ಚೆಯ್ಯಂಡಾಣೆ, ಅ. ೨೭: ಕೊಡಗು ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಯುವಕ-ಯುವತಿಯರು ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಿದೆ. ವಾಹನ ಚಾಲನಾ ಪರವಾನಗಿ ಪಡೆಯುವ ವಯಸ್ಸಿಗೂ ಮುನ್ನವೇ ಬೈಕ್ಗಳ ಹ್ಯಾಂಡಲ್ ಹಿಡಿಯುತ್ತಿರುವ ಕೆಲವರು, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮೂಲಕ ತಮ್ಮ ಜೀವದ ಜತೆಗೆ ಇತರರ ಜೀವಕ್ಕೂ ಅಪಾಯ ತಂದೊಡ್ಡುತ್ತಿದ್ದಾರೆ ಎಂಬ ಕಳವಳ ವ್ಯಕ್ತವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ಒಂದೇ ಬೈಕ್ನಲ್ಲಿ ಮೂವರು ಸಂಚರಿಸುವ ಟ್ರಿಪಲ್ ರೈಡಿಂಗ್ ಹಾಗೂ ವೇಗದ ಚಾಲನೆಯಂತಹ ನಿಯಮಬಾಹಿರ ವರ್ತನೆಗಳು ಅಪಘಾತಗಳ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
ಪೋಷಕರು ಹೊಣೆಗಾರರು!
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ಪೋಷಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಿದೆ. ಮಕ್ಕಳ ಆಸೆಗೆ ಮಣಿದು ದ್ವಿಚಕ್ರ ವಾಹನಗಳ ಕೀಲಿ ಕೈಗೆ ನೀಡುವುದು ಅವರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ. ವಾಹನ ಚಲಾಯಿಸುವ ವಯಸ್ಸು, ಚಾಲನಾ ಪರವಾನಗಿ ಹಾಗೂ ಸಂಚಾರ ನಿಯಮಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಪೋಷಕರ ಕರ್ತವ್ಯವಾಗಿದೆ.
ಇಂದಿನ ದಿನಗಳಲ್ಲಿ ಅಪ್ರಾಪ್ತ ಯುವತಿಯರೂ ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿರುವುದು ಕಂಡುಬರುತ್ತಿದ್ದು, ಕೆಲವೆಡೆ ಟ್ರಿಪಲ್ ರೈಡಿಂಗ್ನAತಹ ಸಂಚಾರ ನಿಯಮಗಳ ಉಲ್ಲಂಘನೆಯೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಇದು ಯುವಕ-ಯುವತಿಯರಿಗೆ ಸಂಬAಧಿಸಿದ ವಿಷಯ ಮಾತ್ರವಲ್ಲ; ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕರ ಜೀವದ ರಕ್ಷಣೆಗೆ ಸಂಬAಧಿಸಿದ ಗಂಭೀರ ವಿಚಾರವಾಗಿದೆ. ಹೀಗಾಗಿ ಲಿಂಗಭೇದವಿಲ್ಲದೆ ಎಲ್ಲರಿಗೂ ಸಂಚಾರ ನಿಯಮಗಳ ಪಾಲನೆ ಕಡ್ಡಾಯವಾಗಬೇಕು.
ಕಠಿಣ ಕ್ರಮ ಕೈಗೊಳ್ಳಲಿ
ಅಪ್ರಾಪ್ತರ ವಾಹನ ಚಾಲನೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಸಂಬAಧಪಟ್ಟ ಸಾರಿಗೆ ಅಧಿಕಾರಿಗಳು ಜಂಟಿಯಾಗಿ ವಿಶೇಷ ತಪಾಸಣಾ ಅಭಿಯಾನ ನಡೆಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಶಾಲಾ-ಕಾಲೇಜುಗಳ ಸುತ್ತಮುತ್ತ ಹಾಗೂ ಅಪ್ರಾಪ್ತರು ವಾಹನ ಚಲಾಯಿಸುವ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿ ನಿಗಾ ವಹಿಸುವ ಅಗತ್ಯವಿದೆ.
ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸದೆ ಸಂಚರಿಸುವುದು ಹಾಗೂ ಟ್ರಿಪಲ್ ರೈಡಿಂಗ್ನAತಹ ಉಲ್ಲಂಘನೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣಗಳಲ್ಲಿ ಅನ್ವಯಿಸುವ ಕಾನೂನಿನಂತೆ ವಾಹನದ ಮಾಲೀಕರು ಅಥವಾ ಪೋಷಕರ ಹೊಣೆಗಾರಿಕೆಯನ್ನು ಪರಿಶೀಲಿಸಿ, ಸೂಕ್ತ ದಂಡ ಹಾಗೂ ಶಿಕ್ಷೆಯ ಕ್ರಮಗಳನ್ನು ಜಾರಿಗೊಳಿಸಬೇಕು.
ಜಾಲಿ ರೈಡ್, ರೀಲ್ಸ್ ಹುಚ್ಚಾಟ
ಯುವತಿಯರ ಗಮನ ಸೆಳೆಯಲು ಹಾಗೂ ಸ್ನೇಹಿತರ ಮುಂದೆ ತಮ್ಮನ್ನು ಹೀರೋಗಳಂತೆ ಬಿಂಬಿಸಿಕೊಳ್ಳಲು ಕೆಲವು ಅಪ್ರಾಪ್ತ ಯುವಕರು ದ್ವಿಚಕ್ರ ವಾಹನಗಳಲ್ಲಿ ಜಾಲಿ ರೈಡ್ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಪ್ರಸಿದ್ಧಿ ಗಳಿಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಿದ್ದು, ಇಂತಹ ಹುಚ್ಚಾಟಗಳಿಂದ ಅಪಘಾತಗಳು ಸಂಭವಿಸಿರುವ ಉದಾಹರಣೆಗಳೂ ಇವೆ.
ಮುನ್ನೆಚ್ಚರಿಕೆ ಅಗತ್ಯ
ರಸ್ತೆ ಅಪಘಾತಗಳಿಂದ ಅಮೂಲ್ಯ ಜೀವಗಳು ಕಳೆದುಹೋದ ಬಳಿಕ ವಿಷಾದ ವ್ಯಕ್ತಪಡಿಸುವುದಕ್ಕಿಂತ, ಅಪಘಾತಗಳಿಗೆ ಕಾರಣವಾಗುವ ನಿಯಮಬಾಹಿರ ವಾಹನ ಚಾಲನೆಗೆ ಆರಂಭದಲ್ಲೇ ಕಡಿವಾಣ ಹಾಕುವುದು ಮುಖ್ಯವಾಗಿದೆ. ಕೊಡಗು ಜಿಲ್ಲೆಯಾದ್ಯಂತ ಅಪ್ರಾಪ್ತರ ವಾಹನ ಚಾಲನೆ ಕುರಿತು ಪೊಲೀಸ್ ಇಲಾಖೆ ಜನಜಾಗೃತಿ ಮೂಡಿಸುವುದರ ಜತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ಕ್ರಮ ಕೈಗೊಳ್ಳಬೇಕಿದೆ.
ಅಪ್ರಾಪ್ತರ ಕೈಗೆ ವಾಹನ ನೀಡದಿರುವುದು ಪೋಷಕರ ಜವಾಬ್ದಾರಿ; ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಕರ್ತವ್ಯ. ರಸ್ತೆ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗದಿದ್ದರೆ, ನಿರ್ಲಕ್ಷ್ಯವು ಅನೇಕ ಕುಟುಂಬಗಳ ನೆಮ್ಮದಿಗೆ ಧಕ್ಕೆ ತರಬಹುದು.
ಕೊಡಗು ಜಿಲ್ಲೆಯಲ್ಲಿ ಅಪ್ರಾಪ್ತರ ವಾಹನ ಚಾಲನೆಗೆ ಸಂಪೂರ್ಣ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಕಾನೂನಿನ ಭಯದ ಜತೆಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಮೂಲಕ ಯುವ ಸಮುದಾಯವನ್ನು ಅಪಾಯದಿಂದ ದೂರವಿಡುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಿದೆ.
- ಅಶ್ರಫ್