ಚೆಟ್ಟಳ್ಳಿ, ಅ. ೨೯: ಕಾಫಿಯ ಗುಣಮಟ್ಟವು ಸಂಸ್ಕರಣಾ ಘಟಕ ಅಥವಾ ಹುರಿಯುವ ಹಂತದಲ್ಲಿ ಮಾತ್ರ ನಿರ್ಧಾರ ವಾಗುವುದಿಲ್ಲ. ಬದಲಾಗಿ, ಕಾಫಿ ತೋಟದ ನಿರ್ವಹಣೆಯಿಂದಲೇ ಗುಣಮಟ್ಟದ ಅಡಿಪಾಯ ರೂಪುಗೊಳ್ಳುತ್ತದೆ ಎಂಬ ಸಂದೇಶದೊAದಿಗೆ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ (ಸಿ.ಆರ್.ಎಸ್.ಎಸ್.) ಬೆಳೆಗಾರರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ನಡೆಯಿತು.
ಅ. ೨೭ರಂದು ಸೋಮವಾರಪೇಟೆ ಸಂಪರ್ಕ ವಲಯದ ವತಿಯಿಂದ ಆಯೋಜಿಸಿದ್ದ ‘ಕೃಷಿ ಹಂತದಲ್ಲೇ ಕಾಫಿ ಗುಣಮಟ್ಟದ ಅರಿವು’ ಕಾರ್ಯಕ್ರಮದಲ್ಲಿ ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ ಹಾಗೂ ಶನಿವಾರಸಂತೆ ವ್ಯಾಪ್ತಿಯ ೨೪ ನೋಂದಾಯಿತ ಕಾಫಿ ಬೆಳೆಗಾರರು ಪಾಲ್ಗೊಂಡಿದ್ದರು. ಉತ್ತಮ ಗುಣಮಟ್ಟದ ಸಸಿಗಳ ಆಯ್ಕೆ, ಸೂಕ್ತ ತಳಿಗಳು, ವೈಜ್ಞಾನಿಕ ತೋಟ ನಿರ್ವಹಣೆ, ಮಣ್ಣಿನ ಆರೋಗ್ಯ, ಸಮತೋಲಿತ ಪೋಷಕಾಂಶ ನಿರ್ವಹಣೆ, ಕಟಾವು ಹಾಗೂ ಕಟಾವಿನ ನಂತರದ ಸಂಸ್ಕರಣಾ ಕ್ರಮಗಳ ಕುರಿತು ತಜ್ಞರು ಮಾಹಿತಿ ನೀಡಿದರು. ಕ್ಷೇತ್ರ ಭೇಟಿ ಮೂಲಕ ವಿವಿಧ ಕಾಫಿ ತಳಿಗಳು ಮತ್ತು ಹಣ್ಣುಗಳ ಗುಣಲಕ್ಷಣಗಳನ್ನು ಪರಿಚಯಿಸಲಾಯಿತು. ಕಾಫಿಯ ಗುಣಮಟ್ಟಕ್ಕೆ ಧಕ್ಕೆಯುಂಟುಮಾಡುವ ಸಾಮಾನ್ಯ ದೋಷಗಳು, ಅವುಗಳ ಗುರುತಿಸುವಿಕೆ ಹಾಗೂ ಪರಿಹಾರ ಕ್ರಮಗಳ ಬಗ್ಗೆಯೂ ಪ್ರಾಯೋಗಿಕ ಅರಿವು ಮೂಡಿಸಲಾಯಿತು.
ಕಾಫಿ ಸಂಶೋಧನಾ ಉಪಕೇಂದ್ರದ ಜಂಟಿ ನಿರ್ದೇಶಕ (ಸಂಶೋಧನೆ) ಡಾ. ಡಿ.ಸಿ. ಬಾಬು, ಮಡಿಕೇರಿಯ ಉಪ ನಿರ್ದೇಶಕ ವೈ.ಬಿ. ವೆಂಕಟ್ ರೆಡ್ಡಿ, ಸಸ್ಯ ಅಂಗಾAಶ ಕೃಷಿ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಸಿಕ್ಯೂಐ ಪ್ರಮಾಣೀಕೃತ ಗುಣಮಟ್ಟ ತಜ್ಞೆ ಡಾ. ರಮ್ಯಾ ಎಂ., ಮಣ್ಣಿನ ವಿಜ್ಞಾನಿ ಡಾ. ಎಸ್.ಎ. ನದಾಫ್, ಸೋಮವಾರಪೇಟೆ ಹಿರಿಯ ಸಂಪರ್ಕಾಧಿಕಾರಿ ಉಪೇಂದ್ರ ಕುಮಾರ್ ಸಾಹಾ ಹಾಗೂ ಸುಂಟಿಕೊಪ್ಪ ಕಿರಿಯ ಸಂಪರ್ಕಾಧಿಕಾರಿ ಡಾ. ಅನಿಲ್ ಸಿದರಾಯ್ ಸಿ. ಪಾಲ್ಗೊಂಡಿದ್ದರು. ‘ಕಾಫಿ ಪ್ರಗತಿ’ ಆಶಯದಡಿ ನಡೆದ ಕಾರ್ಯಕ್ರಮವು ತೋಟದ ನಿರ್ವಹಣೆಯಿಂದ ಗುಣಮಟ್ಟದ ಕಾಫಿ ಉತ್ಪಾದನೆಯವರೆಗೆ ವೈಜ್ಞಾನಿಕ ಅರಿವು ಮೂಡಿಸುವತ್ತ ಗಮನಹರಿಸಿತು.