(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಅ. ೨೯: ಕೊಡವ ಕುಟುಂಬಗಳ ನಡುವಿನ ಗಿನ್ನಿಸ್ ದಾಖಲೆ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಖ್ಯಾತಿಯ ಕೌಟುಂಬಿಕ ಹಾಕಿ ನಮ್ಮೆ ಸರಿಸುಮಾರು ೧೫ ವರ್ಷಗಳ ಸುದೀರ್ಘ ಅಂತರದ ಬಳಿಕ ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಜರುಗಲಿದೆ.

ಹಾಕಿಗೆ ಅತಿ ಹೆಚ್ಚಿನ ಪ್ರೋತ್ಸಾಹದೊಂದಿಗೆ ಭಾರೀ ಸಂಖ್ಯೆಯಲ್ಲಿ ಹಾಕಿ ಅಭಿಮಾನಿಗಳು ಸೇರುವ ಪ್ರದೇಶಗಳಲ್ಲಿ ಒಂದಾದ ಪೊನ್ನಂಪೇಟೆಯಲ್ಲಿ ೨೦೧೧ ರಲ್ಲಿ ನಡೆದ ಮಚ್ಚಾಮಾಡ ಕಪ್ ಹಾಕಿ ಉತ್ಸವದ ಬಳಿಕ ಈತನಕ ಮತ್ತೆ ಹಾಕಿ ನಮ್ಮೆ ಆಯೋಜನೆಗೊಂಡಿರಲಿಲ್ಲ. ಇದೀಗ ೨೭ನೆಯ ವರ್ಷದ ಕೌಟುಂಬಿಕ ಹಾಕಿ ಉತ್ಸವ ನಡೆಸುವ ಜವಾಬ್ದಾರಿ ಪಡೆದಿರುವ ಅಜ್ಜಿಕುಟ್ಟಿರ ಕುಟುಂಬಸ್ಥರು ೨೦೨೭ನೆಯ ವರ್ಷದ ಹಾಕಿ ಪಂದ್ಯಾವಳಿಯನ್ನು ಪೊನ್ನಂಪೇಟೆಯಲ್ಲಿ ನಡೆಸಲು ತೀರ್ಮಾನಿಸಿದ್ದು, ಪ್ರತಿಷ್ಠಿತವಾದ ಹಾಕಿ ಉತ್ಸವದ ಸಿದ್ಧತೆಗಳು ಹಂತ ಹಂತವಾಗಿ ಆರಂಭಗೊಳ್ಳುತ್ತಿವೆ.

ಉತ್ಸವದ ಯಶಸ್ವಿ ಆಯೋಜನೆಗಾಗಿ ಅಜ್ಜಿಕುಟ್ಟಿರ ಕುಟುಂಬಸ್ಥರು ಈಗಾಗಲೇ ಹಾಕಿ ಉತ್ಸವ ಸಮಿತಿಯನ್ನು ರಚಿಸಿಕೊಂಡಿದ್ದು, ಹಲವು ಸಭೆಗಳನ್ನು ನಡೆಸಿದ್ದಾರೆ. ಕೊಡಗಿನ ಹಾಕಿ ಅಕಾಡೆಮಿಯೊಂದಿಗೂ ಒಂದೆರಡು ಸಭೆಗಳನ್ನು ನಡೆಸಲಾಗಿದ್ದು, ಪೂರ್ವಭಾವಿ ಚರ್ಚೆಗಳು ನಡೆದಿವೆ.

ಸಮಿತಿಯ ಪೋಷಕಾಧ್ಯಕ್ಷರಾಗಿ ಶಾಸಕ ಎ.ಎಸ್. ಪೊನ್ನಣ್ಣ, ಅಧ್ಯಕ್ಷರಾಗಿ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಉಪಾಧ್ಯಕ್ಷರುಗಳಾಗಿ ಎ.ಎ. ಚಂಗಪ್ಪ ಹಾಗೂ ಎ.ಟಿ. ಪೂವಯ್ಯ, ಕಾರ್ಯದರ್ಶಿಯಾಗಿ ಎ.ಬಿ. ಪೂಣಚ್ಚ, ಜಂಟಿ ಕಾರ್ಯದರ್ಶಿಯಾಗಿ ಎ.ಸಿ. ಗಿರೀಶ್, ಖಜಾಂಚಿಯಾಗಿ ತೇಜ್ ತಮ್ಮಯ್ಯ ಸೇರಿದಂತೆ ಸಮಿತಿ ಸದಸ್ಯರುಗಳಾಗಿ ಮಹಿಳೆಯರೂ ಸೇರಿ ೧೫ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟರ್ಫ್ ಸೇರಿದಂತೆ ೩ ಮೈದಾನ

ಈ ಬಾರಿಯ ಹಾಕಿ ನಮ್ಮೆ ಪೊನ್ನಂಪೇಟೆಯ ಟರ್ಫ್ ಮೈದಾನವೂ ಸೇರಿದಂತೆ ಸನಿಹದ ಇನ್ನಿತರ ಎರಡು ಮಣ್ಣಿನ ಮೈದಾನಗಳಲ್ಲಿ ನಡೆಯಲಿದೆ. ೨೦೧೪ ರಲ್ಲಿ ಅಳವಡಿಕೆಯಾಗಿದ್ದ ಹಸಿರು ಬಣ್ಣದ ಸಿಂಥೆಟಿಕ್ ಟರ್ಫ್ಅನ್ನು ಈಗಾಗಲೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಬದಲಿಸಲಾಗುತ್ತಿದ್ದು, ನೂತನವಾಗಿ ಬ್ಲೂ ಟರ್ಫ್ ಸಿದ್ಧಗೊಳ್ಳಲಿದೆ.

ಹಾಕಿ ಉತ್ಸವದ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಟರ್ಫ್ ಮೈದಾನದಲ್ಲೂ ಕೌಟುಂಬಿಕ ಹಾಕಿ ಪಂದ್ಯಗಳು ನಡೆಯಲಿರುವುದು ಒಂದು ವಿಶೇಷವಾಗಿದೆ.

ಹೊನಲು ಬೆಳಕು

ಹಾಕಿ ನಮ್ಮೆಯ ಉದ್ಘಾಟನಾ ಸಮಾರಂಭ ಹಾಗೂ ಫೈನಲ್ ಪಂದ್ಯ ಟರ್ಫ್ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ಜರುಗಲಿರುವುದು ಮುಂದಿನ ವರ್ಷದ ಪಂದ್ಯಾವಳಿಯ ಮತ್ತೊಂದು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆಕರ್ಷಣೆಯಾಗಲಿದೆ. ಪ್ರಿಕ್ವಾರ್ಟರ್ ಹಂತದಿAದ ಎಲ್ಲಾ ಪಂದ್ಯಗಳನ್ನು ಟರ್ಫ್ ಮೈದಾನದಲ್ಲೇ ನಡೆಸುವ ಚಿಂತನೆಯನ್ನು ಈಗಾಗಲೇ ಆಯೋಜಕರು ಪ್ರಕಟಿಸಿದ್ದಾರೆ.

ಲೋಗೋ ಬಿಡುಗಡೆಗೆ ಸಿದ್ಧತೆ

ಅಜ್ಜಿಕುಟ್ಟಿರ ಕಪ್ ಹಾಕಿ ಉತ್ಸವದ ಲೋಗೋಅನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇದರ ಅನಾವರಣ ಸಮಾರಂಭ ಬೆಂಗಳೂರಿನ ಶಾಂತಿನಗರದಲ್ಲಿರುವ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನವೆಂಬರ್ ತಿಂಗಳಿನಲ್ಲಿ ಸದ್ಯದಲ್ಲೇ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಲ್ಲಿ ಸಂಜೆ ನಡೆಯುವ ಸಮಾರಂಭದಲ್ಲಿ ಲೋಗೋ ಬಿಡುಗಡೆ ಮಾಡಲಿದ್ದಾರೆ.

ಪಂದ್ಯಾವಳಿ

ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಅನುಗುಣವಾಗಿ ಬಹುಶಃ ಏಪ್ರಿಲ್ ೯ ರಿಂದ ಮೇ ೨ ರತನಕ ಉತ್ಸವ ಆಯೋಜಿಸುವ ಕುರಿತು ಚಿಂತನೆ ನಡೆಸಲಾಗಿದೆ.

ಪೊನ್ನಂಪೇಟೆಯಲ್ಲಿ...

ಕೌಟುAಬಿಕ ಹಾಕಿ ಉತ್ಸವ ಈತನಕ ಒಟ್ಟು ೫ ಬಾರಿ ಪೊನ್ನಂಪೇಟೆಯಲ್ಲಿ ಜರುಗಿದೆ. ೨೦೦೦ನೇ ಇಸವಿಯಲ್ಲಿ ಚೆಪ್ಪುಡಿರ ಕಪ್, ೨೦೦೬ ರಲ್ಲಿ ಕಳ್ಳಿಚಂಡ ಕಪ್, ೨೦೧೦ ರಲ್ಲಿ ಮನೆಯಪಂಡ ಕಪ್, ೨೦೧೧ ರಲ್ಲಿ ಮಚ್ಚಾಮಾಡ ಕಪ್ ಹಾಕಿ ಪಂದ್ಯಾವಳಿ ಇಲ್ಲಿ ಜರುಗಿತ್ತು.

ತದನಂತರದಲ್ಲಿ ಅಮ್ಮತ್ತಿ, ಬಾಳುಗೋಡು, ವೀರಾಜಪೇಟೆ, ಮಡಿಕೇರಿ, ನಾಪೋಕ್ಲು ಕಡೆಗಳಲ್ಲೇ ಹಾಕಿ ಉತ್ಸವ ಜರುಗಿದ್ದು, ಈ ಬಾರಿ ಮತ್ತೊಮ್ಮೆ ಪೊನ್ನಂಪೇಟೆಗೆ ಕೌಟುಂಬಿಕ ಹಾಕಿ ಬರುತ್ತಿರುವುದು ಈ ವಿಭಾಗದ ಹಾಕಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.