ಮಡಿಕೇರಿ, ಅ. ೨೬: ಪ್ರಸ್ತುತ ಕರಿಮೆಣಸು ಧಾರಣೆಯಲ್ಲಿ ಒಂದಷ್ಟು ಹೆಚ್ಚಳವಾಗುತ್ತಿರುವುದು ಬೆಳೆಗಾರರಲ್ಲಿ ಉತ್ಸಾಹ ಮೂಡಿಸುತ್ತಿದೆ. ಆದರೆ ಇದರ ಬೆನ್ನಲ್ಲೇ ಪ್ರಸಕ್ತ ವರ್ಷ ಫಸಲು ಕೊರತೆ ಕಂಡುಬAದಿರುವುದು ಈ ಉತ್ಸಾಹಕ್ಕೆ ತಣ್ಣೀರೆರಚುವಂತಾಗಿದೆ.
ಸಾಧಾರಣವಾಗಿ ದೀಪಾವಳಿ ಸಂದರ್ಭದಲ್ಲಿ ಒಂದಷ್ಟು ಬೆಳೆ ಹೆಚ್ಚಳವಾಗುತ್ತದೆ ಎಂಬದು ವ್ಯಾಪಾರಿಗಳ ಅಭಿಪ್ರಾಯ. ಆದರೆ ಈ ವರ್ಷದ ಸನ್ನಿವೇಶ ಬೇರೆಯೇ ಆಗಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಳೆದ ಜೂನ್ - ಜುಲೈ ತಿಂಗಳಿನಲ್ಲಿ ಕರಿಮೆಣಸು ತಿರುಳು ಕಟ್ಟುವ ಸಂದರ್ಭದಲ್ಲಿ ಸೂಕ್ತ ಮಳೆಯಾಗಿಲ್ಲ. ಆರಂಭದಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ಕರಿಮೆಣಸು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ಅಧಿಕವಾಗಿ ಕರಿಮೆಣಸು ಉತ್ಪಾದಿಸುವ ಕೊಡಗು ಸೇರಿದಂತೆ, ಚಿಕ್ಕಮಗಳೂರು, ಕೇರಳ ರಾಜ್ಯದಲ್ಲಿ ಕೂಡ ಮುಂದಿನ ಫಸಲು ಬಹುತೇಕ ಕೈಕೊಟ್ಟಿದೆ. ಇದು ಸದ್ಯಕ್ಕೆ ಮುಂದಿನ ಫಸಲು ಎನ್ನಲಾಗುತ್ತಿದೆಯಾದರೂ ಪ್ರಸ್ತುತ ಬೇಡಿಕೆ ಹೆಚ್ಚಿದ್ದು, ನಿರೀಕ್ಷಿತ ಮಾಲು ಲಭ್ಯವಾಗುತ್ತಿಲ್ಲ.
ಇದರಿಂದಾಗಿ ಈ ಸಮಯದಲ್ಲಿ ಧಾರಣೆಯಲ್ಲಿ ಹೆಚ್ಚಳವಾಗಿದೆ ಎಂಬದು ಅನುಭವಸ್ಥರ ಮಾತು. ಕಳೆದ ಹಲವು ಸಮಯದಿಂದ ೬೫೦ ರಿಂದ ೬೮೦ರ ದರವನ್ನೇ ಕಂಡಿದ್ದ ಕರಿಮೆಣಸಿಗೆ ಇದೀಗ ಕಳೆದ ಹತ್ತಿಪ್ಪತ್ತು ದಿನಗಳಿಂದ ರೂ. ೭೪೦ ರಿಂದ ರೂ. ೭೫೦ ರಷ್ಟು ಧಾರಣೆ ಲಭ್ಯವಾಗುತ್ತಿದೆ.
ಆಂತರಿಕ ಮಾರುಕಟ್ಟೆಯಲ್ಲಿ ಅಗತ್ಯ ದಾಸ್ತಾನು ಸಿಗದಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯಕ್ಕೆ ಶ್ರೀಲಂಕಾ ಸೇರಿದಂತೆ ಇತರೆಡೆಗಳಿಂದ ಆಮದಾಗುತ್ತಿಲ್ಲ. ಇದೂ ಕೂಡ ಪ್ರಸ್ತುತದ ಬೆಲೆ ಹೆಚ್ಚಳಕ್ಕೆ ಒಂದು ಕಾರಣವಾಗಿದೆ ಎಂಬುದು ವ್ಯಾಪಾರಸ್ಥರ ಮಾಹಿತಿ. ಇದು ಸದ್ಯದ ಬೆಳೆವಣಿಗೆಯಾದರೂ ಈ ಬಾರಿ ಮುಂಗಾರಿನ ಹೊಡೆತದಿಂದ ಮುಂದಿನ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮವಾಗಿರುವದಂತೂ ಬೆಳೆಗಾರರ ಚಿಂತೆ ಹೆಚ್ಚಿಸಿದೆ.