ಮಡಿಕೇರಿ, ಅ. ೨೯: ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಐದು ವರ್ಷಗಳ ಕಾಲ ದುರಾಡಳಿತ ನಡೆಸಿದೆ ಎಂದು ಆರೋಪಿಸಿ ನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಕಚೇರಿ ಬಳಿಯಿಂದ ನಗರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಿಜೆಪಿ ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ನಗರಸಭೆ ಎದುರು ಜಮಾಯಿಸಿ ಬಿಜೆಪಿಯು ಐದು ವರ್ಷಗಳ ಕಾಲ ಜನರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ; ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ನಗರಸಭೆಯಲ್ಲಿ ಬಿಜೆಪಿ ಆಡಳಿತಾವಧಿ ಮುಗಿದಿರುವುದು ನಗರದ ಜನತೆಗೆ ಸಂತಸ ಮೂಡಿಸಿದೆ; ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದರು ಎಂದು ಆರೋಪಿಸಿದರು. ಮುಡಾ ಅಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ, ನಗರಸಭೆಯಲ್ಲಿ ಬಿಜೆಪಿ ಆಡಳಿತ ಜನರ ನಿರೀಕ್ಷೆಗಳನ್ನು, ವಿಶ್ವಾಸಗಳನ್ನು ಉಳಿಸಿಕೊಂಡಿಲ್ಲ. ವೈಯಕ್ತಿಕ ವಿಚಾರಗಳಿಗಾಗಿ ಸಭೆಗಳು ಬಳಕೆಯಾಯಿತೇ ಹೊರತು ಅಭಿವೃದ್ಧಿ ಕುರಿತ ಚರ್ಚೆಗಳು ನಡೆಯಲೇ ಇಲ್ಲ ಎಂದು ದೂರಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ನಗರಸಭೆಯಲ್ಲಿ ಈ ಹಿಂದೆ ಕಾಂಗ್ರೆಸ್ ಉತ್ತಮ ಆಡಳಿತ ನಡೆಸಿತ್ತು. ಆದರೆ ಬಿಜೆಪಿ ಗುಂಪುಗಾರಿಕೆ ಮಾಡುತ್ತಾ ಅಭಿವೃದ್ಧಿಯನ್ನು ನಿರ್ಲಕ್ಷಿಸಿತು ಎಂದು ಆಪಾದಿಸಿದರು.
ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ಸಂಪತ್ ರಾಜ್, ಮೂಡಾ ಸದಸ್ಯರಾದ ಮಿನಾಜ್ ಪ್ರವೀಣ್, ಆರ್.ಪಿ. ಚಂದ್ರಶೇಖರ್, ನಗರಸಭಾ ಮಾಜಿ ಸದಸ್ಯರುಗಳಾದ ಲೀಲಾ ಶೇಷಮ್ಮ, ಶ್ರೀಮತಿ ಬಂಗೇರ, ಉದಯಕುಮಾರ್, ಸದಾ ಮುದ್ದಪ್ಪ, ಚುಮ್ಮಿ ದೇವಯ್ಯ, ಜುಲೇಕಾಬಿ ಮತ್ತಿತರರು ಪಾಲ್ಗೊಂಡಿದ್ದರು.