ಮಡಿಕೇರಿ, ಅ. ೨೭:ಕೊಡಗಿನ ಗೌರಮ್ಮ ಅವರು ತಮ್ಮ ಕಾಲಘಟ್ಟದಲ್ಲಿಯೇ ಮಹಿಳಾ ಸಂವೇದನೆ, ಮಹಿಳಾ ಸ್ವಾತಂತ್ರ‍್ಯ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಪ್ರಬುದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದು, ಇಂದಿನ ಮಹಿಳೆಯರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಸಂಶೋಧಕರು ಹಾಗೂ ಗೌರಮ್ಮ ಪ್ರಶಸ್ತಿ ಪುರಸ್ಕೃತರಾದ ಡಾ.ಲಲಿತ ಕೆ.ಪಿ. ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆದ ೨೦೨೬-೨೭ನೇ ಸಾಲಿನ ೨೪ನೇ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಸಣ್ಣ ಕಥೆಗಳ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಡಾ.ಲಲಿತ ಕೆ.ಪಿ ಅವರು ರಚಿಸಿದ “ಕೊಡಗಿನ ಜಾನಪದ ಕಥೆಗಳು ಕೃತಿಗೆ “ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ” ಸ್ವೀಕರಿಸಿ ಮಾತನಾಡಿದರು.

೧೯೩೦ರ ದಶಕದಲ್ಲಿಯೇ ಮಹಿಳಾವಾದದ ಕುರಿತು ಬರೆಯುವ ಧೈರ್ಯ ತೋರಿದ ಗೌರಮ್ಮ ಅವರ ಸಾಧನೆಯನ್ನು ಸ್ಮರಿಸಿದರು. ಆ ಕಾಲದಲ್ಲಿ ಆಧುನಿಕತೆಯ ಪ್ರಭಾವ ಕಡಿಮೆ ಇದ್ದ ಗ್ರಾಮೀಣ ಪರಿಸರದಲ್ಲಿ ಬದುಕಿದ್ದರೂ, ಮಹಿಳೆಯರ ಬದುಕು, ಹಕ್ಕುಗಳು ಮತ್ತು ಸಾಮಾಜಿಕ ಅಸಮಾನತೆಗಳ ಕುರಿತು ಅವರು ವ್ಯಕ್ತಪಡಿಸಿದ ಆಲೋಚನೆಗಳು ದೂರದೃಷ್ಟಿಯಿಂದ ಕೂಡಿದ್ದವು.

ಗೌರಮ್ಮ ಅವರು ಸುಮಾರು ೨೧ ಕಥೆಗಳನ್ನು ರಚಿಸಿದ್ದಾರೆ. ಅವರು ಎಷ್ಟು ಕೃತಿ ಬರೆದಿದ್ದಾರೆ ಎನ್ನುವುದಕ್ಕಿಂತ, ತಮ್ಮ ಬರಹಗಳ ಮೂಲಕ ಯಾವ ವಿಚಾರಗಳನ್ನು ಸಮಾಜಕ್ಕೆ ತಲುಪಿಸಿದ್ದಾರೆ ಎಂಬುದು ಮುಖ್ಯ. ಅವರ ಕಥೆಗಳಲ್ಲಿ ಮಹಿಳಾ ಸಂವೇದನೆಯ ಜೊತೆಗೆ ಸಾಮಾಜಿಕ ವಿಚಾರಗಳೂ ಪ್ರಸ್ತಾಪವಾಗಿವೆ ಎಂದರು.

ತಮ್ಮ ಕೃತಿಗೆ ದೊರೆತ ಪ್ರಶಸ್ತಿಯು ವೈಯಕ್ತಿಕ ಗೌರವ ಮಾತ್ರವಲ್ಲ, ಕೊಡಗಿನ ಸಂಸ್ಕೃತಿ, ಜಾನಪದ, ಮೂಲನಿವಾಸಿಗಳು ಹಾಗೂ ಬುಡಕಟ್ಟು ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸಮುದಾಯಗಳಿಗೆ ಸಂದ ಗೌರವವಾಗಿದೆ. ಮಹಿಳೆಯ ಸೌಂದರ್ಯವನ್ನು ಬಾಹ್ಯ ರೂಪಕ್ಕೆ ಸೀಮಿತಗೊಳಿಸಬಾರದು. ಬೌದ್ಧಿಕ ಸಾಮರ್ಥ್ಯ, ಧೈರ್ಯ, ಸ್ವಾವಲಂಬನೆ, ಆತ್ಮಗೌರವ ಮತ್ತು ಆತ್ಮವಿಶ್ವಾಸವೇ ಮಹಿಳೆಯ ನಿಜವಾದ ಸೌಂದರ್ಯ ಎಂದು ಅಭಿಪ್ರಾಯಪಟ್ಟರು.

ಮಹಿಳೆಯ ಸಾಧನೆಯನ್ನು ನಿರ್ಧರಿಸುವುದು ಆಕೆ ಹುಟ್ಟಿದ ಪರಿಸರ, ಜಾತಿ ಅಥವಾ ಕೌಟುಂಬಿಕ ಹಿನ್ನೆಲೆಯಲ್ಲ. ಆಕೆ ತನ್ನಲ್ಲಿ ಬೆಳೆಸಿಕೊಂಡಿರುವ ಧೈರ್ಯ, ಸ್ಥೆöÊರ್ಯ ಮತ್ತು ಆತ್ಮವಿಶ್ವಾಸವೇ ಸಾಧನೆಗೆ ದಾರಿಯಾಗುತ್ತದೆ. ಇಂದಿನ ಯುವತಿಯರು ತಮ್ಮ ಆರಾಮದಾಯಕ ವಲಯದಿಂದ ಹೊರಬಂದು, ಕನಸುಗಳಿಗೆ ಸ್ಪಷ್ಟ ಗುರಿ ನಿಗದಿಪಡಿಸಿಕೊಂಡು ಅವುಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕು. ಶ್ರೀಮಂತಿಕೆ ಅಥವಾ ಬಡತನದ ಹಿನ್ನೆಲೆಗಿಂತ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕರೆ ನೀಡಿದರು.

ಕೊಡಗಿನ ಗೌರಮ್ಮ ಅವರ ಬದುಕು ಮತ್ತು ಸಾಧನೆ, ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಸಾಧನೆ ಮಾಡಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.

ಕೊಡಗಿನ ಗೌರಮ್ಮ ಅವರ ಸಾಹಿತ್ಯಿಕ ಚಿಂತನೆಗಳು ಮಹಿಳಾ ಸಬಲೀಕರಣಕ್ಕೆ ಪ್ರೇರಣೆ ನೀಡುವುದರ ಜೊತೆಗೆ, ಕೊಡಗಿನ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ವೇಣುಗೋಪಾಲ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಶಿಕ್ಷಣ ಪಡೆದು ಹೊರ ಜಿಲ್ಲೆಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭಾವಂತ ಮಹಿಳೆಯರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ. ಇಂತಹ ಪ್ರಶಸ್ತಿಗಳು ಸಾಧಕರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಯುವಜನರಲ್ಲಿ ಸಾಹಿತ್ಯಾಸಕ್ತಿ ಮತ್ತು ಸಾಧನೆಯ ಹಂಬಲವನ್ನು ಬೆಳೆಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಶಿಕ್ಷಣ ಪಡೆದು, ಬಳಿಕ ಬೇರೆಡೆಗೆ ತೆರಳಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅನೇಕ ಪ್ರತಿಭಾವಂತರಿದ್ದಾರೆ. ವಿಶೇಷವಾಗಿ ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಇನ್ನಷ್ಟು ವಿಸ್ತಾರಗೊಳ್ಳಬೇಕು. ಮೈಸೂರು ಭಾಗ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ನೆಲೆಸಿರುವ ಕೊಡಗಿನ ಸಾಹಿತ್ಯಾಸಕ್ತರು ಹಾಗೂ ಕಥೆಗಾರ್ತಿಯರನ್ನು ಗುರುತಿಸಿ, ಇಂತಹ ವೇದಿಕೆಗಳಿಗೆ ಆಹ್ವಾನಿಸಬೇಕು ಎಂದು ಹೇಳಿದರು.

ಪುಸ್ತಕಗಳು ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸುವುದು ಮತ್ತು ಅವುಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಯುವಜನರಲ್ಲಿ ಓದುವ ಹವ್ಯಾಸ ಬೆಳೆಸುವುದು, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಗೌರಮ್ಮ ದತ್ತಿ ಪ್ರಶಸ್ತಿಯಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರೊಂದಿಗೆ ಬರವಣಿಗೆಯಲ್ಲಿಯೂ ಆಸಕ್ತಿ ತೋರಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದು ಅಗತ್ಯ ಎಂದರು.

ಬರವಣಿಗೆ ಆರಂಭಿಸುವಾಗ ಬರೆಯುವುದು ಸರಿಯೋ, ತಪ್ಪೋ ಎಂಬ ಬಗ್ಗೆ ಅತಿಯಾಗಿ ಆಲೋಚಿಸಬಾರದು. ಮೊದಲು ಬರೆಯಲು ಆರಂಭಿಸಬೇಕು. ನಿರಂತರ ಅಭ್ಯಾಸದಿಂದ ಬರವಣಿಗೆಯ ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು. ಕಾಲೇಜು ವಿದ್ಯಾರ್ಥಿನಿಯರೂ ಈ ನಿಟ್ಟಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ವಿಶ್ರಾಂತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಉಪನ್ಯಾಸ ನೀಡಿ, ಕೊಡಗಿನ ಗೌರಮ್ಮ ಅವರು ಸ್ತಿçÃವಾದಿ ಚಿಂತನೆಗಳ ಬಂಡಾಯ ಕಥೆಗಾರ್ತಿ. ಸ್ತಿçÃವಾದಿ ನೆಲೆಯಲ್ಲಿ ನಿಂತು ಸಾಹಿತ್ಯವನ್ನು ರಚನೆ ಮಾಡಿ ತನ್ನ ತನವನ್ನು ಕಂಡುಕೊAಡಿದ್ದಾರೆ. ಸಾಹಿತ್ಯ ಕೃಷಿಯೊಂದಿಗೆ ತಮ್ಮ ಬದುಕನ್ನು ಸುಲಲಿತವಾಗಿ ನಡೆಸಿಕೊಂಡವರು. ಕೊಡಗಿನ ಗೌರಮ್ಮ ಅವರು ಆಗಿನ ಕಾಲಘಟ್ಟದಲ್ಲೇ ಮಹಿಳಾವಾದವನ್ನು ಕುರಿತು ಬರೆಯುವ ಮೂಲಕ ದೊಡ್ಡ ಮಟ್ಟದ ಧೈರ್ಯವನ್ನು ಪ್ರದರ್ಶಿಸಿದ್ದರು. ಅವರು ಒಟ್ಟು ೨೧ ಕಥೆಗಳನ್ನು ಬರೆದಿದ್ದು, ಮಹಿಳಾ ಸಂವೇದನೆ ಕುರಿತಾಗಿ ತಮ್ಮ ಬರಹಗಳಲ್ಲಿ ಮೂಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ೨೦೨೬-೨೭ನೇ ಸಾಲಿನಲ್ಲಿ ಗೌರಮ್ಮ ಸಣ್ಣಕತೆಗಳ ಸ್ಪರ್ಧೆ ವಿಜೇತರಾದ ಸಂತ ಜೋಸೆಫರ ಕಾನ್ವೆಂಟ್ ಮತ್ತು ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಎಸ್.ಆಕಾAಕ್ಷ (ಪ್ರಥಮ), ಮಡಿಕೇರಿ ಎಎಲ್‌ಜಿ ಕ್ರೆಸೆಂಟ್ ಶಾಲೆಯ ಗುರುಪ್ರಿಯ (ದ್ವಿತೀಯ) ಹಾಗೂ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಪಿ.ಎಸ್.ಯಶಸ್ವಿ (ತೃತೀಯ) ಅವರುಗಳಿಗೆ ಬಹುಮಾನ ಹಾಗೂ ಪರಿತೋಷಕವನ್ನು ನೀಡಿ ಗೌರವಿಸಲಾಯಿತು.

ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ಗೌರಮ್ಮ ಅವರ ಕುಟುಂಬಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಲಿಖಿತ ನಿರೂಪಿಸಿ, ವಂದಿಸಿದರು.