೌಲ್ಯದ ತೇಗದ ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿನ ಕಳ್ಳರನ್ನು ಹಿಡಿಯುವ ಬದಲು ರೈತ ಪರ ಹೋರಾಟ ಮಾಡುವ ಹೋರಾಟಗಾರರನ್ನು ಬೆದರಿಸುತ್ತಿರುವುದು ಸರಿಯಲ್ಲ ಎಂದರು.
ಮುAದಿನ ದಿನಗಳಲ್ಲಿ ಅರಣ್ಯ ಇಲಾಖೆಯವರೇ ಹೋರಾಟಗಾರರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸುವ ಸಂಭವವಿದೆ. ಮರ, ವನ್ಯಪ್ರಾಣಿಗಳ ಭಾಗಗಳನ್ನು ತಂದು ಮನೆಯ ಪ್ರದೇಶದೊಳಗಿಟ್ಟು, ನಂತರ ಕಾರ್ಯಾಚರಣೆಯ ಪ್ರದರ್ಶನ ಮಾಡುವ ಸಂಶಯವೂ ಇದೆ. ಅರಣ್ಯ ಇಲಾಖೆಯಿಂದ ಇಂತಹ ಕೃತ್ಯಗಳು ನಡೆದರೆ ರೈತರ ಹೋರಾಟದ ಹಾದಿ ಬೇರೆಯದೇ ತಿರುವು ಪಡೆದುಕೊಳ್ಳಲಿದೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳು ಎಚ್ಚರಿಕೆಯಿಂದಿರಬೇಕು ಎಂದರು.
ರೈತ ಹೋರಾಟ ಸಮಿತಿ ಮುಖಂಡ ಬಗ್ಗನ ಅನಿಲ್ ಮಾತನಾಡಿ, ರೈತ ಹೋರಾಟ ಸಮಿತಿಯ ಅಧ್ಯಕ್ಷರ ಮನೆ ಮೇಲೆ ಧಾಳಿ ನಡೆಸಿ ಸುಳ್ಳು ಮೊಕದ್ದಮೆ ದಾಖಲಿಸಲು ಅರಣ್ಯ ಇಲಾಖೆ ಯತ್ನ ನಡೆಸಿರುವ ಸಂಶಯವಿದೆ. ಹೋರಾಟ ಹತ್ತಿಕ್ಕಲು ರಾಜಕೀಯ ಪ್ರೇರಿತ ಹಾಗೂ ಆಡಳಿತ ವ್ಯವಸ್ಥೆಯ ಪಿತೂರಿಯಿದೆ. ಇದರ ಹಿಂದೆ ಯಾವ ಕೈವಾಡವಿದೆ ಎಂಬುದು ತಿಳಿಯಬೇಕು ಎಂದರು. ಯಾವುದೇ ಷಡ್ಯಂತ್ರö ನಡೆಸಿದರೂ ಹೋರಾಟ ಸಮಿತಿ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ರೈತ ಹೋರಾಟ ಸಮಿತಿ ಕಾನೂನು ಸಲಹೆಗಾರ ಬಿ.ಜೆ. ದೀಪಕ್, ಕಾರ್ಯದರ್ಶಿ ಕೂತಿ ದಿವಾಕರ್, ಹರಗ ಮಿಥುನ್ ಇದ್ದರು.