ವೀರಾಜಪೇಟೆ, ಅ. ೨೫: ನವ ದಿನಗಳ ಕಾಲ ದೇವಿ ವಿವಿಧ ರೂಪವನ್ನು ವರ್ಣಿಸಿ ವೃತ್ತಾಕಾರದಲ್ಲಿ ಗರ್ಭ ನೃತ್ಯದ ಮೂಲಕ ತಮ್ಮ ಭಕ್ತಿಯನ್ನು ಪ್ರಕಟಿಸುವ ನವರಾತ್ರಿ ಉತ್ಸವ್ ರಾಜಸ್ತಾನ್ ವಿಷ್ಣು ಸಮಾಜ್‌ನಿಂದ ಶ್ರಧ್ದಾ ಭಕ್ತಿಯಿಂದ ಆಚರಣೆಗೊಂಡಿತು.

ರಾಜಾಸ್ಥಾನ್ ವಿಷ್ಣು ಸಮಾಜ್ ವೀರಾಜಪೇಟೆ ವತಿಯಿಂದ ನವರಾತ್ರಿ ಉತ್ಸವ್ ಆಚರಣೆಯ ಅಂಗವಾಗಿ ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ವಿಜಯದಶಮಿ ಆರಂಭವಾದ ದಿನದಿಂದ ಗರ್ಭ ನೃತ್ಯ, ದೇವಿಯನ್ನು ಸ್ತುತಿಸಿ ದೇವಿಯ ಭಕ್ತಿಗೀತೆಗಳನ್ನು ವೃತ್ತಾಕಾರದಲ್ಲಿ ಪುರುಷರು, ಮಹಿಳೆಯರು, ಯುವಕ ಯುವತಿಯರು ಕೋಲಾಟದ (ದಾಂಡಿಯ) ಮೂಲಕ ಪ್ರದರ್ಶನ ಮಾಡುವುದಾಗಿದೆ. ಕೊನೆಯ ದಿನದಂದು ದೇವಿಯ ವೇಶ ಧರಿಸಿ... ಒಂದು ಕೈಯಲ್ಲಿ ಆಗ್ನಿಕುಂಡ ಮತ್ತೊಂದು ಕೈಯಲ್ಲಿ ಕತ್ತಿಯನ್ನು ಹೊತ್ತು ಕೋಲಾಟ ಪ್ರದರ್ಶನ ಮಾಡುತ್ತಿದ್ದ ಜನಾಂಗ ಬಾಂಧವರೊAದಿಗೆ ಬೆರೆತು ದೇವಿಯು ಎಲ್ಲರೊಂದಿಗಿರುವ ಸಂಕೇತವನ್ನು ಸೂಚಿಸಿದರು. ನವ ದಿನಗಳ ರಾತ್ರಿ ರಾಜಸ್ಥಾನದ ವಿವಿಧ ಖಾದ್ಯಗಳನ್ನು ಉಣಬಡಿಸಲಾಯಿತು. ರಾಜಸ್ಥಾನ್ ವಿಷ್ಣು ಸಮಾಜ್ ಯುವ ಘಟಕದ ವತಿಯಿಂದ ಈ ಬಾರಿ ಸಂಪ್ರದಾಯಕ ವೇಷಭೂಷಣ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಾಂಗ ಬಾಂಧವರಿಗೆ ವಿಶೇಷ ಗೌರವದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನವದಿನಗಳು ನಡೆದ ಕಾರ್ಯಕ್ರಮದಲ್ಲಿ ರಾಜಸ್ಥಾನ್ ವಿಷ್ಣು ಸಮಾಜ್ ವೀರಾಜಪೇಟೆ ಘಟಕ ಪ್ರಮುಖರಾದ ಮಹೇಂದ್ರ ಸಿಂಗ್ ಪುರೋಹಿತ್, ಎಸ್.ಕೆ. ಮದನ್ ಲಾಲ್, ಪರಾಸ್ ರಥೋಡ್, ಭಗವಾನ್ ಸಿಂಗ್, ಭಗತ್ ಸಿಂಗ್, ಸುರೇಶ್ ಚೌದ್ರಿ, ಚೇಲಾರಾಮ್ ಚೌದ್ರಿ ಹಾಗೂ ಜನಾಂಗದ ಬಾಂಧವರು, ಮಹಿಳೆಯರು, ಯುವಕ ಯುವತಿಯರು, ಮಕ್ಕಳು ಹಾಜರಿದ್ದರು.