ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಅ. ೨೫: ಸರ್ಕಾರದಿಂದ ಮಂಜೂರಾದ ಜಮೀನಿನ ೧೫ ವರ್ಷಗಳ ಮಾರಾಟ ನಿಷೇಧ ಅವಧಿ ಪೂರ್ಣಗೊಂಡ ಬಳಿಕ ಆ ಜಮೀನಿನ ಮಾಲೀಕತ್ವ ಸಂಪೂರ್ಣವಾಗಿ ಮಂಜೂರಾದವರಿಗೆ ಇರಲಿದೆ.

ನಿಯಮಾವಳಿಗಳಂತೆ ನಿಗದಿತ ಅವಧಿ ಮುಗಿದ ಬಳಿಕ ಜಮೀನನ್ನು ಪರಭಾರೆ ಮಾಡಿದ್ದರೆ, ಅದನ್ನು ‘ಷರತ್ತು ಉಲ್ಲಂಘನೆ' ಎಂದು ಪರಿಗಣಿಸಿ ದಶಕಗಳ ಹಿಂದೆ ಮಂಜೂರಾಗಿದ್ದ ಜಮೀನನ್ನು ಹಿಂಪಡೆಯಲು ಕಂದಾಯ ಅಧಿಕಾರಿಗಳಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಡಿ. ಸುನಿತಾ ಹಾಗೂ ಅವರ ಪತಿ ಎಂ.ಎಸ್. ಬಸವರಾಜು ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ಪೀಠ, ಕಂದಾಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಜಮೀನು ಮಂಜೂರಾತಿ ರದ್ದುಗೊಳಿಸಿ ಹೊರಡಿಸಿದ್ದ ಆದೇಶ ರದ್ದುಗೊಳಿಸಿ ಆದೇಶಿಸಿದೆ. ಜಮೀನು ಮಂಜೂರು ಮಾಡುವ ಸಂದರ್ಭ ೧೫ ವರ್ಷಗಳ ಮಾರಾಟ ನಿಷೇಧ ವಿಧಿಸಲಾಗಿದೆ. ಈ ಅವಧಿ ಮುಗಿದ ತಕ್ಷಣವೇ ಆ ಜಮೀನಿನ ಮೇಲಿನ ಸರ್ಕಾರದ ಷರತ್ತುಬದ್ಧ ಹಕ್ಕು ಮುಕ್ತಾಯಗೊಳ್ಳುತ್ತದೆ. ತದನಂತರ ಅದು ಪೂರ್ಣಪ್ರಮಾಣದ ಮಂಜೂರಾದವರ ಜಮೀನಾಗಿ ಬದಲಾಗುತ್ತದೆ. ಆ ಬಳಿಕ ಜಮೀನುದಾರ ಅದನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಲು ಅಥವಾ ಮಾರಾಟ ಮಾಡಲು ಸ್ವತಂತ್ರನಾಗಿರುತ್ತಾನೆ ಎಂದು ಪೀಠ ಹೇಳಿದೆ.

ಒಂದು ವೇಳೆ ಷರತ್ತು ಉಲ್ಲಂಘನೆಯಾಗಿದ್ದರೆ ಕಂದಾಯ ಇಲಾಖೆ ತಕ್ಷಣವೇ ಅಥವಾ ಸಮಂಜಸವಾದ ಅವಧಿಯಲ್ಲಿ ಕ್ರಮ ಕೈಗೊಳ್ಳಬೇಕು. ಜಮೀನು ಮಂಜೂರಾದ ೩೬ ವರ್ಷಗಳ ನಂತರ ಹಾಗೂ ಮಾರಾಟವಾದ ೧೩ ವರ್ಷಗಳ ನಂತರ ಮಂಜೂರಾತಿ ರದ್ದುಪಡಿಸಲು ಹೊರಟಿರುವುದು ಕಾನೂನುಬಾಹಿರ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ. ಕರ್ನಾಟಕ ಭೂ ಮಂಜೂರಾತಿ ೧೯೬೯ ರ ನಿಯಮ ೨೫ ರ ಪ್ರಕಾರ, ಸುಳ್ಳು ಮಾಹಿತಿ ನೀಡಿ ಅಥವಾ ವಂಚನೆಯಿAದ ಜಮೀನು ಪಡೆದಿದ್ದರೆ ಮಾತ್ರ ಮಂಜೂರಾತಿ ರದ್ದುಗೊಳಿಸಲು ಅವಕಾಶವಿದೆ. ನಿಯಮ ೨೫ ರಲ್ಲಿ ಅವಕಾಶವಿಲ್ಲದಿದ್ದಾಗ, ಜಿಲ್ಲಾಧಿಕಾರಿಗಳು ಕಂದಾಯ ಕಾಯ್ದೆಯ ಸೆಕ್ಷನ್ ೨೫ ರ ಅಡಿಯಲ್ಲಿರುವ ವಿವೇಚನಾಧಿಕಾರವನ್ನು ಬಳಸಿ ಮಂಜೂರಾತಿ ರದ್ದುಗೊಳಿಸಲು ಬರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಅಲ್ಲದೆ, ನ್ಯಾಯಾಲಯವು ಕಂದಾಯ ಇಲಾಖೆಯ ಎಲ್ಲಾ ಪ್ರಸ್ತಾಪಿತ ವರದಿಗಳು ಮತ್ತು ಜಿಲ್ಲಾಧಿಕಾರಿಗಳ ಜಮೀನು ಮುಟ್ಟುಗೋಲು ಆದೇಶವನ್ನು ವಜಾಗೊಳಿಸಿದ್ದು, ಅರ್ಜಿದಾರರ ಜಮೀನಿನ ಹಕ್ಕನ್ನು ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ : ಚಳ್ಳಕೆರೆಯ ಸರ್ವೆ ನಂಬರ್ ೨೭೭ ರಲ್ಲಿನ ೨೦ ಗುಂಟೆ ಜಮೀನನ್ನು ವಿಶೇಷ ಉಪ ವಿಭಾಗಾಧಿಕಾರಿಗಳು ೧೯೮೪-೮೫ರಲ್ಲಿ 'ಪ್ರಗತಿ ಗ್ರಾಮೀಣ ಉದ್ಯೋಗ ಸಂಘ'ಕ್ಕೆ ಮಂಜೂರು ಮಾಡಿದ್ದರು. ಈ ವೇಳೆ ೧೫ ವರ್ಷಗಳ ಕಾಲ ಜಮೀನನ್ನು ಯಾರಿಗೂ ಪರಭಾರೆ ಮಾಡಬಾರದು ಎಂಬ ಷರತ್ತು ವಿಧಿಸಲಾಗಿತ್ತು.

೧೯೮೮ರಲ್ಲಿ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ತಹಶೀಲ್ದಾರ್ ಸೂಕ್ತ ಶುಲ್ಕ ಪಡೆದು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅನುಮತಿ ನೀಡಿದ್ದರು. ಇದಾದ ಬಳಿಕ ೧೫ ವರ್ಷಗಳ ನಿಷೇಧಿತ ಅವಧಿ ಮುಗಿದ ೮ ವರ್ಷಗಳ ನಂತರ (ಅಂದರೆ ಜಮೀನು ಮಂಜೂರಾದ ೨೩ ವರ್ಷಗಳ ಬಳಿಕ), ೨೦೦೭ರಲ್ಲಿ ಸಂಘವು ನಿಯಮಾನುಸಾರ ಎಂ.ಎಸ್. ಬಸವರಾಜು ಅವರಿಗೆ ಕ್ರಯ ಪತ್ರದ ಮೂಲಕ ಜಮೀನು ಮಾರಾಟ ಮಾಡಿತು. ಪುರಸಭೆಯಲ್ಲೂ ಇವರ ಹೆಸರಿಗೆ ಖಾತೆ ಬದಲಾವಣೆಯಾಗಿತ್ತು. ೨೦೦೯ರಲ್ಲಿ ಬಸವರಾಜು ಅವರು ತಮ್ಮ ಪತ್ನಿ ಸುನೀತಾ ಅವರಿಗೆ ದಾನಪತ್ರದ ಮೂಲಕ ಜಮೀನನ್ನು ಹಸ್ತಾಂತರಿಸಿದ್ದರು.

ಜಮೀನು ಮಾರಾಟವಾದ ೧೩ ವರ್ಷಗಳ ಬಳಿಕ ಅಂದರೆ ೨೦೨೦ ರಲ್ಲಿ ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ತಹಶೀಲ್ದಾರ್ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿಗಳು ಷರತ್ತು ಉಲ್ಲಂಘನೆಯಾಗಿದೆ ಎಂದು ಹೇಳಿ ಜಮೀನು ಮಂಜೂರಾತಿಯನ್ನು ರದ್ದುಗೊಳಿಸಿ, ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಮಾಲೀಕರಾದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.