ಬೆಂಗಳೂರು, ಅ. ೨೪: ಸರ್ಕಾರದ ಇಲಾಖೆಯೊಂದರಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ದಿನಗೂಲಿ ನೌಕರರಾಗಿ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ, ನಿವೃತ್ತರಾಗಿದ್ದಾರೆಂಬ ಕಾರಣಕ್ಕೆ ಅವರ ಸೇವೆಗಳನ್ನು ಖಾಯಂಗೊಳಿಸುವ ಕೋರಿಕೆ ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಅಲ್ಲದೆ, ೩೪ ವರ್ಷಗಳ ಸೇವೆಯನ್ನು ಪರಿಗಣಿಸಿ ನೌಕರಿಯನ್ನು ಕ್ರಮಬದ್ಧಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ದಾಂಡೇಲಿ ನಗರಸಭೆಯಲ್ಲಿ ಬೆರಳಚ್ಚುಗಾರರಾಗಿ ೧೯೮೮ರಲ್ಲಿ ಸೇವೆಗೆ ಸೇರಿ, ೨೦೨೨ರಲ್ಲಿ ನಿವೃತ್ತರಾಗಿರುವ ಗೀತಾ ರಾಮಪ್ಪ ತೇರದಾಳ ಎಂಬವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ತಾತ್ಕಾಲಿಕ ಉದ್ಯೋಗದ ನೆಪದಲ್ಲಿ ಕಾರ್ಮಿಕರ ಶಾಶ್ವತ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಉದ್ಯೋಗಿಯ ದುರ್ಬಲತೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಶಾಶ್ವತ ಸಾಧನವನ್ನಾಗಿ ಪರಿವರ್ತಿಸಲಾಗದು. ಉದ್ಯೋಗಿ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ಸೇವಾವಧಿಯಲ್ಲಿ ಉದ್ಭವಿಸಿದ್ದ ನ್ಯಾಯಸಮ್ಮತ ಹಕ್ಕುಗಳು ಅಥವಾ ಖಾಯಂಗೊಳಿಸುವ ಕೋರಿಕೆಯು ಅಸ್ತಿತ್ವ ಕಳೆದುಕೊಳ್ಳುವುದಿಲ್ಲ. ಮೂರು ದಶಕಗಳ ಕಾಲ ಸರ್ಕಾರದ ವ್ಯವಸ್ಥೆಯಲ್ಲಿ ಶ್ರಮ ಪಡೆದುಕೊಂಡು, ಕೊನೆಗೆ ನಿವೃತ್ತಿಯ ಹೊಸ್ತಿಲಲ್ಲಿ ಖಾಯಂಗೊಳಿಸಲು ನಿರಾಕರಿಸುವುದು ಶೋಷಣೆಗೆ ಸಮನಾಗುತ್ತದೆ. ಈ ನಡೆ ಮಾದರಿ ಸರ್ಕಾರದ ಲಕ್ಷಣವಂತೂ ಅಲ್ಲ ಎಂದು ಪೀಠ ಹೇಳಿದೆ.
ಅರ್ಜಿದಾರರು ಅಕ್ರಮವಾಗಿ ನೇಮಕವಾಗಿಲ್ಲ. ಸರ್ಕಾರ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕವಾಗಿದ್ದಾರೆ. ಟೈಪಿಸ್ಟ್ ಮತ್ತು ಕಂಪ್ಯೂಟರ್ ಆಪರೇಟರ್ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇದೇ ಕಾರಣದಿಂದ ಅವರ ಸೇವೆಯನ್ನು ಖಾಯಂಗೊಳಿಸುವAತೆ ಪುರಸಭೆಯಿಂದ ಶಿಫಾರಸು ಮಾಡಲಾಗಿದೆ. ಆದರೂ ಖಾಯಂ ಮಾಡಲಿಲ್ಲ. ಉದ್ಯೋಗದ ಸಮಯದಲ್ಲಿ ಸಿಗಬೇಕಾದ ಪ್ರಯೋಜನಗಳನ್ನು ಕಾನೂನುಬಾಹಿರವಾಗಿ ನಿರಾಕರಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ದೀರ್ಘಕಾಲದವರೆಗೆ ದಿನಗೂಲಿ ನೌಕರರಾಗಿ ಸೇವೆ ಪಡೆದುಕೊಂಡು, ಕೊನೆಗೆ ನಿವೃತ್ತಿಯ ಹೊಸ್ತಿಲಲ್ಲಿ ಖಾಯಂಗೊಳಿಸಲು ನಿರಾಕರಿಸುವುದು ಮತ್ತು ನ್ಯಾಯಾಲಯದ ಅಲೆದಾಟಕ್ಕೆ ದೂಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದ ಶೋಷಣೆಯಾಗಿದೆ ಎಂದು ಪೀಠ ಇದೇ ವೇಳೆ ಹೇಳಿದೆ. ಜೀವಿತಾವಧಿಯ ಬಹುಪಾಲು ಭಾಗವನ್ನು ದಿನಗೂಲಿ ನೌಕರರಾಗಿ ಕಳೆದುಕೊಳ್ಳುವಂತೆ ಮಾಡಿ, ಖಾಯಂ ಉದ್ಯೋಗದ ಭದ್ರತೆ ನೀಡದೆ, ದಶಕಗಳ ಕಾಲ ಸೇವೆ ಸಲ್ಲಿಸಿದ ನಂತರ ನ್ಯಾಯಕ್ಕಾಗಿ ನ್ಯಾಯಾಲಯದ ಕಾರಿಡಾರ್ಗಳಲ್ಲಿ ಅಲೆಯುವಂತೆ ಮಾಡುವ ಪರಿಸ್ಥಿತಿ ಸರ್ಕಾರದ ಕಡೆಯಿಂದ ಬರಬಾರದು. ಆದ್ದರಿಂದ ಅರ್ಜಿದಾರರು ೧೦ ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಾಂಕದಿAದ ಅನ್ವಯವಾಗುವಂತೆ ಅವರ ಸೇವೆಯನ್ನು ಕ್ರಮಬದ್ಧಗೊಳಿಸಬೇಕು. ೩೪ ವರ್ಷಗಳ ಸಂಪೂರ್ಣ ಸೇವೆಯನ್ನು ಪರಿಗಣಿಸಿ ಪಿಂಚಣಿ, ಗ್ರಾಚ್ಯುಟಿ ಹಾಗೂ ಇಳಿವಯಸ್ಸಿನ ಎಲ್ಲಾ ಸೌಲಭ್ಯಗಳನ್ನು ಮರುಪರಿಗಣಿಸಿ ಮುಂದಿನ ೮ ವಾರಗಳೊಳಗೆ ಆದೇಶ ಹೊರಡಿಸಬೇಕು. ಈ ಆದೇಶ ಪಾಲನೆಯಲ್ಲಿ ತಪ್ಪಿದಲ್ಲಿ ವೇತನದ ಬಾಕಿ ಮೊತ್ತಕ್ಕೆ ಶೇ.೫೦ರಷ್ಟು ಬಡ್ಡಿ ಪಾವತಿಸಬೇಕು ಎಂದು ಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಪ್ರಸ್ತುತ ೬೪ ವರ್ಷದವರಾಗಿದ್ದು ಅರ್ಜಿದಾರರಾದ ಗೀತಾ ಅವರು ಉದ್ಯೋಗ ವಿನಿಮಯ ಕೇಂದ್ರದ ಮೂಲಕ, ಪರಿಶಿಷ್ಟ ಜಾತಿಗೆ ಮೀಸಲಾದ ಖಾಲಿ ಹುದ್ದೆಗೆ ೧೯೮೮ರ ಜೂನ್ ೮ರಂದು ದಾಂಡೇಲಿ ನಗರಸಭೆಯಲ್ಲಿ ದಿನಗೂಲಿ ಆಧಾರದ ನೇಮಕವಾಗಿದ್ದರು. ಸುಮಾರು ೨೪ ವರ್ಷಗಳ ಸೇವೆ ಸಲ್ಲಿಸಿದ ಬಳಿಕ ತನ್ನನ್ನು ಖಾಯಂಗೊಳಿಸುವAತೆ ಕೋರಿ ಮನವಿ ಸಲ್ಲಿಸಿದ್ದರು. ಇದಕ್ಕೆ ಅವರು ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯಿAದ ಶಿಫಾರಸು ಪಡೆದುಕೊಳ್ಳಲಾಗಿತ್ತು. ಅರ್ಜಿದಾರರ ಜೊತೆ ನೇಮಕವಾದ ೧೨ ಮಂದಿ ದಿನಗೂಲಿ ನೌಕರರನ್ನು ಖಾಯಂಗೊಳಿಸಲಾಗಿತ್ತು. ಆದರೆ, ೩೪ ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೂ ಅರ್ಜಿದಾರರನ್ನು ಮಾತ್ರ ಖಾಯಂಗೊಳಿಸಿರಲಿಲ್ಲ.
ಹಲವು ಮನವಿಗಳನ್ನು ಸಲ್ಲಿಸಿದ್ದರೂ ಶಿಫಾರಸುಗಳು ಶಿಫಾರಸುಗಳಾಗಿಯೇ ಉಳಿದಿದ್ದವು. ಆದರೆ, ಹುದ್ದೆ ಮಾತ್ರ ಖಾಯಂ ಅಗಲಿಲ್ಲ. ಅಂತಿಮವಾಗಿ ೩೪ ವರ್ಷಗಳ ಸೇವೆಯ ಬಳಿಕ ೨೦೨೨ರ ಜೂನ್ನಲ್ಲಿ ಅವರು ನಿವೃತ್ತರಾಗಿದ್ದರು. ರಾಜ್ಯ ಸರ್ಕಾರ ಸುಮಾರು ೩೪ ವರ್ಷಗಳ ಕಾಲ ಅವರ ಶ್ರಮವನ್ನು ಪಡೆದುಕೊಂಡಿದ್ದರೂ ಉದ್ಯೋಗವನ್ನು ಖಾಯಂ ಮಾಡುವುದಕ್ಕೆ ಮುಂದಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಅರ್ಜಿದಾರರು ಈಗಾಗಲೇ ನಿವೃತ್ತಿ ವಯಸ್ಸು ತಲುಪಿರುವುದರಿಂದ ಅವರ ಸೇವೆಯನ್ನು ಕ್ರಮ ಬದ್ಧಗೊಳಿಸುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ನಿವೃತ್ತಿಯ ನಂತರ ಸೇವೆಯನ್ನು ಕ್ರಮಬದ್ಧಗೊಳಿಸುವ ಕೋರಿಕೆ ಅಸ್ತಿತ್ವದಲ್ಲಿಲ್ಲ ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಅವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.