ಭಾಗಮಂಡಲ, ಅ. ೨೮: ತಲಕಾವೇರಿ ಅಭಯಾರಣ್ಯದ ತಲಕಾವೇರಿ ವನ್ಯಜೀವಿ ವಲಯಕ್ಕೆ ಒಳಪಡುವ ಭಾಗಮಂಡಲ ಮೀಸಲು ಅರಣ್ಯ ವಲಯದಲ್ಲಿ ಅಕ್ರಮವಾಗಿ ಪ್ರಾಣಿಗಳ ಬೇಟೆಯಾಡಲು ಯತ್ನಿಸುತ್ತಿದ್ದ ಎಂಟು ಮಂದಿ ಸ್ಥಳೀಯ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕಳ್ಳ ಬೇಟೆಗಾರರ ಪೈಕಿ ಓರ್ವ ತಪ್ಪಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಲಾದ ವಾಹನಗಳು ಹಾಗೂ ಬಂದೂಕು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಡುರಾತ್ರಿ ನುಗ್ಗಿದ ಬೇಟೆಗಾರರು..!
ವನ್ಯಜೀವಿ ಮೀಸಲು ಅರಣ್ಯದಲ್ಲಿ ಅಕ್ರಮ ನುಸುಳುವಿಕೆ ಹಾಗೂ ಪ್ರಾಣಿ ಬೇಟೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ವ್ಯಾಪ್ತಿಯ ಅಕ್ಕಿಕಂಡಿ ಎಂಬಲ್ಲಿ ಅರಣ್ಯ ಇಲಾಖೆಯಿಂದ ಕಳ್ಳಬೇಟೆ ತಡೆ ಶಿಬಿರ ನಿರ್ಮಿಸಲಾಗಿದೆ. ಈ ಶಿಬಿರದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ನಿನ್ನೆ ನಡುರಾತ್ರಿ ವೇಳೆ ಗುಂಡಿನ ಸದ್ದು ಕೇಳಿಸಿದೆ. ಸದ್ದು ಕೇಳಿಬಂದ ಕಡೆಗೆ ಕತ್ತಲಲ್ಲೇ ಇಲಾಖಾ ಸಿಬ್ಬಂದಿಗಳು ಹುಡುಕಾಡುತ್ತಾ ತೆರಳಿದಾಗ ಮೂವರು ಬೇಟೆಗಾರರು ಬಂದೂಕಿನೊAದಿಗೆ ಕಾಡಿನಲ್ಲಿದ್ದುದು ಪತ್ತೆಯಾಗಿದೆ. ಕೂಡಲೇ ಇಲಾಖಾ ಸಿಬ್ಬಂದಿಗಳು ಈರ್ವರನ್ನು ಹಿಡಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಕತ್ತಲಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ.
ವಾಹನದಲ್ಲಿ ಪರಾರಿಯಾಗಲು ಯತ್ನ
ಇತ್ತ ಕಾಡಿನೊಳಗೆ ಬೇರೆ ಕಡೆ ಇದ್ದ ಇನ್ನೂ ಕೆಲವರು ಕಡಿನೊಳಗೆ ಬೇರೊಂದು ಮಾರ್ಗವಾಗಿ ಓಡಿ ತಪ್ಪಿಸಕೊಳ್ಳಲು ಪ್ರಯತ್ನಿಸಿದ್ದಾರೆ. ಬೇಟೆಗಾರರನ್ನು ಹುಡುಕುತ್ತಾ ಬಂದ ಇಲಾಖಾ ಸಿಬ್ಬಂದಿಗಳಿಗೆ ತಾವೂರು ರಸ್ತೆ ಬದಿಯಲ್ಲಿ ಎರಡು ಓಮಿನಿ ಹಾಗೂ ಒಂದು ಮಾರುತಿ ಕಾರು ನಿಂತಿರುವದು ಗೋಚರಿಸಿದೆ. ಹಾಗಾಗಿ ಸಿಬ್ಬಂದಿಗಳು ಅನತಿ ದೂರದಲ್ಲಿ ವಾಹನಗಳನ್ನು ಗಮನಿಸುತ್ತಾ ಕಾದು ಕುಳಿತಿರುವಾಗ ಕತ್ತಲಲ್ಲಿ ಕಾಡಿನಲ್ಲಿ ದಾರಿ ತಪ್ಪಿ ಹೋಗಿದ್ದ ಬೇಟೆಗಾರರು ಕಾಡಿನಲ್ಲಿ ಅಲೆದು ಮುಂಜಾನೆ ವೇಳೆಯಲ್ಲಿ ಬಂದು ವಾಹನದಲ್ಲಿ ಕುಳಿತುಕೊಳ್ಳುತ್ತಿದ್ದ ಸಂದರ್ಭ ಸುತ್ತುವರಿದು ವಾಹನಗಳಲ್ಲಿದ್ದ ಆರು ಮಂದಿಯನ್ನೂ ವಶಕ್ಕೆ ಪಡೆದಿದ್ದಾರೆ.
ಎಂಟು ಮಂದಿಯ ಬಂಧನ
ಭಾಗಮಂಡಲ ಸುತ್ತ ಮುತ್ತಲ ಚರಂಡೇಟಿ, ಸಿಂಗತ್ತೂರು, ಕೊಟ್ಟೂರು ಹಾಗೂ ತಣ್ಣಿಮಾನಿ ಗ್ರಾಮಗಳ ನಿವಾಸಿಗಳಾದ ವಸಂತ, ಕಿಶೋರ್ ಸಿ. ಆರ್, ರೋಷನ್ ಹೆಚ್. ಸಿ ,ಸತೀಶ್ ಪಿ.ಜಿ., ರಾಕೇಶ್ ಕೆ.ಎಂ, ಹರೀಶ್ ಕುಮಾರ್, ಎಸ್. ಪಿ, ಹರೀಶ್ ಪಿ.ಜಿ, ಶ್ರೀಕಾಂತ್ ಬಿ.ಬಿ., ಕೆ.ಆರ್.ಕರುಣೇಶ್ ಸೇರಿದಂತೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಎಂಟು ಮಂದಿಯನ್ನು ಬಂಧಿಸಲಾಗಿದೆ. ಮತ್ತೋರ್ವ ಹೆಚ್.ಪಿ.ವಸಂತ್ಕುಮಾರ್ ಎಂಬಾತ ತಪ್ಪಿಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ವಾಹನ-ವಸ್ತುಗಳು ವಶಕ್ಕೆ
ಬಂದಿತ ಆರೋಪಿಗಳಿಂದ ೩ ವಾಹನಗಳು, ೧ ಸಿಂಗಲ್ ಬ್ಯಾರೆಲ್ ಬಂದೂಕು, ೩ ಕಾಡತೂಸುಗಳು (ಕಾರ್ಟ್ರಿಡ್ಜ್ಗಳು), ತಲೆಗೆ ಕಟ್ಟಿಕೊಳ್ಳುವ ಟಾರ್ಚ್ಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಸಂಜೆ ಮಡಿಕೇರಿಯ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯ ನೇತೃತ್ವವನ್ನು ತಲಕಾವೇರಿ ವನ್ಯಜೀವಿ ಅಭಯಾರಣ್ಯದ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೆಚ್.ಎಸ್. ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ಅಕ್ಕಮ್ಮ ಎನ್.ಎನ್, ಅರಣ್ಯ ವೀಕ್ಷಕರಾದ ಧನಂಜಯ್, ಕಿರಣ್, ವಿವೇಕ್, ಲಕ್ಷ್ಮಣ್, ರಾಜೇಶ್, ಜೀವನ್ ಮತ್ತು ರಾಘವೇಂದ್ರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.