ಸೋಮವಾರಪೇಟೆ,ಅ.೨೯: ತಾಲೂಕಿನ ಶಾಂತಳ್ಳಿ ಹಾಗೂ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ರೂ. ೧.೪೦ ಕೋಟಿ ವೆಚ್ಚದ ನೂತನ ಯೋಜನೆಗಳಿಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.
ಶಾಂತಳ್ಳಿಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ರೂ.೭೫ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಸೆಸ್ಕ್ ಶಾಖಾ ಕಚೇರಿ ನಿರ್ಮಾಣ ಕಾಮಗಾರಿ ಹಾಗೂ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಳ್ಳಿ ಗ್ರಾಮದಲ್ಲಿ ರೂ. ೬೫ ಲಕ್ಷ ವೆಚ್ಚದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗುವ ಆಯುಷ್ಮಾನ್ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ಶಾಂತಳ್ಳಿ ಭಾಗದಲ್ಲಿ ಹಲವು ವರ್ಷಗಳಿಂದ ಸೆಕ್ಷನ್ ಕಚೇರಿಯ ಬೇಡಿಕೆಯಿತ್ತು. ಈ ಭಾಗದಲ್ಲಿ ವಾರ್ಷಿಕವಾಗಿ ಹೆಚ್ಚು ಮಳೆಯಾಗುವ ಹಿನ್ನೆಲೆ ವಿದ್ಯುತ್ ಸಂಬAಧಿತ ಅಡಚಣೆಗಳು ಹೆಚ್ಚಾಗಿವೆ. ಈ ಹಿನ್ನೆಲೆ ಸ್ಥಳೀಯ ವಾಗಿ ೪೦/೫೦ ಅಳತೆಯ ಶಾಖಾ ಕಚೇರಿ ನಿರ್ಮಾಣವಾಗಲಿದೆ. ಇಲಾಖೆಗೆ ಸಂಬAಧಿಸಿದ ಎಲ್ಲಾ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಸೋಮವಾರಪೇಟೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪಟ್ಟಣವನ್ನು ಅವಲಂಭಿಸಬೇಕಿತ್ತು. ಇದೀಗ ಶಾಂತಳ್ಳಿಯಲ್ಲಿಯೇ ಸೆಸ್ಕ್ ಕಚೇರಿ ಸ್ಥಾಪನೆಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಮಡಿಕೇರಿ ಕ್ಷೇತ್ರದಾದ್ಯಂತ ೧೦೦ ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಸೆಸ್ಕ್ನಿಂದ ನಡೆಯುತ್ತಿದೆ. ಅಂಡರ್ಗ್ರೌAಡ್ ಕೇಬಲ್ ಅಳವಡಿಕೆಯನ್ನು ಇಡೀ ಕೊಡಗಿಗೆ ಅಳವಡಿಸುವಂತೆ ಬೇಡಿಕೆಯಿಡಲಾಗಿತ್ತು. ಇದಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಪ್ರಸ್ತುತ ಮಡಿಕೇರಿ ಪಟ್ಟಣ ವ್ಯಾಪ್ತಿಯಲ್ಲಿ ೯೦ಕೋಟಿ ವೆಚ್ಚದಲ್ಲಿ ಯು.ಜಿ. ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲಿದೆ ಎಂದರು.
೮ ಕೋಟಿ ಅನುದಾನದ ನಿರೀಕ್ಷೆ: ಶಾಂತಳ್ಳಿಯಲ್ಲಿ ೩೩ ಕೆ.ವಿ. ವಿದ್ಯುತ್ ಘಟಕ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು. ಈಗಾಗಲೇ ೨ ಏಕರೆ ಜಾಗ ಗುರುತು ಮಾಡಲಾಗಿದೆ. ರೂ.೮ ಕೋಟಿ ಅನುದಾನಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಬೇಡಿಕೆಯಿಡಲಾಗಿದೆ. ಕಳೆದ ೨೦ ವರ್ಷಗಳ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ಸೆಸ್ಕ್ನಿಂದ ಕೊಡಗಿಗೆ ಹೆಚ್ಚಿನ ಅನುದಾನ ಬಂದಿದೆ. ಕೊಡಗಿಗೆ ಪ್ರಥಮವಾಗಿ ೪೫೦ ಕೋಟಿಗೂ ಅಧಿಕ ಅನುದಾನ ಈ ಸಾಲಿನಲ್ಲಿ ಇಲಾಖೆಯಿಂದ ಲಭ್ಯವಾಗಿದೆ ಎಂದು ತಿಳಿಸಿದರು.
ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಿಸಬೇಕು. ಶೀಘ್ರವಾಗಿ ಕಾಮಗಾರಿ ಆರಂಭಿಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಸಂಬAಧಿಸಿದ ಅಭಿಯಂತರರು ಹಾಗೂ ಗುತ್ತಿಗೆದಾರರಿಗೆ ಇದೇ ಸಂದರ್ಭ ಶಾಸಕರು ಸೂಚನೆ ನೀಡಿದರು.
ಸಮುದಾಯ ಭವನಕ್ಕೆ ೫೦ ಲಕ್ಷ: ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯದ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ೫ ಲಕ್ಷ ಅನುದಾನ ಒದಗಿಸಲಾಗಿದೆ. ಅದನ್ನು ಪೂರ್ಣಗೊಳಿಸಲು ಮುಂದಿನ ದಿನಗಳಲ್ಲಿ ೫೦ ಲಕ್ಷ ಅನುದಾನ ಒದಗಿಸಲಾಗುವುದು. ಸ್ಥಳೀಯರು ಸಮುದಾಯ ಭವನವನ್ನು ಹೆಚ್ಚು ಉಪಯೋಗಿಸಿಕೊಳ್ಳಬೇಕೆಂದರು.
ಇಡೀ ರಾಜ್ಯದಲ್ಲಿಯೇ ೨ನೇ ಸಹಕಾರ ಸಂಘ ಶಾಂತಳ್ಳಿಯಲ್ಲಿ ಸ್ಥಾಪನೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಇದೇ ಪ್ರಥಮ ಸಹಕಾರ ಸಂಘ. ಇದನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಸ್ಥಾಪಕರಾದ ಕುರಾದಗೌಡ್ನಮನೆ ದೊಡ್ಡಯ್ಯ ಅವರ ಪುತ್ಥಳಿ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಶಾಸಕರು ಹೇಳಿದರು.
೬೫ ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ : ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಳ್ಳಿಯಲ್ಲಿ ಆರೋಗ್ಯ ಇಲಾಖೆಯ ಮೂಲಕ ರೂ. ೬೫ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಆಯುಷ್ಮಾನ್ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್, ಗ್ರಾಮೀಣ ಪ್ರದೇಶದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಸ್ಥಾಪನೆಯಿಂದ ಸಾರ್ವಜನಿಕರಿಗೆ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ, ಔಷಧೋಪಚಾರಗಳು ದೊರೆಯಲಿವೆ. ಸಮುದಾಯ ಆರೋಗ್ಯ ಅಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಇರುತ್ತಾರೆ. ರಕ್ತ ಪರೀಕ್ಷೆ, ಪ್ರಾಥಮಿಕ ಚಿಕಿತ್ಸೆ, ಸಿಬ್ಬಂದಿಗಳ ವಾಸಕ್ಕೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಬೆಟ್ಟದಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಈ ಆರೋಗ್ಯ ಕೇಂದ್ರ ನಿರ್ಮಾಣದಿಂದ ಆರೋಗ್ಯ ಸಂಬAಧಿತ ಹೆಚ್ಚಿನ ಸೌಲಭ್ಯ ಒದಗಲಿದೆ. ಸಣ್ಣಪುಟ್ಟ ಖಾಯಿಲೆಗಳಿಗೆ ಸ್ಥಳೀಯವಾಗಿ ಸ್ಪಂದನೆ ಲಭಿಸಲಿದೆ. ಆರೋಗ್ಯ ಕೇಂದ್ರದ ಮುಂಭಾಗ ಬಸ್ ನಿಲ್ದಾಣ ನಿರ್ಮಾಣ ಹಾಗೂ ಗುಡ್ಡಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದರು.
ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿರುವ ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಅಳವಡಿಕೆ ಯೋಜನೆ ಪ್ರಗತಿಯಲ್ಲಿದೆ. ಖಾಸಗಿ ಸಹಭಾಗಿತ್ವದೊಂದಿಗೆ ಯೋಜನೆ ಜಾರಿಗೊಳ್ಳಲಿದೆ ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಗೆ ಶಾಸಕರ ನಿಧಿಯಿಂದ ರೂ. ೫ ಲಕ್ಷ ಅನುದಾನ, ಗುಡ್ಡಳ್ಳಿ ರಸ್ತೆ ಅಭಿವೃದ್ಧಿಗೆ ರೂ. ೧೫ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಶಾಸಕ ಮಂತರ್ ಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜು, ಸೆಸ್ಕ್ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಮಚಂದ್ರ, ಗ್ರಾಮದ ಪ್ರಮುಖರಾದ ರಾಜಶೇಖರ್, ರಾಮಚಂದ್ರ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಗ್ರಾ.ಪಂ. ಮಾಜಿ ಅಧ್ಯಕ್ಷ ತಮ್ಮಯ್ಯ, ವಿಎಸ್ಎಸ್ಎನ್ ಅಧ್ಯಕ್ಷ ಶಿವಕುಮಾರ್, ಬೆಟ್ಟದಳ್ಳಿ-ಬೆಟ್ಟದಕೊಪ್ಪ ಗ್ರಾಮ ಸಮಿತಿ ಅಧ್ಯಕ್ಷ ಪ್ರಕಾಶ್, ಸ್ಥಾಯಿ ಸಮಿತಿ ಸದಸ್ಯ ಹರಗ ಪುಟ್ಟರಾಜು, ತಾಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್, ವೈದ್ಯರಾದ ಚಾರುಲತಾ, ಕೆಹೆಚ್ಎಸ್ಆರ್ಡಿಪಿ ಅಭಿಯಂತರ ರಾಕೇಶ್, ಶ್ರೀಕುಮಾರಲಿಂಗೇಶ್ವರ ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಕಾರ್ಯಪ್ಪ, ನಿರ್ದೇಶಕರುಗಳು, ಪ್ರಮುಖರಾದ ವಿ.ಎ. ಲಾರೆನ್ಸ್, ಚೇತನ್ ಸೇರಿದಂತೆ ಶಾಂತಳ್ಳಿ-ಬೆಟ್ಟದಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು. - ವಿಜಯ್