ಗೋಣಿಕೊಪ್ಪಲು, ಅ. ೨೬: ಪೊನ್ನಂಪೇಟೆ ಅಮ್ಮಕೊಡವ ಕಾವೇರಿ ಮಹಿಳಾ ಸಂಘ ವತಿಯಿಂದ ಕೊಡಗು ಕಿತ್ತಾಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾವೇರಿ ತೀರ್ಥಪೂಜೆ ಹಾಗೂ ಸಂಘದ ಮಹಾಸಭಾ ಕಾರ್ಯಕ್ರಮದಲ್ಲಿ ತಲಕಾವೇರಿ ಸ್ಥಾನದಲ್ಲಿ ಅಮ್ಮ ಕೊಡವರೇ ಅರ್ಚಕರಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅಮ್ಮಕೊಡವ ಜನಾಂಗದ ಬಾನಂಡ ಎನ್.ಪ್ರಥ್ಯು ಅವರನ್ನು ನೇಮಕ ಮಾಡಿರುವುದು ಅಮ್ಮಕೊಡವ ಜನಾಂಗಕ್ಕೆ ದೊರೆತ ಫಲವಾಗಿದೆ. ಕಾವೇರಿ ಕ್ಷೇತ್ರದಲ್ಲಿ ಮೂಲ ಅರ್ಚಕರಾಗಿ ನೀಡುತ್ತಿದ್ದ ಸೇವೆ ಮತ್ತೆ ಲಭಿಸಬೇಕಾಗಬೇಕು ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಂಘದ ಅಧ್ಯಕ್ಷೆ ಅಮ್ಮತ್ತಿರ ರೇವತಿ ಪರಮೇಶ್ವರ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಾತನಾಡಿ ಈಗಾಗಲೇ ಅಮ್ಮಕೊಡವ ಜನಾಂಗಕ್ಕೆ ದೊರೆತಿರುವ ಅಧ್ಯಕ್ಷ ಸ್ಥಾನ ಅಮ್ಮಕೊಡವತಿಯರ ಕಾವೇರಿ ತೀರ್ಥ ಪೂಜೆಯ ಫಲವಾಗಿದೆ. ಇದರಂತೆ ಮುಂದೆ ಅರ್ಚಕ ಸ್ಥಾನ ಮರಳಿ ಲಭಿಸಬೇಕು. ಇದಕ್ಕೆ ಕಾವೇರಿ, ಈಶ್ವರ, ಇಗ್ಗುತ್ತಪ್ಪ ಅನುಗ್ರಹ ಇರಲಿ ಎಂದು ಹೇಳಿದರು. ಸಾಕಷ್ಟು ವರ್ಷಗಳಿಂದ ಸಂಘದಿAದ ಕಾವೇರಿ ತೀರ್ಥಪೂಜೆಯನ್ನು ಆಚರಿಸಲಾಗುತ್ತಿದ್ದು, ಇದರಿಂದ ಅಮ್ಮಕೊಡವರಿಗೆ ದೇವರ ಅನುಗ್ರಹ ಸಿಕ್ಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸರ್ಕಾರಿ ನೌಕರರ ಕಲ್ಯಾಣ ಸಮನ್ವಯ ಸಮಿತಿ ಲೆಕ್ಕಪತ್ರ ಅಧಿಕಾರಿ ಅಚ್ಚಿಯಂಡ ವೀಣಾ ಚಂದ್ರಶೇಖರ್ ಮಾತನಾಡಿ, ಕಾವೇರಿ ಸ್ಥಾನದಲ್ಲಿ ಅಮ್ಮಕೊಡವರು ಅರ್ಚಕರಾಗಿ ನಡೆಸುತ್ತಿದ್ದ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಹಿರಿಯರಿಂದ ತಿಳಿದುಕೊಳ್ಳಲಾಗಿದೆ. ಕಾವೇರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನ ಲಭಿಸಿರುವುದು ಅಮ್ಮಕೊಡವ ಜನಾಂಗಕ್ಕೆ ವಿಶೇಷ ಗೌರವವಾಗಿದೆ. ಕಾವೇರಿ ಸೇವೆಗೆ ಅವಕಾಶ ಸಿಗುವಂತಾಗಲಿ ಎಂದು ಹಾರೈಸಿದರು. ಪಾಲಕರು ಮಕ್ಕಳಿಗೆ ನೀಡುತ್ತಿರುವ ಕಾಳಜಿಯಿಂದ ಅಮ್ಮಕೊಡವ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಕೇಂದ್ರ ಸರ್ಕಾರಿ ನೌಕÀರಿ ಗಿಟ್ಟಿಸಿಕೊಳ್ಳಲು ಸೂಕ್ತ ತರಬೇತಿ, ಶಿಕ್ಷಣ ಪಡೆಯಲು ಮುಂದಾಗಬೇಕು. ಇದರಿಂದ ಜನಾಂಗ ಮತ್ತು ಕುಟುಂಬದಲ್ಲಿ ಸಾಕ್ಷಾತ್ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಬಾಚಮಾಡ ಗೌರಮ್ಮ ಮಾತನಾಡಿ, ಕಾವೇರಿ ಸ್ಥಾನದಲ್ಲಿ ಅಮ್ಮಕೊಡವರು ಪೂಜೆ ನಡೆಸುತ್ತಿದ್ದ ಬಗ್ಗೆ ಪಟ್ಟೋಲೆ ಪಳಮೆಯ ಗ್ರಂಥದಲ್ಲಿ ಉಲ್ಲೇಖವಿದೆ. ಅಮ್ಮಕೊಡವರ ಮೂಲ ಅರಿವು ಕೂಡ ಮುಖ್ಯವಾಗಿದೆ. ಸ್ಕಂದ ಪುರಾಣದಲ್ಲಿ ಅಮ್ಮಕೊಡವರ ಅರ್ಚಕ ಸ್ಥಾನದ ಬಗ್ಗೆ ಉಲ್ಲೇಖವಿದೆ. ಇದರಂತೆ ಅಮ್ಮಕೊಡವರು ಉಪ ಜಾತಿ ಅಲ್ಲ ಅರಿವು ಮುಖ್ಯ. ಅಮ್ಮಕೊಡವ ಜನಾಂಗ ಕ್ಷೀಣಿಸುತ್ತಿರುವ ಆತಂಕದ ಬಗ್ಗೆ ಎಚ್ಚರ ಅವಶ್ಯವಾಗಿದೆ ಎಂದರು.

ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್. ಪ್ರಥ್ಯು ಸನ್ಮಾನ ಸ್ವೀಕರಿಸಿ ಮಾತನಾಡಿ, ಅಮ್ಮಕೊಡವ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಆರ್ಥಿಕ ಬೆಂಬಲ ದೊರೆತಿದೆ. ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಮುಖಾಂತರÀ ಸಮಾಜದ ಕಟ್ಟಡದ ತಡೆಗೋಡೆಗೆ ೧ ಕೋಟಿ ರೂ. ಅನುದಾನ ನೀಡಿದ್ದಾರೆ. ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ೨೫ ಲಕ್ಷ ಅನುದಾನ ವಿಶೇಷವಾಗಿ ದೊರೆತಿದೆ. ಜನಾಂಗದವರು ಕೂಡ ಆರ್ಥಿಕ ಸಹಾಯ ನೀಡಿ ಸಮಾಜದ ನಿರ್ಮಾಣಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದರು. ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನ ದೊರಕಲು ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಶಾಸಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಮುಖಂಡ ಆಪಟ್ಟೀರ ಟಾಟು ಮೊಣ್ಣಪ್ಪ ಅವರುಗಳು ಮುಖ್ಯ ಕಾರಣವಾಗಿದ್ದಾರೆ ಎಂದರು.

ವಿವಿಧ ಸ್ಪರ್ಧೆ

ಕಾರ್ಯಕ್ರಮ ಅಂಗವಾಗಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡೆಗಳು ನಡೆದವು.ಮಹಿಳೆಯರಿಗೆ ಆಟೋಟ ಸ್ಪರ್ಧೆ ನಡೆಯಿತು. ತಟ್ಟೆಯಲ್ಲಿ ಬಳೆ ಇಟ್ಟು ಕಾಳು ಹೆಕ್ಕುವುದು, ಪೆನ್ನಿಗೆ ಮುಚ್ಚಳ ಹಾಕುವುದು, ಹೌಸಿ ಹೌಸಿ, ತೀರ್ಥಯಾತ್ರೆ, ಲಕ್ಕಿಡಿಪ್, ಮಕ್ಕಳಿಗೆ ಬಲೂನ್ ಒಡೆಯುವ ಸ್ಪರ್ಧೆ ನಡೆಸಲಾಯಿತು.

ವಿಜೇತರು: ತೀರ್ಥಯಾತ್ರೆ ಸ್ಪರ್ಧೆಯಲ್ಲಿ ಅಮ್ಮತ್ತಿರ ಆರತಿ ಸುರೇಶ್ ಪ್ರಥಮ, ಬಾನಂಡ ಶೋಭಾ ದ್ವಿತೀಯ, ಅಚ್ಚೀಯಂಡ ಸವಿತಾ ತೃತೀಯ ಸ್ಥಾನ ಪಡೆದುಕೊಂಡರು. ಬಲ್ಯಂಡ ಕಾವ್ಯ ಲಕ್ಷ್ಮಿ ವಿನ್ನರ್ ಪಡೆದರು. ಪೆನ್ನಿಗೆ ಮುಚ್ಚಳ ಹಾಕುವುದರಲ್ಲಿ ರೋಹಿಣಿ (ಪ್ರ), ಪವಿತ್ರ (ದ್ವಿ), ರೀಟಾ (ತೃ), ತಟ್ಟೆಗೆ ಬಳೆ ಹಾಕುವವರಲ್ಲಿ ರಾಣಿ (ಪ್ರ), ಉಷಾ (ದ್ವಿ), ಸರೀನಾ ತೃತೀಯ ಸ್ಥಾನ ಪಡೆದರು. ಮಕ್ಕಳ ಆಟದ ಸ್ಪರ್ಧೆಯಲ್ಲಿ ಕೃತಿಕ (ಪ್ರ), ವೃಕ್ಷಿಕ (ದ್ವಿ), ರಿಯಾನ್ಸ್ (ತೃ) ಬಹುಮಾನ ಪಡೆದರು.

ಸಂಘದ ಕಾರ್ಯದರ್ಶಿ ಅಮ್ಮತ್ತಿರ ಆರತಿ ಸುರೇಶ್ ಕಳೆದ ಮಹಾಸಭೆ ವರದಿ ಹಾಗೂ ಸಂಘದ ವರದಿ, ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ಲತ, ಕಿಶೋರಿ, ಪ್ರೇಮ ಪ್ರಾರ್ಥಿಸಿ, ಉಪಾಧ್ಯಕ್ಷೆ ವೀಣಾ ಸುಬ್ರಮಣಿ ಸ್ವಾಗತಿಸಿ, ಬಾಚಮಾಡ ದಿವ್ಯ ವಂದಿಸಿದರು.ಮನ್ನಕ್ಕಮನೆ ಅಶ್ವಿನಿ, ಹೆಮ್ಮಚ್ಚಿಮನೆ ಧರಣಿ ಬಹುಮಾನ ವಿತರಿಸಿದರು. ಕಾವೇರಿಗೆ ವಿಶೇಷ ಆರತಿ ನೆರವೇರಿಸಿ ಮಹಿಳೆಯರು ಪರಸ್ಪರ ಬಳೆ, ಕುಂಕುಮ ಹಂಚಿಕೊAಡರು, ಪ್ರಸಾದ

ಹಂಚಲಾಯಿತು. - ಹೆಚ್.ಕೆ.ಜಗದೀಶ್