ವೀರಾಜಪೇಟೆ, ಅ. ೨೯: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸಂಘದ ವತಿಯಿಂದ ನವೆಂಬರ್ ೨ ರಂದು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಶಾಲಾ - ಕಾಲೇಜುಗಳಿಗೆ ಮತ್ತು ಸಾರ್ವಜನಿಕರಿಗೆ ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ತಿಳಿಸಿದ್ದಾರೆ.
ಪೂರ್ವಾಹ್ನ ೧೦ ಗಂಟೆಗೆ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಭಾ ಕಾರ್ಯಕ್ರಮ ೧೦.೩೦ ಗಂಟೆಗೆ ನಡೆಯಲಿದ್ದು ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು - ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರವಂಡ ನಾಚಪ್ಪ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಲಂಪಿಯನ್ ಕೂತಂಡ ಪೂಣಚ್ಚ (ಕ್ರೀಡೆ) ಬಾಚುರ ಎಸ್ ಪೂಣಚ್ಚ (ಸೇನೆ), ಚೆನ್ನಯ್ಯನಕೋಟೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಕವಿತಾ ಕೆ.ಡಿ (ಶಿಕ್ಷಣ), ಬಾದುಮಂಡ ಬೀನಾ ಕಾಳಯ್ಯ (ಸಾಹಿತ್ಯ) ಇವರುಗಳನ್ನು ಸನ್ಮಾನಿಸಲಾಗುವುದು.
ತಾಲೂಕು ಮಟ್ಟದ ಸ್ಪರ್ಧಾ ಕಾರ್ಯಕ್ರಮಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಕನ್ನಡ ನಾಡಗೀತೆಗೆ ಸಾಮೂಹಿಕ ನೃತ್ಯ (ಒಂದು ಶಾಲೆಯಿಂದ ೯ ವಿದ್ಯಾರ್ಥಿಗಳ ಒಂದು ತಂಡ), ಕಾಲೇಜು ವಿಭಾಗಕ್ಕೆ ಕನ್ನಡ ನಾಡಗೀತೆಗೆ ಸಾಮೂಹಿಕ ನೃತ್ಯ (ಒಂದು ಕಾಲೇಜಿನಿಂದ ೯ ವಿದ್ಯಾರ್ಥಿಗಳ ಒಂದು ತಂಡ)ಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಸಾರ್ವಜನಿಕರಿಗೆ ಕೊಡವ ಹಾಗೂ ಕನ್ನಡ ಹಾಡು, (ಒಬ್ಬರಿಗೆ ಒಂದು ಹಾಡು ಮಾತ್ರ), ಸ್ಪರ್ಧೆಯಲ್ಲಿ ಭಾಗವಹಿಸುವವರು ಸಂಘದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.