ಪೊನ್ನಂಪೇಟೆ, ಅ. ೨೭: ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೇರಿಯ ತೋಟವೊಂದರಲ್ಲಿ ಇತ್ತೀಚೆಗೆ ಅಕ್ರಮ ಬಾಂಗ್ಲಾದೇಶಿ ವಲಸಿಗರು ಪತ್ತೆಯಾದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಅನ್ನಪೂರ್ಣ ಎಸ್.ಎಸ್. ಅವರ ನೇತೃತ್ವದ ತಂಡದಿAದ ನಿನ್ನೆ ಬಾಳೆಲೆ ಸಂತೆಯಲ್ಲಿ ದಿಢೀರ್ ತಪಾಸಣೆ ನಡೆಸಲಾಯಿತು. ತಪಾಸಣೆ ವೇಳೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರ ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲಿಸಲಾಯಿತು.

ಕಾಫಿನಾಡು ಕೊಡಗಿಗೆ ಪ್ರತಿವರ್ಷ ಅಸ್ಸಾಂ, ಪಶ್ಚಿಮ ಬಂಗಾಳದಿAದ ಸಾವಿರಾರು ಕಾರ್ಮಿಕರು ಬರುತ್ತಾರೆ. ಅವರ ಮಧ್ಯೆ ಯಾವುದೇ ದಾಖಲೆ ಇಲ್ಲದೆ ಬಾಂಗ್ಲಾದಿAದ ಬಂದ ಅಕ್ರಮ ವಲಸಿಗರು ನುಸುಳಿದರೆ, ಅದು ಕೇವಲ ಕಾರ್ಮಿಕರ ಸಮಸ್ಯೆಯಾಗಿ ಉಳಿಯುವುದಿಲ್ಲ, ಅದು ದೇಶದ ಭದ್ರತೆಯ ಪ್ರಶ್ನೆಯಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಡಗಿನಲ್ಲಿ ಕಾರ್ಮಿಕರ ಕೊರತೆ ಎದುರಾಗಿದ್ದು, ತೋಟದ ಮಾಲೀಕರು ಹೊರ ರಾಜ್ಯದ ಕಾರ್ಮಿಕರ ಮೇಲೆ ಅವಲಂಬಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಭದ್ರತಾ ದೃಷ್ಟಿಯಿಂದ ಪೊನ್ನಂಪೇಟೆ ಠಾಣಾಧಿಕಾರಿ ಅನ್ನಪೂರ್ಣ ಅವರು ತೋಟದ ಮಾಲೀಕರ ಸಹಕಾರ ಕೋರಿದ್ದಾರೆ.

ಹೊರ ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ಕರೆತಂದರೆ ಅವರ ಆಧಾರ್ ಕಾರ್ಡ್ ಜೆರಾಕ್ಸ್, ಫೋಟೋ, ಮೊಬೈಲ್ ನಂಬರ್ ಅನ್ನು ಪೊಲೀಸ್ ಠಾಣೆಗೆ ನೀಡಬೇಕು. ಆಧಾರ್ ಜೊತೆಗೆ ವೋಟರ್ ಐಡಿ ಅಥವಾ ಬ್ಯಾಂಕ್ ಪಾಸ್‌ಬುಕ್ ಕೂಡ ಪರಿಶೀಲಿಸಬೇಕು. ಅನುಮಾನ ಬಂದರೆ ತಕ್ಷಣ ೧೧೨ ಅಥವಾ ಪೊನ್ನಂಪೇಟೆ ಠಾಣೆಗೆ ಕರೆ ಮಾಡಬೇಕು. ಕಾರ್ಮಿಕರನ್ನು ಪೂರೈಸುವ ಮಧ್ಯವರ್ತಿಗಳು ಅಥವಾ ಮೇಸ್ತಿçಗಳ ವಿವರವನ್ನೂ ಪೊಲೀಸರಿಗೆ ನೀಡಬೇಕು. ಅನೇಕ ಬಾರಿ ಕಮಿಷನ್ ಆಸೆಗೆ ಮೇಸ್ತಿçಗಳು ದಾಖಲೆ ಇಲ್ಲದವರನ್ನು ತಂದು ಬಿಡುತ್ತಾರೆ. ದಾಖಲೆ ಇಲ್ಲದ ಯಾರಿಗೂ ತೋಟದ ಲೈನ್ ಮನೆಯಲ್ಲಿ ಆಶ್ರಯ ನೀಡಬಾರದು.

ಕಾಫಿ ಕೊಯ್ಲು ಆರಂಭವಾಗಲಿದ್ದು ಮುಂದಿನ ದಿನಗಳಲ್ಲಿ ಇಂತಹ ತಪಾಸಣೆ ನಿರಂತರವಾಗಿ ನಡೆಯಲಿದೆ ಎಂದು ಠಾಣಾಧಿಕಾರಿ ಅನ್ನಪೂರ್ಣ ತಿಳಿಸಿದ್ದಾರೆ. ಈಗಾಗಲೇ ಕೆಲವು ಮಾಲೀಕರು ಮಾಹಿತಿ ನೀಡಿದ್ದು, ಹಲವರು ಮಾಹಿತಿ ನೀಡಿಲ್ಲ. ವಲಸಿಗರಿಂದ ಮುಂದೆ ಯಾವುದೇ ಅಹಿತಕರ ಘಟನೆ ನಡೆದರೆ ಮಾಹಿತಿ ನೀಡದ ತೋಟ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಸೂಚನೆ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ಠಾಣಾಧಿಕಾರಿ ಅರುಣ್, ಸಿಬ್ಬಂದಿಗಳಾದ ಮಹಮ್ಮದ್ ಆಲಿ, ವೇಣುಗೋಪಾಲ್, ಸಣ್ಣಸ್ವಾಮಿ, ರೂಪಿತ್, ಬೀರಲಿಂಗ ಪಾಲ್ಗೊಂಡಿದ್ದರು.

- ಚನ್ನನಾಯಕ